‘ಲವ್​ ಯೂ ರಚ್ಚು’ ವಿಮರ್ಶೆ: ಕೌತುಕದ ಕಥೆಯಲ್ಲಿ ಟ್ವಿಸ್ಟ್​ ಓಕೆ; ಪ್ರೇಕ್ಷಕರ ರಂಜನೆಗೆ ಇಷ್ಟೇ ಸಾಕೆ?

|

Updated on: Dec 31, 2021 | 4:49 PM

Love You Rachchu Review: ರಾಜ್ಯಾದ್ಯಂತ ‘ಲವ್​ ಯೂ ರಚ್ಚು’ ಚಿತ್ರ ಬಿಡುಗಡೆ ಆಗಿದೆ. ಅಜಯ್​ ರಾವ್​-ರಚಿತಾ ರಾಮ್​ ಜೋಡಿಯ ಈ ಸಿನಿಮಾ ಹೇಗಿದೆ ಎಂಬುದರ ವಿಮರ್ಶೆ ಇಲ್ಲಿದೆ..

‘ಲವ್​ ಯೂ ರಚ್ಚು’ ವಿಮರ್ಶೆ: ಕೌತುಕದ ಕಥೆಯಲ್ಲಿ ಟ್ವಿಸ್ಟ್​ ಓಕೆ; ಪ್ರೇಕ್ಷಕರ ರಂಜನೆಗೆ ಇಷ್ಟೇ ಸಾಕೆ?
ಅಜಯ್​ ರಾವ್​-ರಚಿತಾ ರಾಮ್​
Follow us on

ಚಿತ್ರ: ಲವ್​ ಯೂ ರಚ್ಚು
ನಿರ್ಮಾಣ: ಗುರು ದೇಶಪಾಂಡೆ
ನಿರ್ದೇಶನ: ಶಂಕರ್ ಎಸ್​. ರಾಜ್​
ಪಾತ್ರವರ್ಗ: ಅಜಯ್​ ರಾವ್​, ರಚಿತಾ ರಾಮ್​, ರಘು ಶಿವಮೊಗ್ಗ, ಅರು ಗೌಡ, ಅಚ್ಯುತ್​ ಕುಮಾರ್​, ಅರವಿಂದ್​ ರಾವ್​ ಮುಂತಾದವರು.
ಸ್ಟಾರ್​: 2.5 / 5

ಬಿಡುಗಡೆಗೂ ಮುನ್ನ ಭಾರಿ ಸದ್ದು ಮಾಡಿತ್ತು ‘ಲವ್​ ಯೂ ರಚ್ಚು’ (Love You Rachchu) ಸಿನಿಮಾ. ಅಜಯ್​ ರಾವ್ (Ajay Rao)​ ಮತ್ತು ರಚಿತಾ ರಾಮ್​ (Rachita Ram) ಜೋಡಿಯಾಗಿ ನಟಿಸಿರುವ ಈ ಚಿತ್ರಕ್ಕೆ ಶಂಕರ್​ ಎಸ್​. ರಾಜ್​ ನಿರ್ದೇಶನ ಮಾಡಿದ್ದಾರೆ. ಗುರು ದೇಶಪಾಂಡೆ ಅವರು ನಿರ್ಮಾಣ ಮಾಡುವುದರ ಜತೆಗೆ ಕ್ರಿಯೇಟಿವ್​ ಹೆಡ್​ ಆಗಿ ಕೆಲಸ ಮಾಡಿದ್ದಾರೆ. ಕಥೆ ಮತ್ತು ಸಂಭಾಷಣೆಯನ್ನು ಅನುಭವಿ ನಿರ್ದೇಶಕ ಶಶಾಂಕ್​ ಬರೆದಿದ್ದಾರೆ. ಇವರೆಲ್ಲರ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ‘ಲವ್​ ಯೂ ರಚ್ಚು’ ಚಿತ್ರ ಹೇಗಿದೆ? ಈ ಸಿನಿಮಾದ ಪ್ಲಸ್​ ಏನು? ಮೈನಸ್​ ಏನು ಎಂಬುದರ ಪೂರ್ತಿ ವಿಮರ್ಶೆ (Love You Rachchu Review) ಇಲ್ಲಿದೆ. ಫ್ಯಾಮಿಲಿ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ಸಿದ್ಧವಾಗಿರುವ ಈ ಸಿನಿಮಾ ತನ್ನದೇ ಆದ ಒಂದಷ್ಟು ಇತಿಮಿತಿಗಳ ನಡುವೆ ರಂಜಿಸುವ ಪ್ರಯತ್ನ ಮಾಡಿದೆ.

ಸಸ್ಪೆನ್ಸ್​ ಥ್ರಿಲ್ಲರ್​ ಕಥೆ:

ಟ್ರೇಲರ್​ನಲ್ಲಿ ಗೊತ್ತಾದಂತೆ ಇದೊಂದು ಮರ್ಡರ್​ ಮಿಸ್ಟರಿ ಕಥೆ. ಆಕಸ್ಮಿಕವಾದ ಒಂದು ಕೊಲೆಯ ಜಾಲದಲ್ಲಿ ಗಂಡ-ಹೆಂಡತಿ ಸಿಕ್ಕಿಕೊಳ್ಳುತ್ತಾರೆ. ಆ ಕೊಲೆಯ ಹಿಂದೆ ಇರುವ ಅಸಲಿ ವಿಷಯ ಏನು? ಕೊಲೆಗೆ ಕಾರಣವಾದ ಆ ವ್ಯಕ್ತಿ ಯಾರು ಎಂಬ ಕುತೂಹಲವನ್ನು ಇಟ್ಟುಕೊಂಡು ಕಥೆ ಸಾಗುತ್ತದೆ. ಒಟ್ಟಾರೆ ಆ ಪ್ರಕರಣದಿಂದ ಹೊರಬರಲು ಹೀರೋ-ಹೀರೋಯಿನ್​ ಏನೆಲ್ಲ ಮಾಡ್ತಾರೆ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

ಫ್ಯಾಮಿಲಿ ಪ್ರೇಕ್ಷಕರೇ ಟಾರ್ಗೆಟ್​:

ಇದು ಕಾಲೇಜ್​ ಹುಡುಗ-ಹುಡುಗಿಯ ಎಳೆ ವಯಸ್ಸಿನ ಲವ್​ಸ್ಟೋರಿ ಸಿನಿಮಾ ಅಲ್ಲ. ಆತ ತಾನೇ ಮದುವೆಯಾಗಿ ಸಂಸಾರ ಶುರುಮಾಡಿಕೊಂಡಿರುವ ಪತಿ-ಪತ್ನಿಯರ ಕಥೆ. ಒಂದು ಸುಂದರ ಸಂಸಾರದಲ್ಲಿ ಏನಿರಬೇಕು, ಏನಿರಬಾರದು ಎಂಬುದನ್ನು ವಿವರಿಸುವ ಕಥೆ. ಹಾಗಾಗಿ ಫ್ಯಾಮಿಲಿ ಪ್ರೇಕ್ಷಕರಿಗೆ ಈ ಸಿನಿಮಾ ಹೆಚ್ಚು ಕನೆಕ್ಟ್​ ಆಗುತ್ತದೆ. ಕಥೆಯ ಮೂಲಕ ಸಂಬಂಧಗಳ ಮೌಲ್ಯಗಳನ್ನು ತಿಳಿಸಿಕೊಡಲು ಪ್ರಯತ್ನಿಸಲಾಗಿದೆ.

ಇದ್ದರೂ ಇಲ್ಲದಂತಹ ಟ್ವಿಸ್ಟ್​ಗಳು:

ಮರ್ಡರ್​ ಮಿಸ್ಟರಿ ಕಥೆಯಲ್ಲಿ ಸಹಜವಾಗಿ ಬರುವಂತೆ ಈ ಸಿನಿಮಾದಲ್ಲಿಯೂ ಒಂದಷ್ಟು ಟ್ವಿಸ್ಟ್​ಗಳು ಎದುರಾಗುತ್ತವೆ. ಆದರೆ ಅವುಗಳನ್ನು ಪ್ರೇಕ್ಷಕರು ಸುಲಭವಾಗಿ ಊಹಿಸಬಹುದು. ಆ ನಿಟ್ಟಿನಲ್ಲಿ ಕಥೆ ಇನ್ನಷ್ಟು ಗಟ್ಟಿಯಾಗಿ ಇರಬೇಕಿತ್ತು. ಹೊಸತನದ ರೋಚಕತೆಯನ್ನು ಬಯಸುವ ಪ್ರೇಕ್ಷಕರಿಗೆ ಈ ಸಿನಿಮಾದಿಂದ ಕೊಂಚ ನಿರಾಸೆ ಆಗಬಹುದು.

ಪಾತ್ರಧಾರಿಗಳ ನಟನೆ ಹೇಗಿದೆ?

ಸಿನಿಮಾದ ಬಹುತೇಕ ದೃಶ್ಯಗಳನ್ನು ಅಜಯ್​ ರಾವ್​ ಮತ್ತು ರಚಿತಾ ರಾಮ್​ ಆವರಿಸಿಕೊಂಡಿದ್ದಾರೆ. ಪಾತ್ರಗಳಿಗೆ ನ್ಯಾಯ ಒದಗಿಸಲು ಅವರು ಪ್ರಯತ್ನಿಸಿದ್ದಾರೆ. ಆ್ಯಕ್ಷನ್​ ದೃಶ್ಯಗಳಲ್ಲಿ ಅಜಯ್​ ರಾವ್​ ಅಬ್ಬರಿಸಿದ್ದಾರೆ. ಎರಡೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ರಘು ಶಿವಮೊಗ್ಗ ಗಮನ ಸೆಳೆಯುತ್ತಾರೆ. ಅಚ್ಯುತ್​ ಕುಮಾರ್​ ಅವರಂಥ ಪ್ರತಿಭಾವಂತ ಕಲಾವಿದನಿಗೆ ಹೆಚ್ಚು ಸ್ಕ್ರೀನ್​ ಸ್ಪೇಸ್​ ಸಿಕ್ಕಿಲ್ಲ. ಅರು ಗೌಡ ಈ ಸಿನಿಮಾದ ಸರ್ಪ್ರೈಸ್​. ಅರವಿಂದ್​ ರಾವ್​ ಖಡಕ್​ ಪಾತ್ರದಲ್ಲಿ ಮಿಂಚಿದ್ದಾರೆ.

ತಾಂತ್ರಿಕವಾಗಿ ಮೆಚ್ಚಬಹುದಾದ ಚಿತ್ರ:

ಮೇಕಿಂಗ್​ ವಿಚಾರದಲ್ಲಿ ‘ಲವ್​ ಯೂ ರಚ್ಚು’ ಚಿತ್ರ ಗುಣಮಟ್ಟ ಕಾಯ್ದುಕೊಂಡಿದೆ. ಶ್ರೀ ಕ್ರೇಜಿಮೈಂಡ್ಸ್​ ಛಾಯಾಗ್ರಹಣ ಮತ್ತು ಸಂಕಲನ ಅಚ್ಚುಕಟ್ಟಾಗಿದೆ. ಮಣಿಕಾಂತ್​ ಕದ್ರಿ ಅವರ ಸಂಗೀತ ಈ ಸಿನಿಮಾಗೆ ಬಲ ನೀಡಿದೆ. ತಾಂತ್ರಿಕ ಗುಣಮಟ್ಟಕ್ಕೆ ನೀಡಿದಷ್ಟೇ ಮಹತ್ವನ್ನು ಸಿನಿಮಾದ ಕಥೆ ಮತ್ತು ಅದನ್ನು ನಿರೂಪಿಸುವ ಶೈಲಿಗೂ ನೀಡಿದ್ದರೆ ಈ ಚಿತ್ರಕ್ಕೆ ಹೆಚ್ಚಿನ ಅಂಕ ಸಿಗುತ್ತಿತ್ತು.

ಇದನ್ನೂ ಓದಿ:

83 Movie Review: ಇದು ಬರೀ ಸಿನಿಮಾ ಅಲ್ಲ; ಕ್ರಿಕೆಟ್​ಪ್ರಿಯರ ಎಮೋಷನ್​, ವಿಶ್ವಕಪ್​ ಗೆಲುವಿನ ಹೊಸ ಸೆಲೆಬ್ರೇಷನ್​

GGVV Review: ಹೀಗೂ ಇರಬಹುದಾ ಕ್ರೈಮ್​ ಲೋಕ? ಇದು ರಾಜ್​ ಬಿ. ಶೆಟ್ಟಿ ಇನ್ನೊಂದು ಮುಖ

Published On - 4:48 pm, Fri, 31 December 21