
ಬಹುನಿರೀಕ್ಷಿತ ‘ಲೈಗರ್’ ಸಿನಿಮಾ (Liger Movie) ದೇಶಾದ್ಯಂತ ಬಿಡುಗಡೆ ಆಗಿದೆ. ದಕ್ಷಿಣ ಭಾರತದ ಚಿತ್ರಗಳು ಎಲ್ಲೆಡೆ ಸದ್ದು ಮಾಡುತ್ತಿವೆ. ಇಲ್ಲಿನ ಬಿಗ್ ಬಜೆಟ್ ಚಿತ್ರಗಳನ್ನು ನೋಡಲು ಉತ್ತರ ಭಾರತದ ಮಂದಿ ಕೂಡ ಇಷ್ಟಪಡುತ್ತಾರೆ ಎಂಬುದಕ್ಕೆ ಈಗಾಗಲೇ ಹಲವು ಉದಾಹರಣೆಗಳು ಸಿಕ್ಕಿವೆ. ಅದೇ ರೀತಿ ಭರವಸೆಯನ್ನು ‘ಲೈಗರ್’ ಸಿನಿಮಾ ಮೇಲೆ ಇಟ್ಟುಕೊಳ್ಳಲಾಗಿತ್ತು. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ (Vijay Deverakonda) ಮುಖ್ಯ ಪಾತ್ರ ಮಾಡಿದ್ದಾರೆ. ಬಾಕ್ಸರ್ ಆಗಿ ಅವರು ಅಬ್ಬರಿಸಿದ್ದಾರೆ. ಅವರ ಜೊತೆ ವಿಶ್ವ ವಿಖ್ಯಾತ ಬಾಕ್ಸರ್ ಮೈಕ್ ಟೈಸನ್ ಕೂಡ ನಟಿಸಿದ್ದಾರೆ. ನಾಯಕಿಯಾಗಿ ಅನನ್ಯಾ ಪಾಂಡೆ ಅಭಿನಯಿಸಿದ್ದಾರೆ. ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದು, ಪಕ್ಕಾ ಮಾಸ್ ಶೈಲಿಯಲ್ಲಿ ಈ ಚಿತ್ರ ಮೂಡಿಬಂದಿದೆ. ಮೊದಲ ಶೋ ನೋಡಿ ಬಂದ ಪ್ರೇಕ್ಷಕರು ಟ್ವಿಟರ್ ವಿಮರ್ಶೆ (Liger Movie Twitter Review) ಹಂಚಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಈ ಸಿನಿಮಾ ಸಖತ್ ಇಷ್ಟ ಆಗಿದೆ.
‘ಫೈಟರ್ ಬದುಕಿನ ಪಯಣದ ಬಗ್ಗೆ ಮೂಡಿಬಂದ ಬೆಸ್ಟ್ ಸಿನಿಮಾ ಇದು. ಸಾಹಸ ದೃಶ್ಯಗಳು ತುಂಬ ಚೆನ್ನಾಗಿವೆ. ಎಂದಿನಂತೆ ವಿಜಯ್ ದೇವರಕೊಂಡ ಅವರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮೈಕ್ ಟೈಸನ್ ಅವರ ಪಾತ್ರ ಕೂಡ ಚೆನ್ನಾಗಿದೆ. ಅನನ್ಯಾ ಪಾಂಡೆ ಅವರು ತುಂಬ ಸುಂದರವಾಗಿ ಕಾಣುತ್ತಾರೆ’ ಎಂದು ಅಭಿಮಾನಿಯೊಬ್ಬರು ವಿಮರ್ಶೆ ಹಂಚಿಕೊಂಡಿದ್ದಾರೆ.
ಅನುಭವಿ ನಟಿ ರಮ್ಯಾ ಕೃಷ್ಣ ಹಾಗೂ ವಿಜಯ್ ದೇವರಕೊಂಡ ಅವರು ತಾಯಿ-ಮಗನ ಪಾತ್ರದಲ್ಲಿ ನಟಿಸಿದ್ದಾರೆ. ‘ಅಮ್ಮ-ಮಗನ ದೃಶ್ಯಗಳು ಸಖತ್ ಆಗಿವೆ. ಆ ಪಾತ್ರಗಳಿಗೆ ರಮ್ಯಾ ಕೃಷ್ಣ ಮತ್ತು ವಿಜಯ್ ದೇವರಕೊಂಡ ಆಯ್ಕೆ ಸೂಕ್ತವಾಗಿದೆ. ಹೀರೋ ಪಾತ್ರವನ್ನು ಚೆನ್ನಾಗಿ ತೋರಿಸುವಲ್ಲಿ ಪುರಿ ಜಗನ್ನಾಥ್ ಯಾಕೆ ಬೆಸ್ಟ್ ಎಂಬುದು ಲೈಗರ್ ಸಿನಿಮಾದಲ್ಲಿ ಮತ್ತೊಮ್ಮೆ ಸಾಬೀತಾಗಿದೆ’ ಎಂದು ಪ್ರೇಕ್ಷಕರೊಬ್ಬರು ಟ್ವೀಟ್ ಮಾಡಿದ್ದಾರೆ.
ಸಿನಿಮಾ ಎಂದಮೇಲೆ ಮಿಶ್ರ ಪ್ರತಿಕ್ರಿಯೆ ಬರುವುದು ಸಹಜ. ಆದರೆ ಕೆಲವರು ಸಿನಿಮಾವನ್ನೇ ನೋಡದೇ ನೆಗೆಟಿವ್ ಮಾತುಗಳನ್ನು ಹಬ್ಬಿಸುತ್ತಿದ್ದಾರೆ ಎಂಬುದು ವಿಜಯ್ ದೇವರಕೊಂಡ ಅಭಿಮಾನಿಗಳ ಆರೋಪ. ‘ಕೆಲವು ವಿರೋಧಿಗಳು ಸಿನಿಮಾ ನೋಡದೆಯೂ ನಕಲಿ ವಿಮರ್ಶೆ ತಿಳಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಅವರನ್ನು ಕಂಡರೆ ಅವರೆಲ್ಲ ಹೆದರಿಕೊಳ್ಳುತ್ತಿರುವುದನ್ನು ನೋಡಲು ಖುಷಿ ಆಗುತ್ತದೆ. ಖಾಲಿ ಪಾತ್ರೆ ಸದಾ ಸದ್ದು ಮಾಡುತ್ತದೆ. ವಿಜಯ್ ದೇವರಕೊಂಡ ಅವರ ಗೆಲುವಿನಿಂದ ಇಂಥವರಿಗೆ ಭಯ ಆಗಿದೆ’ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.
ಆಗಸ್ಟ್ 25ರ ರಾತ್ರಿಯಿಂದ ಹಿಂದಿ ವರ್ಷನ್ ಶೋಗಳು ಆರಂಭ ಆಗಲಿವೆ. ಉತ್ತರ ಭಾರತದ ಪ್ರೇಕ್ಷಕರು ಯಾರ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.