ಚಿತ್ರದುರ್ಗದ ಹುಡುಗರ ‘ಮಾಯಾವಿ’ ಸಿನಿಮಾ; ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಸದ್ಯದಲ್ಲೇ ತೆರೆಗೆ
‘ಮಾಯಾವಿ’ ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ ಯು ಸರ್ಟಿಫಿಕೇಟ್ ಸಿಕ್ಕಿದೆ ಎಂದು ಚಿತ್ರತಂಡ ಹೇಳಿದೆ. ಚಿತ್ರದುರ್ಗ, ಹೊಸಪೇಟೆ, ಬೆಂಗಳೂರು ಸುತ್ತಮುತ್ತ ಈ ಸಿನಿಮಾದ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ರಘುರಾಮ್, ನಿಶ್ಚಿತಾ ಶೆಟ್ಟಿ ಅವರು ‘ಮಾಯಾವಿ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಟ್ರೇಲರ್ ಬಿಡುಗಡೆ ಆಗಿದೆ.

ಚಿತ್ರರಂಗಕ್ಕೆ ಹೊಸಬರ ಪ್ರವೇಶ ಆಗುತ್ತಲೇ ಇದೆ. ಈಗ ಹೊಸಬರೇ ಸೇರಿಕೊಂಡು ಮಾಡಿರುವ ‘ಮಾಯಾವಿ’ ಸಿನಿಮಾ (Maayavi Movie) ಬಿಡುಗಡೆ ಸಜ್ಜಾಗಿದೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಚಿತ್ರತಂಡ ಮುಗಿಸಿಕೊಂಡಿದೆ. ಇತ್ತೀಚೆಗೆ ಟ್ರೇಲರ್ ಹಾಗೂ ಹಾಡುಗಳನ್ನು ರಿಲೀಸ್ ಮಾಡಲಾಯಿತು. ಆ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನಿಡಲಾಯಿತು. ಚಿತ್ರದುರ್ಗ (Chitradurga) ಮೂಲದ ಹೊಸ ನಟ ರಘುರಾಮ್ (Raghuram) ಅವರು ‘ಮಾಯಾವಿ’ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ನಿಶ್ಚಿತಾ ಶೆಟ್ಟಿ ಅಭಿನಯಿಸಿದ್ದಾರೆ.
ರಘುರಾಮ್, ನಿಶ್ಚಿತಾ ಶೆಟ್ಟಿ ಮಾತ್ರವಲ್ಲದೇ ಎಂ.ಕೆ. ಮಠ, ಸುರೇಶ ಬಾಬು, ಸೂರ್ಯ ಪ್ರವೀಣ್, ಅನುರಾಧಾ, ಖುಷಿ ಗೌಡ, ಶಿಲ್ಪಾ ಮುಂತಾದವರು ‘ಮಾಯಾವಿ’ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ‘ಶ್ರೀದುರ್ಗಾ ಸೆಕ್ಯುರಿಟಿ ಸರ್ವೀಸಸ್’ ಸಂಸ್ಥೆಯ ಮೂಲಕ ಡಾ. ಮಹಂತೇಶ್ ಹೆಚ್. ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶಂಕರ್ ಜಿ. ಅವರು ‘ಮಾಯಾವಿ’ ಚಿತ್ರಕ್ಕೆ ಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ.
ಜನಾರ್ಧನ ಸ್ವಾಮಿ, ಸುನಾಮಿ ಕಿಟ್ಟಿ, ಗಣೇಶ ರಾವ್ ಕೇಸರ್ಕರ್ ಮುಂತಾದವರು ‘ಮಾಯಾವಿ’ ಸಿನಿಮಾದ ಟ್ರೇಲರ್, ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ‘ನಾವು ಆರಂಭದಲ್ಲಿ ಅಂದುಕೊಂಡಂತೆಯೇ ಸಿನಿಮಾ ಬಹಳ ಚೆನ್ನಾಗಿ ಮೂಡಿಬಂದಿದೆ. ಚಿತ್ರದುರ್ಗ ಮೂಲದ ಬಹುತೇಕ ಹೊಸ ಪ್ರತಿಭೆಗಳಿಗಾಗಿ ಈ ಸಿನಿಮಾ ಮಾಡಿದ್ದೇವೆ’ ಎಂದು ನಿರ್ಮಾಪಕ ಡಾ. ಮಹಂತೇಶ್ ಹೆಚ್. ಹೇಳಿದರು.

Maayavi Movie Team
ಟ್ರೇಲರ್ ಹಾಗೂ ಆಡಿಯೋ ಬಿಡುಗಡೆ ನಟ ರಘುರಾಮ್ ಮಾತಾಡಿದರು. ‘ಚಿತ್ರದುರ್ಗದ ನಾನು ಇಂಜಿನಿಯರಿಂಗ್ ಪದವಿ ಪಡೆದು, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಸಿನಿಮಾದಲ್ಲಿ ಅಭಿನಯಿಸಬೇಕು ಎಂಬುದು ನನಗೆ ಮೊದಲಿನಿಂದಲೂ ಇದ್ದ ಕನಸು. ಆ ಕನಸು ಮಾಯಾವಿ ಚಿತ್ರದ ಮೂಲಕ ನನಸಾಗುತ್ತಿದೆ. ಇದರಲ್ಲಿ ನನಗೆ 2 ಶೇಡ್ ಇರುವ ಪಾತ್ರವಿದೆ’ ಎಂದು ಅವರು ಹೇಳಿದರು.
ಇದನ್ನೂ ಓದಿ: ‘ನೀವು ನನ್ನಿಂದ ಅದನ್ನು ನಿರೀಕ್ಷಿಸಬೇಡಿ’; ಅಭಿಮಾನಿಗಳಿಗೆ ನೇರವಾಗಿ ಹೇಳಿದ ರಾಜ್ ಬಿ. ಶೆಟ್ಟಿ
ನಿರ್ದೇಶಕ ಶಂಕರ್ ಜಿ. ಮಾತನಾಡಿ, ‘ಇದೊಂದು ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ ಕಥಾಹಂದರ ಇರುವ ಸಿನಿಮಾ. ಚಿತ್ರದ ಕೊನೆಯಲ್ಲಿ ಒಂದು ಸಂದೇಶವಿದೆ. ಎಲ್ಲ ಥರದ ಪ್ರೇಕ್ಷಕರಿಗೂ ಇಷ್ಟ ಆಗುವಂತಹ ಸಿನಿಮಾ ಮಾಡಿದ್ದೇವೆ. ಲವ್, ಸೆಂಟಿಮೆಂಟ್, ಆ್ಯಕ್ಷನ್ ಮುಂತಾದ ಅಂಶಗಳು ಇದರಲ್ಲಿ ಇವೆ’ ಎಂದರು. ‘ಮಾಯಾವಿ’ ಸಿನಿಮಾದ 2 ಹಾಡುಗಳಿಗೆ ಅಗಸ್ತ್ಯ ಸಂತೋಷ್ ಸಂಗೀತ ನೀಡಿದ್ದಾರೆ. ಗುರುದತ್ತ ಮುಸುರಿ ಅವರ ಛಾಯಾಗ್ರಹಣ, ಅನಿಲ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




