‘ದಿ ಬೆಂಗಾಲ್ ಫೈಲ್ಸ್’ ಚಿತ್ರದಲ್ಲಿ ತೈಮೂರ್ ಹೆಸರು; ವಿವಾದದ ಬಗ್ಗೆ ಮಾತಾಡಿದ ವಿವೇಕ್ ಅಗ್ನಿಹೋತ್ರಿ
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಬೆಂಗಾಲ್ ಫೈಲ್ಸ್’ ಚಿತ್ರದಲ್ಲಿ ತೈಮೂರ್ ಎಂಬ ಪಾತ್ರವಿದೆ. ಈ ಸಿನಿಮಾದ ಟ್ರೇಲರ್ ಬಿಡುಗಡೆ ಆದಾಗಿನಿಂದ ಈ ಹೆಸರಿನ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ತೈಮೂರ್ ಎಂದು ಮಕ್ಕಳಿಗೆ ಹೆಸರು ಇಡುವವರನ್ನು ವಿವೇಕ್ ಅಗ್ನಿಹೋತ್ರಿ ಟೀಕಿಸಿದ್ದಾರೆ. ಅದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ.

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರ ಎಲ್ಲ ಸಿನಿಮಾಗಳು ಬಿಡುಗಡೆ ಆಗುವಾಗ ಒಂದಲ್ಲಾ ಒಂದು ವಿವಾದ ಹುಟ್ಟುಹಾಕುತ್ತವೆ. ಈಗ ಅವರು ನಿರ್ದೇಶಿಸಿರುವ ‘ದಿ ಬೆಂಗಾಲ್ ಫೈಲ್ಸ್’ (The Bengal Files) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸೆಪ್ಟೆಂಬರ್ 5ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಇದರಲ್ಲಿ ಕೂಡ ಒಂದು ವಿವಾದಾತ್ಮಕ ಕಥೆ ಇದೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಯಿತು. ಟ್ರೇಲರ್ ಆರಂಭದಲ್ಲೇ ತೈಮೂರ್ (Taimur) ಎಂಬ ಹೆಸರನ್ನು ಬಳಸಲಾಗಿದೆ. ಇದು ವಿವಾದಕ್ಕೆ ಕಾರಣ ಆಗಿದೆ. ಭಾರತದಲ್ಲಿ ಯಾರೂ ಕೂಡ ತಮ್ಮ ಮಕ್ಕಳಿಗೆ ತೈಮೂರ್ ಎಂದು ಹೆಸರು ಇಡಬಾರದು ಎಂದಿದ್ದಾರೆ ವಿವೇಕ್ ಅಗ್ನಿಹೋತ್ರಿ.
ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅವರು ತಮ್ಮ ಮೊದಲ ಮಗನಿಗೆ ತೈಮೂರ್ ಅಲಿ ಖಾನ್ ಎಂದು ಹೆಸರು ಇಟ್ಟಿದ್ದಾರೆ. ಈ ಹೆಸರು ಇಟ್ಟಾಗ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಈಗ ಈ ದಂಪತಿಗೆ ತಿರುಗೇಟು ನೀಡುವು ಉದ್ದೇಶದಿಂದಲೇ ವಿವೇಕ್ ಅಗ್ನಿಹೋತ್ರಿ ಅವರು ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾದಲ್ಲಿ ತೈಮೂರ್ ಎಂಬ ಹೆಸರು ಬಳಸಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
ಆ ಪ್ರಶ್ನೆಗೆ ವಿವೇಕ್ ಅಗ್ನಿಹೋತ್ರಿ ಅವರು ಉತ್ತರ ನೀಡಿದ್ದಾರೆ. ‘ಅನೇಕರಿಗೆ ತೈಮೂರ್ ಎಂದು ಹೆಸರು ಇಡಲಾಗಿದೆ. ತಮ್ಮ ಮಗನಿಗೆ ತೈಮೂರ್ ಎಂದು ಹೆಸರು ಇಟ್ಟವರಲ್ಲಿ ಸೈಫ್ ಅಲಿ ಖಾನ್ ಮೊದಲಿಗರೇನಲ್ಲ’ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ. ಈ ಹೆಸರನ್ನು ಯಾಕೆ ಮಕ್ಕಳಿಗೆ ಇಡಬಾರದು ಎಂಬುದಕ್ಕೂ ವಿವೇಕ್ ಅಗ್ನಿಹೋತ್ರಿ ಅವರು ವಿವರ ನೀಡಿದ್ದಾರೆ.
‘ಒಂದೇ ರಾತ್ರಿಯಲ್ಲಿ ಒಂದು ಲಕ್ಷ ಜನರನ್ನು ತೈಮೂರ್ ಸಾಯಿಸಿದ್ದ. ದೆಹಲಿಯಿಂದ ಕಾಶ್ಮೀರದ ತನಕ ಹತ್ಯಾಕಾಂಡ ನಡೆಸಿದ್ದ. ದಾರಿಯುದ್ದಕ್ಕೂ ದರೋಡೆ ಮತ್ತು ಅತ್ಯಾಚಾರ ನಡೆಸಿದ್ದ. ಹೌದು, ಅವನ ದೇಶಕ್ಕೆ ಅವನು ಹೀರೋ. ಆದರೆ ನಮಗಲ್ಲ. ಯಾರೂ ಕೂಡ ತಮ್ಮ ಮಕ್ಕಳಿಗೆ ತೈಮೂರ್ ಎಂದು ಹೆಸರು ಇಡಬಾರದು. ಯಾಕೆ ಎಂಬ ಪ್ರಶ್ನೆಯೇ ಬರಬಾರದು’ ಎಂದು ವಿವೇಕ್ ಅಗ್ನಿಹೋತ್ರಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ಅಮೆರಿಕದ ಜನಪ್ರತಿನಿಧಿಗಳಿಗೆ ‘ದಿ ಬೆಂಗಾಲ್ ಫೈಲ್ಸ್’ ಬಗ್ಗೆ ತಿಳಿಸಿ ಹೇಳಿದ ವಿವೇಕ್ ಅಗ್ನಿಹೋತ್ರಿ
ಐದೇ ದಿನಗಳಲ್ಲಿ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾದ ಟ್ರೇಲರ್ 14 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆ ಕಂಡಿದೆ. ಬಂಗಾಳದಲ್ಲಿ ನಡೆದ ಕೋಮು ಗಲಭೆಯ ಕುರಿತು ಈ ಸಿನಿಮಾ ಮಾಡಲಾಗಿದೆ. ‘ದಿ ಕಾಶ್ಮೀರ್ ಫೈಲ್ಸ್’ ರೀತಿಯೇ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಕೂಡ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಹಾಗೆಯೇ ವಿವಾದ ಕೂಡ ಭುಗಿಲೇಳಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








