ಧೂಳೆಬ್ಬಿಸಿದ ರಾಜ್ ಬಿ. ಶೆಟ್ಟಿ ಹಂಚಿಕೆ ಮಾಡ್ತಿರೋ ‘ಲೋಕಃ’ ಸಿನಿಮಾ; 9.5 ರೇಟಿಂಗ್
ರಾಜ್ ಬಿ. ಶೆಟ್ಟಿ ಅವರು 'ಸು ಫ್ರಮ್ ಸೋ' ಯಶಸ್ಸಿನ ನಂತರ ಮಲಯಾಳಂ ಚಿತ್ರ 'ಲೋಕಃ' ಅನ್ನು ಕರ್ನಾಟಕದಲ್ಲಿ ಹಂಚಿಕೆ ಮಾಡುತ್ತಿದ್ದಾರೆ. ಈ ಚಿತ್ರವು ಬುಕ್‌ಮೈಶೋದಲ್ಲಿ 9.5 ರೇಟಿಂಗ್ ಪಡೆದುಕೊಂಡಿದೆ. ಕಲ್ಯಾಣಿ ಪ್ರಿಯದರ್ಶನ್ ಮತ್ತು ನಸ್ಲೆನ್ ಅಭಿನಯಿಸಿರುವ ಈ ಫ್ಯಾಂಟಸಿ-ಸಸ್ಪೆನ್ಸ್ ಚಿತ್ರವು ಬೆಂಗಳೂರಿನಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

ರಾಜ್ ಬಿ. ಶೆಟ್ಟಿ ಅವರು ಇತ್ತೀಚೆಗಷ್ಟೇ ‘ಸು ಫ್ರಮ್ ಸೋ’ ಸಿನಿಮಾ ಮೂಲಕ ದೊಡ್ಡ ಯಶಸ್ಸು ಕಂಡಿದ್ದಾರೆ. ಹೀಗಿರುವಾಗಲೇ ಅವರು ಮಲಯಾಳಂ ಚಿತ್ರ ‘ಲೋಕಃ’ (Lokah) ಕರ್ನಾಟಕದಲ್ಲಿ ಹಂಚಿಕೆ ಮಾಡೋ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಈ ಚಿತ್ರಕ್ಕೆ ಎಲ್ಲ ಕಡೆಗಳಲ್ಲಿ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಈ ಸಿನಿಮಾ ಬುಕ್ ಮೈ ಶೋನಲ್ಲಿ ಸದ್ಯ, (ಆಗಸ್ಟ್ 30ರ ಬೆಳಿಗ್ಗೆ 7 ಗಂಟೆ) 9.5 ರೇಟಿಂಗ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಬರೋಬ್ಬರಿ 13.5 ಸಾವಿರ ಮಂದಿ ರೇಟಿಂಗ್ ನೀಡಿದ್ದಾರೆ. ಈ ಚಿತ್ರಕ್ಕೆ ಬಾಯ್ಮಾತಿನ ಪ್ರಚಾರ ಸಿಗುತ್ತಿದೆ.
‘ಲೋಕಃ’ ಸಿನಿಮಾದಲ್ಲಿ ‘ಹೃದಯಂ’ ಖ್ಯಾತಿಯ ಕಲ್ಯಾಣಿ ಪ್ರಿಯದರ್ಶನ್ ಹಾಗೂ ‘ಪ್ರೇಮಲು’ ಮೂಲಕ ಜನಪ್ರಿಯತೆ ಪಡೆದ ನಸ್ಲೆನ್ ನಟಿಸಿದ್ದಾರೆ. ಈ ಚಿತ್ರ ಆಗಸ್ಟ್ 28ರಂದು ರಿಲೀಸ್ ಆಗಿದೆ. ಎರಡು ದಿನದಲ್ಲಿ ಸಿನಿಮಾ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಈ ಸಿನಿಮಾನ ಕರ್ನಾಟಕದಲ್ಲಿ ರಾಜ್ ಬಿ. ಶೆಟ್ಟಿ ಅವರ ಲೈಟರ್ ಬುದ್ಧ ಫಿಲ್ಮ್ಸ್ಸ್ ಹಂಚಿಕೆ ಮಾಡುತ್ತಿದೆ. ಈ ಸಿನಿಮಾನ ಮಲಯಾಳಂನಲ್ಲಿ ದುಲ್ಖರ್ ಸಲ್ಮಾನ್ ನಿರ್ಮಾಣ ಮಾಡಿದ್ದಾರೆ.
ಫ್ಯಾಂಟಸಿ, ಸಸ್ಪೆನ್ಸ್ಗಳನ್ನು ‘ಲೋಕಃ’ ಒಳಗೊಂಡಿದೆ. ಬೆಂಗಳೂರಿನಲ್ಲಿ ಈ ಚಿತ್ರ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಅನೇಕ ಶೋಗಳು ಹೌಸ್‌ಫುಲ್ ಪ್ರದರ್ಶನ ಕಂಡಿವೆ. ಶನಿವಾರ ಹಾಗೂ ಭಾನುವಾರ ಅನೇಕ ಕಡೆಗಳಲ್ಲಿ ಹೌಸ್‌ಫುಲ್ ಆಗಿದೆ. ಈ ಚಿತ್ರ 6.45 ಕೋಟಿ ರೂಪಾಯಿ ಗಳಿಸಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಮತ್ತಷ್ಟು ಕಲೆಕ್ಷನ್ ಮಾಡುವ ಸಾಧ್ಯತೆ ಇದೆ.
ಲೋಕಃ ಟ್ರೇಲರ್
ಈ ಮೊದಲು ಕನ್ನಡದ ‘ಸು ಫ್ರಮ್ ಸೋ’ ಚಿತ್ರವನ್ನು ದುಲ್ಖರ್ ಸಲ್ಮಾನ್ ಅವರು ಮಲಯಾಳಂನಲ್ಲಿ ಹಂಚಿಕೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ರಾಜ್ ಅವರು ‘ಲೋಕಃ’ ಚಿತ್ರವನ್ನು ಕರ್ನಾಟಕದಲ್ಲಿ ಹಂಚಿಕೆ ಮಾಡುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಸದ್ಯ ಈ ಚಿತ್ರ ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ಮಾತ್ರ ಲಭ್ಯವಿದೆ. ಈ ಚಿತ್ರವನ್ನು ಕನ್ನಡದಲ್ಲೂ ರಿಲೀಸ್ ಮಾಡಬೇಕು ಎಂಬ ಕೂಗು ಕೇಳಿ ಬಂದಿದೆ. ಈ ಚಿತ್ರ ಕನ್ನಡ ಭಾಷೆಯಲ್ಲಿ ಲಭ್ಯವಾಗಲಿದೆಯೋ ಅಥವಾ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇದನ್ನೂ ಓದಿ: ಕೇರಳದಲ್ಲಿ ‘ಸು ಫ್ರಮ್ ಸೋ’ ಹಂಚಿಕೆಗೆ ಸಹಾಯ ಮಾಡಿದ್ದ ದುಲ್ಖರ್ ಸಲ್ಮಾನ್ ಋಣ ತೀರಿಸಿದ ರಾಜ್ ಬಿ ಶೆಟ್ಟಿ
ದುಲ್ಖರ್ ಸಲ್ಮಾನ್ ಅವರು ಹೊಸ ಪ್ರತಿಭೆಗಳಿಗೆ ಮಣೆ ಹಾಕುತ್ತಿದ್ದಾರೆ. ಅವರ ನಿರ್ಮಾಣ ಸಂಸ್ಥೆಯಲ್ಲಿ ಮೂಡಿ ಬಂದ 7ನೇ ಸಿನಿಮಾ ಇದು. ಡಾಮಿನಿಕ್ ಅರುಣ್ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. 2017ರಲ್ಲಿ ‘ತರಂಗಂ’ ಹೆಸರಿನ ಸಿನಿಮಾ ಮಾಡಿ ಅವರು ಫೇಮಸ್ ಆಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:57 am, Sat, 30 August 25








