‘ಕಡಿಮೆ ಬೆಲೆ ಎಂದು ಮುಸ್ಲಿಮರು ಗೋಮಾಂಸ ಸೇವಿಸುತ್ತಾರೆ, ನಾನು ಅದನ್ನು ತಿಂದೇ ಇಲ್ಲ’
ಪ್ರಸಿದ್ಧ ಬರಹಗಾರ ಸಲೀಮ್ ಖಾನ್ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅಪರೂಪದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅವರು ಗೋಮಾಂಸ ಸೇವಿಸದಿರುವುದು, ಹಿಂದೂ ಧರ್ಮದ ಬಗ್ಗೆ ನಂಬಿಕೆ ಹೊಂದಿರುವುದಾಗಿ ಹೇಳಿದ್ದಾರೆ. ಹಿಂದೂ ಮಹಿಳೆಯೊಂದಿಗೆ 60 ವರ್ಷಗಳ ಸುಖಮಯ ದಾಂಪತ್ಯ ಜೀವನವನ್ನು ಅವರು ವಿವರಿಸಿದ್ದಾರೆ.

ಹಿರಿಯ ಬರಹಗಾರ, ಸಲ್ಮಾನ್ ಖಾನ್ (Salman Khan) ತಂದೆ ಸಲೀಮ್ ಖಾನ್ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡೋದು ತುಂಬಾನೇ ಕಡಿಮೆ. ಅವರು ಇತ್ತೀಚೆಗೆ ಸಂದರ್ಶನ್ ಒಂದರಲ್ಲಿ ತಮ್ಮ ಧರ್ಮದ ಬಗ್ಗೆ, ತಮ್ಮ ಆಹಾರ ಪದ್ಧತಿ ಬಗ್ಗೆ ಮಾತನಾಡಿದ್ದಾರೆ. ಅವರು ಎಂದಿಗೂ ಗೋ ಮಾಂಸ ಸೇವನೆ ಮಾಡಿಲ್ಲವಂತೆ. ಹಿಂದೂ ಧರ್ಮದ ಬಗ್ಗೆಯೂ ನಂಬಿಕೆ ಇದೆ ಎಂದು ಅವರು ಹೇಳಿಕೊಂಡಿದ್ದಾರೆ.
‘ನಾವು ಇಂದೋರ್ನಲ್ಲಿ ವಾಸವಾಗಿದ್ದೆವು. ಅಲ್ಲಿಂದ, ಇಲ್ಲಿಯವರೆಗೆ ನಾನು ಗೋ ಮಾಂಸ ತಿಂದಿಲ್ಲ. ಗೋಮಾಂಸವು ಅತ್ಯಂತ ಅಗ್ಗದ ಮಾಂಸ ಎಂಬ ಕಾರಣಕ್ಕೆ ಹೆಚ್ಚಿನ ಮುಸ್ಲಿಮರು ಅದನ್ನು ಸೇವಿಸುತ್ತಾರೆ! ಕೆಲವರು ಸಾಕು ನಾಯಿಗಳಿಗೆ ಆಹಾರಕ್ಕಾಗಿಯೂ ಇದನ್ನು ಖರೀದಿ ಮಾಡುತ್ತಾರೆ. ಪ್ರವಾದಿ ಮೊಹಮ್ಮದ್ ಎಲ್ಲಾ ಧರ್ಮಗಳಿಂದ ಒಳ್ಳೆಯ ವಿಷಯಗಳನ್ನು ಅಳವಡಿಸಿಕೊಂಡಿದ್ದಾರೆ. ಅವರ ಬೋಧನೆಗಳಲ್ಲಿ ಹಸುವಿನ ಹಾಲು ತಾಯಿಯ ಹಾಲಿಗೆ ಸಮ ಎಂದು ಹೇಳಿದ್ದಾರೆ’ ಎಂದು ಸಲೀಮ್ ಖಾನ್ ಹೇಳಿದ್ದಾರೆ.
‘ನಾನು ಹಿಂದೂಗಳ ಮಧ್ಯೆ ಬದುಕಿದ್ದೇನೆ. ನಮ್ಮ ತಂದೆ ಪೊಲೀಸ್ ಆಗಿದ್ದರು. ಠಾಣೆಯಲ್ಲಿ, ಮನೆಯಲ್ಲಿ ನಾವು ಹಿಂದೂ ಹಬ್ಬಗಳನ್ನು ಆಚರಿಸುತ್ತಿದ್ದೆವು. ನನ್ನ ಮದುವೆ ನಂತರವೇ ಮನೆಯಲ್ಲಿ ಗಣಪತಿ ಇಡಲು ಆರಂಭಿಸಿದ್ದು ಎಂದು ಹೇಳಲು ಸಾಧ್ಯವಿಲ್ಲ. ಮೊದಲೂ ಈ ಹಬ್ಬ ಆಚರಿಸುತ್ತಿದ್ದೆ. ನನ್ನ ಕುಟುಂಬದಲ್ಲಿ ಯಾರಿಗೂ ನಾನು ಸುಶೀಲಾ ಚರಕ್ (ಈಗ ಸಲ್ಮಾ) ಅವರನ್ನು ಮದುವೆಯಾಗುವುದಕ್ಕೆ ಆಕ್ಷೇಪವಿರಲಿಲ್ಲ’ ಎಂದಿದ್ದಾರೆ ಅವರು.
‘ನನ್ನ ಮಾವ ದಂತವೈದ್ಯರಾಗಿದ್ದರು. ಅವರು ಧರ್ಮದ ಕಾರಣದಿಂದಾಗಿ ನಮ್ಮ ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ನಮ್ಮ ಬಲವಾದ ಬಾಂಧವ್ಯವನ್ನು ಅರ್ಥಮಾಡಿಕೊಂಡ ನಂತರ, ನನ್ನ ಬ್ಯಾಕ್ಗ್ರೌಂಡ್ ಪರಿಶೀಲಿಸಿದ ಬಳಿಕ ಅವರು ಸಹ ಒಪ್ಪಿಕೊಂಡರು. ನಾವು ಮದುವೆಯಾಗಿ 60 ವರ್ಷಗಳಾಗಿವೆ, ಆದರೆ ಇಲ್ಲಿಯವರೆಗೆ ಧರ್ಮವು ನಮ್ಮ ಸಂಬಂಧಕ್ಕೆ ಎಂದಿಗೂ ಅಡ್ಡಿಯಾಗಿಲ್ಲ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಗಣೇಶನಿಗೆ ಆರತಿ ಮಾಡಿ ಪೂಜಿಸಿದ ಸಲ್ಮಾನ್ ಖಾನ್ ಮತ್ತು ಕುಟುಂಬ
ಸಲೀಮ್ ಖಾನ್ ಅವರು ಹಿಂದೂ ಹಾಗೂ ಮುಸ್ಲಿಂ ಸಂಪ್ರದಾಯದಂತೆ ವಿವಾಹ ಆಗಿದ್ದರಂತೆ. ಅವರ ಪತ್ನಿಗೆ ಹಿಂದೂ ಸಂಪ್ರದಯಾದಂತೆ ವಿವಾಹ ಆಗಬೇಕು ಎನ್ನುವ ಆಸೆ ಇತ್ತು. ಅವರು ಅದೇ ರೀತಿ ಮಾಡಿದ್ದರು. ಸಲೀಮ್ ಖಾನ್ ಹಾಗೂ ಜಾವೇದ್ ಜೋಡಿ ಸಾಕಷ್ಟು ಹಿಟ್ ಚಿತ್ರಗಳಿಗೆ ಕಥೆ ಬರೆದಿದೆ. ಕನ್ನಡದಲ್ಲಿ ‘ಪ್ರೇಮದ ಕಾಣಿಕೆ’ ಹಾಗೂ ‘ರಾಜ ನನ್ನ ರಾಜ’ ಚಿತ್ರಕ್ಕೆ ಕಥೆ ಬರೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








