‘ನಿನ್ನ ಸನಿಹಕೆ’ ವಿಮರ್ಶೆ: ಯಶಸ್ಸಿನ ಸನಿಹಕ್ಕೆ ಸೂರಜ್​, ಧನ್ಯಾ; ಇದು ಹೊಸ ತಲೆಮಾರಿನ ಪ್ರೇಮಕಥೆ

|

Updated on: Oct 08, 2021 | 12:30 PM

Ninna Sanihake Review: ಸೂರಜ್​ ಗೌಡ ಮತ್ತು ಧನ್ಯಾ ಕೆಮಿಸ್ಟ್ರೀ ಚೆನ್ನಾಗಿ ಮೂಡಿಬಂದಿದೆ. ಇಬ್ಬರೂ ರಿಯಲ್​ ಲೈಫ್​ ಪ್ರೇಮಿಗಳೇನೋ ಎಂಬಷ್ಟರಮಟ್ಟಿಗೆ ಈ ಪಾತ್ರಗಳಿಗೆ ಅವರು ಜೀವ ತುಂಬಿದ್ದಾರೆ.

‘ನಿನ್ನ ಸನಿಹಕೆ’ ವಿಮರ್ಶೆ: ಯಶಸ್ಸಿನ ಸನಿಹಕ್ಕೆ ಸೂರಜ್​, ಧನ್ಯಾ; ಇದು ಹೊಸ ತಲೆಮಾರಿನ ಪ್ರೇಮಕಥೆ
ಧನ್ಯಾ ರಾಮ್​ಕುಮಾರ್​, ಸೂರಜ್​ ಗೌಡ
Follow us on

ಚಿತ್ರ: ನಿನ್ನ ಸನಿಹಕೆ
ನಿರ್ದೇಶನ: ಸೂರಜ್​ ಗೌಡ
ನಿರ್ಮಾಣ: ಅಕ್ಷಯ್​ ರಾಜಶೇಖರ್​, ರಂಗನಾಥ್​ ಕೂಡ್ಲಿ
ಪಾತ್ರವರ್ಗ: ಧನ್ಯಾ ರಾಮ್​ಕುಮಾರ್​, ಸೂರಜ್​ ಗೌಡ, ಅರುಣಾ ಬಾಲರಾಜ್​, ಮಂಜುನಾಥ್​ ಹೆಗಡೆ, ರಜನಿಕಾಂತ್, ಸೌಮ್ಯಾ ಭಟ್​ ಮುಂತಾದವರು.

ಸ್ಟಾರ್​: 3.5 / 5

ಡಾ. ರಾಜ್​ಕುಮಾರ್​ ಫ್ಯಾಮಿಲಿಯ ಮೊದಲ ಹೀರೋಯಿನ್​ ಎಂಬ ವಿಶೇಷಣವನ್ನು ಜೊತೆಯಲ್ಲಿ ಇಟ್ಟುಕೊಂಡು ಗಾಂಧಿನಗರಕ್ಕೆ ಕಾಲಿಟ್ಟಿದ್ದಾರೆ ನಟಿ ಧನ್ಯಾ ರಾಮ್​ಕುಮಾರ್​. ಅವರು ನಟಿಸಿದ ಮೊದಲ ಸಿನಿಮಾ ‘ನಿನ್ನ ಸನಿಹಕೆ’ ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ನಟ ಸೂರಜ್​ ಗೌಡ ನಿರ್ದೇಶನ ಮಾಡಿದ್ದು, ನಾಯಕನಾಗಿಯೂ ನಟಿಸಿದ್ದಾರೆ. ಎರಡೂ ಜವಾಬ್ದಾರಿಯನ್ನು ಅವರು ಉತ್ತಮವಾಗಿ ನಿಭಾಯಿಸಿದ್ದಾರೆ. ಮೊದಲ ಪ್ರಯತ್ನದಲ್ಲೇ ಧನ್ಯಾ ಗಮನ ಸೆಳೆದಿದ್ದಾರೆ. ಹೊಸ ತಲೆಮಾರಿನ ಯುವಕ-ಯುವತಿಯರಿಗೆ ಇಷ್ಟ ಆಗುವಂತಹ ಕಹಾನಿಯನ್ನು ಈ ಸಿನಿಮಾ ಒಳಗೊಂಡಿದೆ.

ಕಥೆಯ ಎಳೆ ಹೀಗಿದೆ…

ಬೆಂಗಳೂರಿನಂತಹ ಮಹಾನಗರದಲ್ಲಿ ಲಿವ್​-ಇನ್​-ರಿಲೇಷನ್​ಶಿಪ್​ ಸಹಜ. ಆದರೆ ಎಲ್ಲ ವರ್ಗದವರೂ ಅದಕ್ಕೆ ತೆರೆದುಕೊಂಡಿಲ್ಲ. ಅಮೃತಾ (ಧನ್ಯಾ) ಎಂಬ ಡೆಂಟಿಸ್ಟ್​, ಆದಿ (ಸೂರಜ್​) ಎಂಬ ಇಂಜಿನಿಯರ್​ ಜೊತೆಗೆ ಪ್ರೀತಿಯಲ್ಲಿ ಬಿದ್ದ ಬಳಿಕ ಲಿವ್​-ಇನ್​-ರಿಲೇಷನ್​ಶಿಪ್​ನಲ್ಲಿ ಇರುತ್ತಾರೆ. ಇಂಥ ಸಂಬಂಧದಲ್ಲಿ ಇರುವ ಏಳು-ಬೀಳುಗಳೇನು? ಎದುರಾಗುವ ಸಮಸ್ಯೆಗಳೇನು? ಅದನ್ನು ಅವರು ಹೇಗೆ ಪರಿಹರಿಸಿಕೊಳ್ಳುತ್ತಾರೆ? ಕಡೆಗೂ ಅವರ ಪ್ರೀತಿ ಉಳಿಯುತ್ತಾ? ಈ ಎಲ್ಲ ಪ್ರಶ್ನೆಗಳಿಗೆ ಪೂರ್ತಿ ಸಿನಿಮಾ ನೋಡಿದಾಗ ಉತ್ತರ ಸಿಗಲಿದೆ.

ನಟನೆಯಲ್ಲೂ-ನಿರ್ದೇಶನದಲ್ಲೂ ಸೂರಜ್​ ಸೈ

ನಟನಾಗಿ ಒಂದೆರಡು ಸಿನಿಮಾ ಮಾಡಿರುವ ಸೂರಜ್​ ಅವರಿಗೆ ನಿರ್ದೇಶನದಲ್ಲಿ ಇದು ಮೊದಲ ಪ್ರಯತ್ನ. ಈ ಚಿತ್ರದಲ್ಲಿ ಅವರು ಈ ಎರಡೂ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಆದರೆ ನಿರ್ದೇಶನದ ಮೇಲೆ ಅವರು ಇನ್ನಷ್ಟು ಹಿಡಿತ ಸಾಧಿಸುವ ಅವಶ್ಯಕತೆ ಇದೆ. ಪ್ರೇಕ್ಷಕರ ನಾಡಿಮಿಡಿತ ಅರ್ಥ ಮಾಡಿಕೊಂಡರೆ, ಮತ್ತಷ್ಟು ಹೋಮ್​ವರ್ಕ್​ ಮಾಡಿಕೊಂಡರೆ ಅವರಿಗೆ ನಿರ್ದೇಶನದಲ್ಲಿ ಒಳ್ಳೆಯ ಭವಿಷ್ಯ ಖಂಡಿತವಾಗಿ ಇದೆ ಎಂಬುದು ‘ನಿನ್ನ ಸನಿಹಕೆ’ ನೋಡಿದಾಗ ಸ್ಪಷ್ಟವಾಗುತ್ತದೆ.

ರಘು ದೀಕ್ಷಿತ್​ಗೂ ಬಹುಪರಾಕ್​

ಪ್ರೇಕ್ಷಕರಿಗೆ ‘ನಿನ್ನ ಸನಿಹಕೆ’ ಇಷ್ಟವಾಗಲು ರಘು ದೀಕ್ಷಿತ್​ ಅವರ ಸಂಗೀತ ಕೂಡ ಮುಖ್ಯ ಕಾರಣ. ಕಥೆಗೆ ಒಪ್ಪುವಂತಹ ಹಾಡುಗಳನ್ನು ಅವರು ನೀಡಿದ್ದಾರೆ. ಪ್ರೇಮಕಥೆಯ ಅಂದ ಹೆಚ್ಚಿಸಲು ಎಲ್ಲ ಹಾಡುಗಳು ಸಹಕಾರಿ ಆಗಿವೆ. ಹಿನ್ನೆಲೆ ಸಂಗೀತ ಕೂಡ ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಆಗಿದೆ.

ಭರವಸೆ ಮೂಡಿಸಿದ ಧನ್ಯಾ ರಾಮ್​ಕುಮಾರ್​

ನಟಿ ಧನ್ಯಾ ರಾಮ್​ಕುಮಾರ್​ ಅವರಿಗೆ ಈ ಪಾತ್ರ ತುಂಬ ಚೆನ್ನಾಗಿ ಹೊಂದಿಕೆ ಆಗಿದೆ. ಪ್ರೀತಿ, ಅನುಮಾನ, ಹೊಟ್ಟೆಕಿಚ್ಚು, ದುಃಖ ಸೇರಿದಂತೆ ಹಲವು ಭಾವಗಳನ್ನು ಹೊಮ್ಮಿಸುವ ಈ ಪಾತ್ರವನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಸೂರಜ್​ ಗೌಡ ಮತ್ತು ಧನ್ಯಾ ಕೆಮಿಸ್ಟ್ರೀ ಚೆನ್ನಾಗಿ ಮೂಡಿಬಂದಿದೆ. ಇಬ್ಬರೂ ರಿಯಲ್​ ಲೈಫ್​ ಪ್ರೇಮಿಗಳೇನೋ ಎಂಬಷ್ಟರಮಟ್ಟಿಗೆ ಈ ಪಾತ್ರಗಳಿಗೆ ಅವರು ಜೀವ ತುಂಬಿದ್ದಾರೆ.

ಚಿತ್ರದ ಪ್ಲಸ್​ ಪಾಯಿಂಟ್​ಗಳೇನು?

ಇಡೀ ಸಿನಿಮಾದಲ್ಲಿ ನಗುವಿಗೆ ಕೊರತೆ ಇಲ್ಲ. ಕಥೆಯಲ್ಲಿ ಕಾಮಿಡಿಗೆ ಹೆಚ್ಚು ಮಹತ್ವ ಕೊಡಲಾಗಿದೆ. ಟೆನ್ಷನ್​ ಮರೆತು ಸಿನಿಮಾ ನೋಡಲು ಬರುವವರಿಗೆ ಭರ್ಜರಿ ಮನರಂಜನೆ ಸಿಗಲಿದೆ. ನಗು ಉಕ್ಕಿಸುವ ಡೈಲಾಗ್​ಗಳು ಆಗಾಗ ಕೇಳಿಸುತ್ತವೆ. ಸಂಗೀತಮಯವಾಗಿ ಸಿನಿಮಾ ಕಟ್ಟಿಕೊಡಲಾಗಿದೆ. ಪೋಷಕ ಪಾತ್ರಗಳಲ್ಲಿ ಇರುವ ಅರುಣಾ ಬಾಲರಾಜ್​, ಮಂಜುನಾಥ್​ ಹೆಗಡೆ, ರಜನಿಕಾಂತ್, ಸೌಮ್ಯಾ ಭಟ್​ ಮುಂತಾದವರು ಗಮನ ಸೆಳೆಯುತ್ತಾರೆ.

ಮೈನಸ್​ ಅಂಶಗಳೇನು?

ಈ ಸಿನಿಮಾದ ಅವಧಿ 2 ಗಂಟೆ 35 ನಿಮಿಷ. ಇದು ಕೊಂಚ ದೀರ್ಘವಾಯ್ತು ಎನಿಸದೇ ಇರದು. ಈ ಬಗ್ಗೆ ನಿರ್ದೇಶಕರು ಗಮನ ಹರಿಸಬೇಕಿತ್ತು. ಅನಗತ್ಯ ಎಳೆದಾಟಕ್ಕೆ ಕತ್ತರಿಹಾಕುವ ಅವಶ್ಯಕತೆ ಇತ್ತು. ಚಿತ್ರಕಥೆಯಲ್ಲಿ ಒಂಚೂರು ಗಟ್ಟಿತನ ಬೇಕಿತ್ತು ಎಂಬ ಅಭಿಪ್ರಾಯ ಮೂಡುತ್ತದೆ. ಸಾಹಸ ದೃಶ್ಯಗಳನ್ನು ಸೇರಿಸಿರುವ ಕಡೆಗಳಲ್ಲಿ ಕಥೆ ಕೊಂಚ ದಾರಿ ತಪ್ಪಿರುವುದು ಸ್ಪಷ್ಟವಾಗಿ ಕಾಣುತ್ತದೆ. ಈ ಎಲ್ಲ ಅಂಶಗಳನ್ನು ಬದಿಗಿಟ್ಟು ನೋಡುವುದಾದರೆ ‘ನಿನ್ನ ಸನಿಹಕೆ’ ಚಿತ್ರ ಪ್ರೇಕ್ಷಕರ ಮನಸ್ಸಿಗೆ ಹತ್ತಿರ ಆಗುತ್ತದೆ.

ಇದನ್ನೂ ಓದಿ:

‘ನಿನ್ನ ಸನಿಹಕೆ’ ಚಿತ್ರ ನೋಡಲಿರುವ ರಜನಿಕಾಂತ್​; ಧನ್ಯಾ ರಾಮ್​ಕುಮಾರ್​-ಸೂರಜ್​ಗೆ ತಲೈವಾ ಬೆಂಬಲ

‘ಮದುವೆ ಆಗದೇ ಮಕ್ಕಳು ಮಾಡಿಕೊಂಡವರು ಇದ್ದಾರೆ’; ‘ನಿನ್ನ ಸನಿಹಕೆ’ ಚಿತ್ರದ ಬಗ್ಗೆ ರಘು ದೀಕ್ಷಿತ್​ ಮಾತು