ಸಿನಿಮಾ: 5ಡಿ. ನಿರ್ಮಾಣ: ಸ್ವಾತಿ ಕುಮಾರ್. ನಿರ್ದೇಶನ: ಎಸ್. ನಾರಾಯಣ್. ಪಾತ್ರವರ್ಗ: ಆದಿತ್ಯ, ಅದಿತಿ ಪ್ರಭುದೇವ, ಎಸ್. ನಾರಾಯಣ್, ಜ್ಯೋತಿ ರೈ ಮುಂತಾದವರು. ಸ್ಟಾರ್: 3/5
ಲವ್ ಸ್ಟೋರಿ ಮತ್ತು ಕೌಟುಂಬಿಕ ಕಥಾಹಂದರದ ಕಥೆಗಳನ್ನು ತೆರೆಗೆ ತರುವ ಮೂಲಕ ಫೇಮಸ್ ಆದವರು ಎಸ್. ನಾರಾಯಣ್. ಇನ್ನು, ಕೆಲವು ಕಾಮಿಡಿ ಸಿನಿಮಾಗಳ ಮೂಲಕ ಅವರು ಜನರನ್ನು ರಂಜಿಸಿದ್ದಾರೆ. ಹಾಗಾಗಿ ಎಸ್. ನಾರಾಯಣ್ (S Narayan) ಅವರ ಸಿನಿಮಾ ಎಂದರೆ ಹೀಗೆಯೇ ಇರಬಹುದು ಎಂದು ಪ್ರೇಕ್ಷಕರು ಸುಲಭವಾಗಿ ಊಹಿಸಿಬಿಡಬಹುದು. ಆದರೆ ಈಗ ಅವರು ಪಥ ಬದಲಿಸಿದ್ದಾರೆ. ಹೌದು, ‘5ಡಿ’ ಸಿನಿಮಾದಲ್ಲಿ (5D movie) ಬೇರೆಯದೇ ರೀತಿಯ ಒಂದು ಕಥೆ ಹೇಳಿದ್ದಾರೆ. ಹಾಗಾಗಿ ಪ್ರೇಕ್ಷಕರಿಗೆ ಅಚ್ಚರಿ ಎದುರಾಗುತ್ತದೆ. ನಿಜವಾಗಿಯೂ ಇದು ಎಸ್. ನಾರಾಯಣ್ ನಿರ್ದೇಶನದ ಚಿತ್ರವೇ ಎಂಬ ಪ್ರಶ್ನೆ ಮೂಡುವಷ್ಟು ಭಿನ್ನವಾಗಿದೆ ‘5ಡಿ’ ಸಿನಿಮಾ. ಈ ಸಿನಿಮಾದಲ್ಲಿ ನಟ ಆದಿತ್ಯ (Aditya) ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಫೆಬ್ರವರಿ 16ರಂದು ಈ ಸಿನಿಮಾ ತೆರೆಕಂಡಿದೆ.
ಚಿತ್ರರಂಗದಲ್ಲಿ ಒಂದೆರಡು ಸಿನಿಮಾಗಳನ್ನು ನಿರ್ದೇಶಿಸುವುದೇ ಕಷ್ಟದ ಕೆಲಸ. ಹೀಗಿರುವಾಗ ಎಸ್. ನಾರಾಯಣ್ ಅವರು ಬರೋಬ್ಬರಿ 50 ಸಿನಿಮಾಗಳಿಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ವಿಷ್ಣುವರ್ಧನ್, ರಾಜ್ಕುಮಾರ್ ಅವರಂತಹ ದಿಗ್ಗಜ ನಟರಿಗೆ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅವರು ನಿರ್ದೇಶನ ಮಾಡಿರುವ 50ನೇ ಸಿನಿಮಾ ‘5ಡಿ’. ಈ ಚಿತ್ರದಲ್ಲಿ ನಿಮಗೆ ಹಳೇ ಎಸ್. ನಾರಾಯಣ್ ಅವರ ಛಾಪು ಕಾಣಿಸುವುದಿಲ್ಲ. ಬೇರೆಯದೇ ರೀತಿಯ ಸಿನಿಮಾವನ್ನು ಅವರು ಪ್ರೇಕ್ಷಕರ ಮುಂದಿಟ್ಟಿದ್ದಾರೆ.
ಈಗಾಗಲೇ ಅನೇಕ ಬಗೆಯ ಮಾಫಿಯಾಗಳ ಬಗ್ಗೆ ಸಿನಿಮಾಗಳು ಮೂಡಿಬಂದಿವೆ. ಈಗ ಬ್ಲಡ್ ಮಾಫಿಯಾದ ಕುರಿತು ಎಸ್. ನಾರಾಯಣ್ ಅವರು ‘5ಡಿ’ ಸಿನಿಮಾ ಮಾಡಿದ್ದಾರೆ. ಜನರ ಜೀವ ಉಳಿಸಲು ರಕ್ತದಾನ ಮಾಡಲಾಗುತ್ತದೆ. ಅದರ ಹಿಂದೆ ಇರಬಹುದಾದ ಕರಾಳ ಮಾಫಿಯಾವನ್ನು ಒಂದು ಕಾಲ್ಪನಿಕ ಕಥೆಯ ಮೂಲಕ ಎಸ್. ನಾರಾಯಣ್ ಅವರು ಈ ಸಿನಿಮಾದಲ್ಲಿ ತೋರಿಸಿದ್ದಾರೆ. ಆ ಮೂಲಕ ಪ್ರೇಕ್ಷಕರಿಗೆ ಒಂದು ಮೆಸೇಜ್ ನೀಡಿದ್ದಾರೆ.
Shakhahaari Review: ‘ಶಾಖಾಹಾರಿ’ ಸಿನಿಮಾದಲ್ಲಿ ಹಲವು ಟ್ವಿಸ್ಟ್; ರಂಗಾಯಣ ರಘು ಬೆಸ್ಟ್
ನಿರ್ದೇಶಕನಾಗಿ ಮಾತ್ರವಲ್ಲದೇ ನಟನಾಗಿಯೂ ಫೇಮಸ್ ಆದವರು ಎಸ್. ನಾರಾಯಣ್. ನಟನಾಗಿ ಅವರು ಕಾಮಿಡಿ ಪಾತ್ರಗಳನ್ನು ಮಾಡಿದ್ದೇ ಹೆಚ್ಚು. ಈ ಬಾರಿ ಅವರು ‘5ಡಿ’ ಸಿನಿಮಾದಲ್ಲಿ ಓರ್ವ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ನಡೆಯುತ್ತಿರುವ ಸರಣಿ ಕೊಲೆಗಳ ರಹಸ್ಯವನ್ನು ಭೇದಿಸಲು ಬರುವ ಪೊಲೀಸ್ ಆಫೀಸರ್ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ‘ಪೊಲೀಸ್ನವನಿಗೆ ದಿಲ್ ಇದ್ದರೆ ಸಾಲದು, ಧಿಮಾಕೂ ಇರಬೇಕು’ ಎಂದು ಡೈಲಾಗ್ ಹೊಡೆಯುತ್ತ ಅವರು ಗಮನ ಸೆಳೆದಿದ್ದಾರೆ. ನಟ ಆದಿತ್ಯ ಅವರು ಈ ಸಿನಿಮಾದ ಹೀರೋ. ಇದು ಅವರು ನಟಿಸಿರುವ 25ನೇ ಸಿನಿಮಾ. ಅವರ ಜೊತೆ ಅದಿತಿ ಪ್ರಭುದೇವ ತೆರೆಹಂಚಿಕೊಂಡಿದ್ದಾರೆ. ಇನ್ನೊಂದು ಪ್ರಮುಖ ಪಾತ್ರದಲ್ಲಿ ಜ್ಯೋತಿ ರೈ ಅಭಿನಯಿಸಿದ್ದಾರೆ. ಅದಿತಿ ಪ್ರಭುದೇವ ಅವರ ಪಾತ್ರ ಕೂಡ ಡಿಫರೆಂಟ್ ಆಗಿದೆ. ಆ ಮೂಲಕ ಅವರು ತಮ್ಮ ಅಭಿಮಾನಿಗಳಿಗೆ ಚೇಂಜ್ ನೀಡಲು ಪ್ರಯತ್ನಿಸಿದ್ದಾರೆ.
KTM Movie Review: ದೀಕ್ಷಿತ್ ಶೆಟ್ಟಿ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾದ ‘ಕೆಟಿಎಂ’
‘1 ಟು 100’ ಬ್ಯಾನರ್ ಮೂಲಕ ಸ್ವಾತಿ ಕುಮಾರ್ ಅವರು ‘5ಡಿ’ ಸಿನಿಮಾವನ್ನು ನಿರ್ಮಿಸಿದ್ದಾರೆ. ನಿರ್ದೇಶನದ ಜೊತೆಗೆ ಚಿತ್ರಕಥೆ, ಸಂಗೀತ ನಿರ್ದೇಶನ ಹಾಗೂ ಸಾಹಿತ್ಯದ ಜವಾಬ್ದಾರಿಯನ್ನು ಎಸ್ ನಾರಾಯಣ್ ನಿಭಾಯಿಸಿದ್ದಾರೆ. ಶಿವಪ್ರಸಾದ್ ಯಾಧವ್ ಸಂಕಲನ ಮಾಡಿದ್ದಾರೆ. ಕುಮಾರ್ ಗೌಡ ಎಸ್.ಕೆ. ಅವರು ಛಾಯಾಗ್ರಹಣ ಮಾಡಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗೆ ಸೂಕ್ತ ಆಗುವಂತಹ ಹಿನ್ನೆಲೆ ಸಂಗೀತ ನೀಡಿದ್ದಾರೆ ಧರ್ಮ ವಿಶ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ