
ಶೀರ್ಷಿಕೆ ಬಿಡುಗಡೆ ಆದಾಗಲೇ ‘ಏಳುಮಲೆ’ ಸಿನಿಮಾ (Elumale Kannada Movie) ಮೇಲೆ ಕೌತುಕ ಮೂಡಿತ್ತು. ಟ್ರೇಲರ್ ಅನಾವರಣ ಆದಾಗ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಈಗ ಈ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ನಟ ರಾಣಾ (Raanna) ಅವರು ಹೀರೋ ಆಗಿ ನಟಿಸಿದ್ದಾರೆ. ಹೊಸ ನಟಿ ಪ್ರಿಯಾಂಕಾ ಆಚಾರ್ (Priyanka Achar) ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ಪುನೀತ್ ರಂಗಸ್ವಾಮಿ ನಿರ್ದೇಶನದ ಈ ಸಿನಿಮಾಗೆ ತರುಣ್ ಸುಧೀರ್ ಅವರು ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ. ತರುಣ್ ಸುಧೀರ್ ಮತ್ತು ಅಟ್ಲಾಂಟ ನಾಗೇಂದ್ರ ಅವರ ನಿರ್ಮಾಣದಲ್ಲಿ ‘ಏಳುಮಲೆ’ ಸಿನಿಮಾ ಮೂಡಿಬಂದಿದೆ.
ಡ್ರೈವರ್ ಪಾತ್ರದಲ್ಲಿ ರಾಣಾ ನಟಿಸಿದ್ದಾರೆ. ಕಾಲೇಜು ಹುಡುಗಿಯಾಗಿ ಪ್ರಿಯಾಂಕಾ ಆಚಾರ್ ಕಾಣಿಸಿಕೊಂಡಿದ್ದಾರೆ. ತಮಿಳುನಾಡಿನ ಹುಡುಗಿಗೆ, ಕರ್ನಾಟಕದ ಹುಡುಗನ ಮೇಲೆ ಲವ್ ಆಗುವ ಕಥೆ ಈ ಚಿತ್ರದಲ್ಲಿದೆ. ಪ್ರೀತಿಗಾಗಿ ಮನೆ ಬಿಟ್ಟು ಬರುವ ಹುಡುಗಿಯ ಜೀವನದಲ್ಲಿ ಒಂದು ರಾತ್ರಿಯೊಳಗೆ ಹತ್ತಾರು ಘಟನೆಗಳು ನಡೆಯುತ್ತವೆ. ಅದೇ ರಾತ್ರಿ ಹುಡುಗನ ಬಾಳಿನಲ್ಲಿ ಸಾವು-ಬದುಕಿನ ಸನ್ನಿವೇಶಗಳು ಎದುರಾಗುತ್ತವೆ. ಅದಕ್ಕೆಲ್ಲ ಕಾರಣ ಏನು? ಅಂತಿಮವಾಗಿ ಆ ಪ್ರೇಮಿಗಳು ಒಂದಾಗುತ್ತಾರಾ ಅಥವಾ ಇಲ್ಲವಾ ಎಂಬುದೇ ‘ಏಳುಮಲೆ’ ಕಥೆಯ ಸಾರಾಂಶ.
ಚಾಮರಾಜನಗರ ಜಿಲ್ಲೆಯಲ್ಲಿ ‘ಏಳುಮಲೆ’ ಕಥೆ ನಡೆಯುತ್ತದೆ. 2004ರ ಕಾಲಘಟ್ಟದ ಕಥೆಯನ್ನು ನಿರ್ದೇಶಕ ಪುನೀತ್ ರಂಗಸ್ವಾಮಿ ತೆರೆಗೆ ತಂದಿದ್ದಾರೆ. ಬಹುತೇಕ ಒಂದೇ ರಾತ್ರಿಯಲ್ಲಿ ನಡೆಯುವ ಈ ಕಥೆಯನ್ನು ಅವರು ಬಹಳ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ಯಾವುದೇ ಅನಗತ್ಯ ದೃಶ್ಯಗಳನ್ನು ಸೇರಿಸಿದೇ, ಎಲ್ಲಿಯೂ ಬೋರು ಹೊಡೆಸದೇ ಒಂದು ಪಕ್ಕಾ ಮನರಂಜನಾ ಸಿನಿಮಾವನ್ನು ಅವರು ಪ್ರೇಕ್ಷಕರಿಗೆ ನೀಡಿದ್ದಾರೆ.
ಹಾಗೆ ನೋಡಿದರೆ ‘ಏಳುಮಲೆ’ ಸಿನಿಮಾದಲ್ಲಿ 3 ಕಥೆಗಳಿವೆ. ಲಾಕಪ್ ಡೆತ್ ಸಂಕಷ್ಟಕ್ಕೆ ಸಿಲುಕಿದ ಪೊಲೀಸರು, ಮನೆ ಬಿಟ್ಟು ಬಂದ ಪ್ರೇಮಿಗಳು ಹಾಗೂ ಅಕ್ರಮ ಬಂದೂಕು ಸಾಗಣೆ ಮಾಡುತ್ತಿರುವ ಖದೀಮರು. ಆಕಸ್ಮಿಕವಾಗಿ ಈ ಸಂಗತಿಗಳು ಒಂದಕ್ಕೊಂದು ಬೆಸೆದುಕೊಳ್ಳುತ್ತವೆ. ಆ ಕಾರಣದಿಂದಲೇ ‘ಏಳುಮಲೆ’ ಕಹಾನಿಗೆ ಥ್ರಿಲ್ಲಿಂಗ್ ಗುಣ ಬಂದಿದೆ. ಲವ್ ಮತ್ತು ಸಸ್ಪೆನ್ಸ್ ಎರಡನ್ನೂ ಈ ಸಿನಿಮಾದಲ್ಲಿ ಚೆನ್ನಾಗಿ ಬ್ಯಾಲೆನ್ಸ್ ಮಾಡಲಾಗಿದೆ. ವೇಗದ ನಿರೂಪಣೆಯೇ ಈ ಚಿತ್ರದ ಪ್ಲಸ್ ಪಾಯಿಂಟ್. ಆರಂಭದಿಂದ ಕ್ಲೈಮ್ಯಾಕ್ಸ್ ತನಕ ಕಥೆ ಪಟಪಟನೆ ಸಾಗುತ್ತದೆ.
ನಟನೆಯಲ್ಲಿ ರಾಣಾ ಮತ್ತು ಪ್ರಿಯಾಂಕಾ ಆಚಾರ್ ಅವರು ಗಮನ ಸೆಳೆಯುತ್ತಾರೆ. ಸಿಕ್ಕ ಅವಕಾಶವನ್ನು ಅವರು ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ. ಮರ ಸುತ್ತುವ ಸನ್ನಿವೇಶಗಳನ್ನು ಬದಿಗಿಟ್ಟು, ಅನಗತ್ಯ ಫ್ಲ್ಯಾಶ್ಬ್ಯಾಕ್ ತುರುಕದೇ ಗಾಢವಾದ ಪ್ರೀತಿಯನ್ನು ಚುಟುಕಾಗಿ ಈ ಚಿತ್ರದಲ್ಲಿ ತೋರಿಸಲಾಗಿದೆ. ರಾಣಾ ಅವರು ಆ್ಯಕ್ಷನ್ನಲ್ಲಿಯೂ ಭೇಷ್ ಎನಿಸಿಕೊಳ್ಳುತ್ತಾರೆ.
ಇದನ್ನೂ ಓದಿ: ‘ಬಾಘಿ 4’ ಜತೆ ‘ಬೆಂಗಾಲ್ ಫೈಲ್ಸ್’ ಪೈಪೋಟಿ: ಈ ವಾರ ಕನ್ನಡದಲ್ಲೂ ಟಫ್ ಸ್ಪರ್ಧೆ
ಇನ್ನು, ಅನುಭವಿ ಕಲಾವಿದರಾದ ಕಿಶೋರ್, ನಾಗಾಭರಣ, ಜಗಪತಿ ಬಾಬು ಅವರಿಂದಾಗಿ ಸಿನಿಮಾದ ತೂಕ ಹೆಚ್ಚಿದೆ. ಕೆಲವೇ ದೃಶ್ಯಗಳಲ್ಲಿ ಬರುವ ಜಗ್ಗಪ್ಪ ಕೂಡ ಗಮನ ಸೆಳೆಯುತ್ತಾರೆ. ಡಿ. ಇಮ್ಮಾನ್ ಅವರ ಸಂಗೀತದಿಂದ ‘ಏಳುಮಲೆ’ ಇನ್ನಷ್ಟು ಹತ್ತಿರ ಆಗುತ್ತದೆ. ಅದ್ವೈತ್ ಗುರುಮೂರ್ತಿ ಅವರ ಕ್ಯಾಮೆರಾ ಕೆಲಸಕ್ಕೂ ಚಪ್ಪಾಳೆ ಸಲ್ಲಬೇಕು. ಚಿಕ್ಕ ಪುಟ್ಟ ಮೈಸನ್ ಅಂಶಗಳು ಇದ್ದರೂ ಕೂಡ ಒಂದು ಉತ್ತಮ ಚಿತ್ರವಾಗಿ ‘ಏಳುಮಲೆ’ ಇಷ್ಟ ಆಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.