‘ಬಾಘಿ 4’ ಜತೆ ‘ಬೆಂಗಾಲ್ ಫೈಲ್ಸ್’ ಪೈಪೋಟಿ: ಈ ವಾರ ಕನ್ನಡದಲ್ಲೂ ಟಫ್ ಸ್ಪರ್ಧೆ
ಸೆಪ್ಟೆಂಬರ್ 5ರಂದು ಅನೇಕ ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಹಾಗಾಗಿ ಪೈಪೋಟಿ ಜೋರಾಗಿದೆ. ‘ದಿ ಬೆಂಗಾಲ್ ಫೈಲ್ಸ್’, ‘ಬಾಘಿ 4’, ‘ನಾನು ಮತ್ತು ಗುಂಡ 2’ ಮುಂತಾದ ಚಿತ್ರಗಳು ತೆರೆಗೆ ಬರುತ್ತಿವೆ. ‘ಏಳುಮಲೆ’, ‘31 ಡೇಸ್’, ‘ಆಸ್ಟಿನ್ನ ಮಹನ್ಮೌನ’ ಇತ್ಯಾದಿ ಚಿತ್ರಗಳು ಕೂಡ ಸ್ಪರ್ಧೆಯಲ್ಲಿವೆ.

‘ದಿ ಕಾಶ್ಮೀರ್ ಫೈಲ್ಸ್’, ‘ದಿ ವ್ಯಾಕ್ಸಿನ್ ವಾರ್’ ಮುಂತಾದ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಈಗ ‘ದಿ ಬೆಂಗಾಲ್ ಫೈಲ್ಸ್’ (The Bengal Files) ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಸೆಪ್ಟೆಂಬರ್ 5ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಟ್ರೇಲರ್ ಮೂಲಕ ಗಮನ ಸೆಳೆದಿರುವ ಈ ಸಿನಿಮಾಗೆ ಮೊದಲ ದಿನ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಹಾಗಂತ ಈ ಚಿತ್ರದ ಹಾದಿ ಸುಗಮವಾಗಿಲ್ಲ. ಬಾಕ್ಸ್ ಆಫೀಸ್ನಲ್ಲಿ ಹಲವು ಸಿನಿಮಾಗಳು ಪೈಪೋಟಿ ನೀಡಲಿವೆ. ಆ ಬಗ್ಗೆ ಇಲ್ಲಿದೆ ವಿವರ..
ಸೆಪ್ಟೆಂಬರ್ 5ರಂದು ಹಿಂದಿಯ ‘ಬಾಘಿ 4’ ಕೂಡ ಬಿಡುಗಡೆ ಆಗುತ್ತಿವೆ. ಈ ಸಿನಿಮಾದಲ್ಲಿ ನಟ ಟೈಗರ್ ಶ್ರಾಫ್ ಅವರು ಅಭಿನಯಿಸಿದ್ದಾರೆ. ಕನ್ನಡದ ನಿರ್ದೇಶಕ ಎ. ಹರ್ಷ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ ಎಂಬುದು ವಿಶೇಷ. ಈ ಸಿನಿಮಾದ ಟ್ರೇಲರ್ ಸಖತ್ ಮಾಸ್ ಆಗಿ ಮೂಡಿಬಂದಿದೆ. ಸಂಜಯ್ ದತ್ ಕೂಡ ಪಾತ್ರವರ್ಗದಲ್ಲಿ ಇದ್ದಾರೆ.
ಟಿಕೆಟ್ ಬುಕಿಂಗ್ನಲ್ಲಿ ‘ದಿ ಬೆಂಗಾಲ್ ಫೈಲ್ಸ್’ ಚಿತ್ರಕ್ಕಿಂತಲೂ ‘ಬಾಘಿ 4’ ಸಿನಿಮಾ ಮುನ್ನಡೆ ಸಾಧಿಸಿದೆ. ‘ಬಾಘಿ 4’ ಸಿನಿಮಾಗೆ ಹೆಚ್ಚು ಶೋಗಳು ಸಿಕ್ಕಿವೆ. ಆದರೆ ಮೊದಲ ದಿನದ ವಿಮರ್ಶೆ ಹೇಗಿದೆ ಎಂಬುದರ ಮೇಲೆ ನಂತರದ ದಿನಗಳಲ್ಲಿ ಶೋ ಸಂಖ್ಯೆ ಹೆಚ್ಚು-ಕಡಿಮೆ ಆಗಲಿದೆ. ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಬಿಡುಗಡೆ ಆದ ಬಳಿಕ ವಿವಾದ ಆದರೂ ಅಚ್ಚರಿ ಏನಿಲ್ಲ.
ಕನ್ನಡದಲ್ಲಿ ‘ನಾನು ಮತ್ತು ಗುಂಡ 2’ ಸಿನಿಮಾ ಕೂಡ ಸೆಪ್ಟೆಂಬರ್ 5ರಂದು ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ಶ್ವಾನದ ಎಮೋಷನಲ್ ಕಹಾನಿ ಇದೆ. ರಾಕೇಶ್ ಅಡಿಗ, ರಚನಾ ಇಂದರ್ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ರಘು ಹಾಸನ್ ಅವರು ನಿರ್ದೇಶನ ಮಾಡಿದ್ದಾರೆ. ಭಾವುಕ ಕಥೆಯ ಜೊತೆಗೆ ಕಾಮಿಡಿ ಕೂಡ ಇದೆ. ಈ ಚಿತ್ರದ ಮೇಲೆ ಸಿನಿಪ್ರಿಯರಿಗೆ ನಿರೀಕ್ಷೆ ಇದೆ.
ಇದನ್ನೂ ಓದಿ: ‘ಅನಿಮಲ್’, ‘ಪುಷ್ಪ 2’ ಸಿನಿಮಾಗಿಂತಲೂ ದೀರ್ಘವಾಗಿದೆ ‘ಬೆಂಗಾಲ್ ಫೈಲ್ಸ್’: 3 ಗಂಟೆ 24 ನಿಮಿಷ
ತರುಣ್ ಸುಧೀರ್ ಅವರು ನಿರ್ಮಾಣ ಮಾಡುವ ಸಿನಿಮಾಗಳಲ್ಲಿ ಕಥಾಹಂದರ ಚೆನ್ನಾಗಿಯೇ ಇರುತ್ತದೆ ಎಂಬ ನಂಬಿಕೆ ಪ್ರೇಕ್ಷಕರಿಗೆ ಇದೆ. ತರುಣ್ ಸುಧೀರ್ ನಿರ್ಮಾಣ ಮಾಡಿರುವ ‘ಏಳುಮಲೆ’ ಸಿನಿಮಾ ಸೆ.5ಕ್ಕೆ ತೆರೆಕಾಣುತ್ತಿದೆ. ಪ್ರಿಯಾಂಕಾ, ರಾಣಾ ಮುಂತಾದವರು ನಟಿಸಿರುವ ಈ ಸಿನಿಮಾಗೆ ಪುನೀತ್ ರಂಗಸ್ವಾಮಿ ಅವರು ನಿರ್ದೇಶನ ಮಾಡಿದ್ದಾರೆ.
ಜಾಲಿಡೇಸ್ ಖ್ಯಾತಿಯ ನಿರಂಜನ್ ಶೆಟ್ಟಿ ಅಭಿನಯದ ‘31 ಡೇಸ್’ ಸಿನಿಮಾ ಕೂಡ ಸೆಪ್ಟೆಂಬರ್ 5ಕ್ಕೆ ರಿಲೀಸ್ ಆಗುತ್ತಿದೆ. ರಾಜ ರವಿಕುಮಾರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ವಿನಯ್ ಕುಮಾರ್ ವೈದ್ಯನಾಥನ್ ನಟಿಸಿ ನಿರ್ದೇಶಿಸಿರುವ ‘ಆಸ್ಟಿನ್ನ ಮಹನ್ಮೌನ’ ಸಿನಿಮಾ ಕೂಡ ಇದೇ ದಿನ ತೆರೆ ಕಾಣುತ್ತಿದೆ. ಈ ಎಲ್ಲ ಚಿತ್ರಗಳ ನಡುವೆ ಪೈಪೋಟಿ ಏರ್ಪಡಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




