ವಿಶ್ವಕಪ್ ಗೆದ್ದ ಭಾರತ, ಸಿನಿ ತಾರೆಯರು ಸಂಭ್ರಮಿಸಿದ್ದು ಹೀಗೆ

|

Updated on: Jun 30, 2024 | 8:18 AM

ಭಾರತ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ ಗೆದ್ದಿದೆ. ಮೈದಾನದಲ್ಲಿ ಭಾರತ ತಂಡ ತೋರಿದ ಅದ್ಭುತ ಸಾಧನೆಗೆ ಸಿನಿಮಾ ಸೆಲೆಬ್ರಿಟಿಗಳು ಥ್ರಿಲ್ ಆಗಿದ್ದು, ಹಲವರು ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಭಾರತ ಕ್ರಿಕೆಟ್ ತಂಡದ ಗೆಲುವನ್ನು ಸಿನಿಮಾ ಸೆಲೆಬ್ರಿಟಿಗಳು ಹೇಗೆ ಸಂಭ್ರಮಿಸಿದರು?

ವಿಶ್ವಕಪ್ ಗೆದ್ದ ಭಾರತ, ಸಿನಿ ತಾರೆಯರು ಸಂಭ್ರಮಿಸಿದ್ದು ಹೀಗೆ
Follow us on

ಭಾರತ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ ಜಯಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ವೆಸ್ಟ್ ಇಂಡೀಸ್​ನ ಬಾರ್ಬಡೋಸ್​ನಲ್ಲಿ ನಡೆದ ಅತ್ಯಂತ ರೋಚಕ ಪಂದ್ಯದ ಕೊನೆಯ ಓವರ್​ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ತಂಡದಿಂದ ಜಯವನ್ನು ಕಿತ್ತುಕೊಂಡಿದೆ. ಇಡೀ ಟೂರ್ನಿಯನ್ನು ಭಾರತ ತಂಡ ತೋರಿದ ಸಂಘಟಿತ ಹೋರಾಟಕ್ಕೆ ಜಯ ಸಂದಿದ್ದು, 13 ವರ್ಷಗಳ ಬಳಿಕ ಭಾರತ ಕ್ರಿಕೆಟ್ ತಂಡ ಮತ್ತೊಮ್ಮೆ ವಿಶ್ವಚಾಂಪಿಯನ್ ಎನಿಸಿಕೊಂಡಿದೆ. ಭಾರತ ತಂಡದ ಸಾಧನೆಗೆ ಭಾರತೀಯರು ಥ್ರಿಲ್ ಆಗಿದ್ದರೆ ಮಧ್ಯರಾತ್ರಿ ರಸ್ತೆಗಿಳಿದು ಗೆಲುವು ಸಂಭ್ರಮಿಸಿದ್ದಾರೆ. ಅಂತೆಯೇ ಸಿನಿಮಾ ಸೆಲೆಬ್ರಿಟಿಗಳು ಸಹ ಭಾರತ ಕ್ರಿಕೆಟ್ ತಂಡದ ಈ ಅದ್ಭುತ ವಿಜಯವನ್ನು ತಮ್ಮದೇ ರೀತಿಯಲ್ಲಿ ಬಣ್ಣಿಸಿ ತಂಡದ ಸಾಧನೆಗೆ ಅಭಿನಂದಿಸಿದ್ದಾರೆ.

ಕ್ರಿಕೆಟ್​ ಪ್ರೇಮಿ ನಟ ಸುದೀಪ್ ರಾತ್ರಿಯೇ ಟ್ವೀಟ್ ಮಾಡಿದ್ದು, ‘ರಾಹುಲ್ ದ್ರಾವಿಡ್​ ಅವರಿಗೆ ಅದ್ಭುತವಾಗಿ ವಿದಾಯ ಹೇಳಲಾಗಿದೆ. ಬಹಳ ಬಹಳ ಬಹಳ ಹೆಮ್ಮೆಯಾಗುತ್ತಿದೆ ಸರ್, ಘನತೆಯ ಶಿಖರ ಇದು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಅವರುಗಳು ನಮ್ಮ ಹೀರೋಗಳಾಗಿ ಹೊರಹೊಮ್ಮಿದ್ದಕ್ಕೆ ಧನ್ಯಾವದ. ಹಾಗೂ ಆ ಕೊನೆಯ ಓವರ್​ನಲ್ಲಿ ಅದ್ಭುತ ಕ್ಯಾಚ್ ಪಡೆದ ಸೂರ್ಯಕುಮಾರ್ ಯಾದವ್​ಗೆ ವಿಶೇಷ ಧನ್ಯವಾದ’ ಎಂದಿದ್ದಾರೆ ಸುದೀಪ್.

ಭಾರತದ ಗೆಲುವು ಕಂಡು ಅಮಿತಾಬ್ ಬಚ್ಚನ್ ಆನಂದ ಬಾಷ್ಪ ಹರಿಸಿದ್ದಾರೆ. ತಂಡ ಗೆದ್ದ ಕೂಡಲೇ ಟ್ವೀಟ್ ಮಾಡಿರುವ ಅಮಿತಾಬ್ ಬಚ್ಚನ್, ‘ಕಣ್ಣೀರು ಹರಿಯುತ್ತಿದೆ. ಭಾರತ ತಂಡದ ಆಟಗಾರರ ಕಣ್ಣೀರಿನ ಜೊತೆಗೆ’ ಎಂದಿದ್ದಾರೆ ಬಚ್ಚನ್. ಮುಂದುವರೆದು, ‘ಭಾರತ ವಿಶ್ವ ಚಾಂಪಿಯನ್’, ‘ಭಾರತ ಮಾತೆಗೆ ಜಯವಾಗಲಿ’, ‘ಜಯ ಹಿಂದ್ ಜಯ ಹಿಂದ್ ಜಯ ಹಿಂದ್’ ಎಂದು ಟ್ವೀಟ್ ಮಾಡಿದ್ದಾರೆ ಬಚ್ಚನ್.

ಇದನ್ನೂ ಓದಿ:ವಿಶ್ವಕಪ್ ಜಯಿಸಿದ ಭಾರತ, ದರ್ಶನ್​ಗೆ ಧನ್ಯವಾದ ಹೇಳುತ್ತಿರುವ ನೆಟ್ಟಿಗರು

ಇನ್ನು ನಟ, ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಹ ಟ್ವೀಟ್ ಮಾಡಿದ್ದು, ಸರಳವಾಗಿ, ‘ಭಾರತ ತಂಡಕ್ಕೆ ಅಭಿನಂದನೆಗಳು’ ಎಂದಿದ್ದಾರೆ. ಭಾರತ ಕ್ರಿಕೆಟ್ ತಂಡದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಸಹ ಟ್ವೀಟ್ ಮಾಡಿದ್ದು, ‘ಭಾರತವು ವಿಶ್ವದ ಮೊದಲ ಸ್ಥಾನದಲ್ಲಿ ನಿಂತಿದೆ. 17 ವರ್ಷಗಳ ಬಳಿಕ ಅತ್ಯದ್ಭುತವಾಗಿ ಭಾರತ ತಂಡ ವಿಶ್ವಕಪ್ ಗೆದ್ದಿದೆ. ವಿರಾಟ್, ಅಕ್ಷರ್ ಪಟೇಲ್, ಬುಮ್ರಾ, ಹಾರ್ದಿಕ್, ಅಶ್ವದೀಪ್ ಮತ್ತು ನಾಯಕ ರೋಹಿತ್ ಶರ್ಮಾ ಅವರ ಅತ್ಯದ್ಭುತ ಆಟಕ್ಕೆ ಅಭಿನಂದನೆಗಳು’ ಎಂದಿದ್ದಾರೆ ಚಿರು.

ನಟ ಮಹೇಶ್ ಬಾಬು ಭಾರತದ ವಿಜಯದ ಬಗ್ಗೆ ಟ್ವೀಟ್ ಮಾಡಿದ್ದು, ‘ಇದು ನಮ್ಮದು, ನೀಲಿ ಉಡುಪು ತೊಟ್ಟ ನಮ್ಮ ಹೀರೋಗಳು ಇನ್ನು ಮುಂದೆ ವಿಶ್ವ ವಿಜೇತರು ಎಂದು ಕರೆಸಿಕೊಳ್ಳುತ್ತಾರೆ. ಆಟದ ಮೈದಾನದಲ್ಲಿ ನೀವು ತೋರಿದ ಛಾತಿಗೆ ತಲೆ ಬಾಗಿ ವಂದಿಸುತ್ತೇವೆ. ಸೂರ್ಯಕುಮಾರ್ ಯಾದವ್ ನೀವು ಹಿಡಿದ ಕ್ಯಾಚ್ ಕ್ರಿಕೆಟ್ ಇತಿಹಾಸವನ್ನು ಸೇರಿ ಆಗಿದೆ. ಈ ಐತಿಹಾಸಿಕ ಜಯದ ಬಗ್ಗೆ ಅತೀವ ಹೆಮ್ಮೆಯಿದೆ’ ಎಂದಿದ್ದಾರೆ.

ರಾಮ್ ಚರಣ್ ತೇಜ, ಜೂ ಎನ್​ಟಿಆರ್, ರಣ್ವೀರ್ ಸಿಂಗ್ ಸೇರಿದಂತೆ ಇನ್ನೂ ಹಲವು ಸಿನಿಮಾ ಸೆಲೆಬ್ರಿಟಿಗಳು ಭಾರತ ಕ್ರಿಕೆಟ್ ತಂಡದ ಅತ್ಯದ್ಭುತವಾದ ವಿಜಯಕ್ಕೆ ಟ್ವೀಟ್ ಮಾಡಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ