‘ಅನಿಮಲ್’, ‘ಪುಷ್ಪ 2’ ಸಿನಿಮಾಗಿಂತಲೂ ದೀರ್ಘವಾಗಿದೆ ‘ಬೆಂಗಾಲ್ ಫೈಲ್ಸ್’: 3 ಗಂಟೆ 24 ನಿಮಿಷ
‘ದಿ ಕಾಶ್ಮೀರ್ ಫೈಲ್ಸ್’ ಮೂಲಕ ಖ್ಯಾತಿ ಪಡೆದ ವಿವೇಕ್ ಅಗ್ನಿಹೋತ್ರಿ ಈಗ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಡೆದ ಹತ್ಯಾಕಾಂಡದ ಕುರಿತು ಈ ಸಿನಿಮಾ ಮೂಡಿಬಂದಿದೆ. ಈಗಾಗಲೇ ಟ್ರೇಲರ್ ಗಮನ ಸೆಳೆದಿದೆ. ಸೆಪ್ಟೆಂಬರ್ 5ರಂದು ಬಿಡುಗಡೆ ಆಗಲಿರುವ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾಗೆ ಸೆನ್ಸಾರ್ ಮಂಡಳಿ ‘ಎ’ ಪ್ರಮಾಣಪತ್ರ ನೀಡಿದೆ.

ಈ ಕಾಲದ ಪ್ರೇಕ್ಷಕರಿಗೆ ತಾಳ್ಮೆ ಕಡಿಮೆ ಎಂಬ ಮಾತಿದೆ. ಹಾಗಾಗಿ ಎಷ್ಟೋ ಸಿನಿಮಾ ತಂಡಗಳು ತಮ್ಮ ಚಿತ್ರದ ಅವಧಿಯನ್ನು 2 ಗಂಟೆ ಅಥವಾ ಅದಕ್ಕಿಂತಲೂ ಕಡಿಮೆ ಇರುವಂತೆ ನೋಡಿಕೊಳ್ಳುತ್ತವೆ. ಆದರೆ ಇನ್ನೂ ಕೆಲವು ನಿರ್ದೇಶಕರು ಅಂಥ ನಿರ್ಬಂಧ ಹಾಕಿಕೊಳ್ಳುವುದಿಲ್ಲ. ಕಥೆಗೆ ಎಷ್ಟು ಬೇಕೋ ಅಷ್ಟು ಅವಧಿಯನ್ನು ನೀಡುತ್ತಾರೆ. ಅಂತಹ ಸಿನಿಮಾಗಳು ಕೂಡ ಗೆದ್ದ ಉದಾಹರಣೆ ಇದೆ. ‘ಅನಿಮಲ್’, ‘ಪುಷ್ಪ 2’ ಮುಂತಾದ ಸಿನಿಮಾಗಳೇ ಬೆಸ್ಟ್ ಉದಾಹರಣೆ. ಈಗ ಅವುಗಳ ಸಾಲಿಗೆ ‘ದಿ ಬೆಂಗಾಲ್ ಫೈಲ್ಸ್’ (The Bengal Files) ಸಿನಿಮಾ ಕೂಡ ಸೇರ್ಪಡೆ ಆಗುವ ಸೂಚನೆ ಸಿಕ್ಕಿದೆ.
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ಅವರು ‘ದಿ ಬೆಂಗಾಲ್ ಫೈಲ್ಸ್’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಎಂದಿನಂತೆ ಈ ಬಾರಿ ಕೂಡ ಅವರು ಸತ್ಯ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಟ್ರೇಲರ್ ಈಗಾಗಲೇ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈಗ ಸಿನಿಮಾದ ಅವಧಿ ಎಷ್ಟು ಎಂಬುದು ತಿಳಿದುಬಂದಿದೆ.
‘ಬಾಲಿವುಡ್ ಹಂಗಾಮಾ’ ವರದಿ ಪ್ರಕಾರ, ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾದ ಅವಧಿ ಬರೋಬ್ಬರಿ 3 ಗಂಟೆ 24 ನಿಮಿಷ! ಈ ಹಿಂದೆ ಬಿಡುಗಡೆ ಆದ ‘ಅನಿಮಲ್’ ಮತ್ತು ‘ಪುಷ್ಪ 2’ ಸಿನಿಮಾಗಳ ಅವಧಿ 3 ಗಂಟೆ 21 ನಿಮಿಷ ಇತ್ತು. ಆ ಚಿತ್ರಗಳಿಗಿಂತಲೂ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾದ ಅವಧಿ ಹೆಚ್ಚು ದೀರ್ಘವಾಗಿದೆ. ಸೆಪ್ಟೆಂಬರ್ 5ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಪಲ್ಲವಿ ಜೋಶಿ, ದರ್ಶನ್ ಕುಮಾರ್, ಸಿಮ್ರತ್ ಕೌರ್ ಮುಂತಾದವರು ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣಪತ್ರ ಸಿಕ್ಕಿದೆ. ಅಲ್ಲದೇ, ಚಿತ್ರದಲ್ಲಿನ ಹಲವು ದೃಶ್ಯಗಳಲ್ಲಿ ಒಂದಷ್ಟು ಬದಲಾವಣೆ ಮಾಡುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ. ಸಿನಿಮಾದಲ್ಲಿ ತೋರಿಸಿದ ಘಟನೆಗಳಿಗೆ ಐತಿಹಾಸಿಕ ದಾಖಲೆ ಏನಿದು ಎಂಬುದನ್ನು ಕೂಡ ಸೆನ್ಸಾರ್ ಮಂಡಳಿಗೆ ಚಿತ್ರತಂಡ ಒದಗಿಸಿದೆ.
ಇದನ್ನೂ ಓದಿ: ‘ದಿ ಬೆಂಗಾಲ್ ಫೈಲ್ಸ್’ ಚಿತ್ರದಲ್ಲಿ ತೈಮೂರ್ ಹೆಸರು; ವಿವಾದದ ಬಗ್ಗೆ ಮಾತಾಡಿದ ವಿವೇಕ್ ಅಗ್ನಿಹೋತ್ರಿ
ವಿವೇಕ್ ಅಗ್ನಿಹೋತ್ರಿ ಅವರು ನಿರ್ದೇಶನ ಮಾಡುವ ಸಿನಿಮಾಗಳಲ್ಲಿ ವಿವಾದಿತ ವಿಷಯಗಳು ಇರುತ್ತವೆ. ಪಶ್ಚಿಮ ಬಂಗಾಳದಲ್ಲಿ ನಡೆದ ಹತ್ಯಾಕಾಂಡದ ಬಗ್ಗೆ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಮಾಡಲಾಗಿದೆ. ಈ ಚಿತ್ರದ ಬಿಡುಗಡೆ ಸಮಯದಲ್ಲಿ ಮತ್ತು ಬಿಡುಗಡೆ ನಂತರ ವಿವಾದ ಹೆಚ್ಚಾಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:50 am, Sun, 31 August 25




