ಬಾಲಿವುಡ್ ಹೀರೋಗಳ ಬಣ್ಣ ಬಯಲು ಮಾಡಿದ ಸೋನು ಸೂದ್
Sonu Sood: ನಟ ಸೋನು ಸೂದ್ ಮೂಲತಃ ಹಿಂದಿ ನಟರಾದರೂ ತೆಲುಗು, ಕನ್ನಡ, ತಮಿಳು ಹೀಗೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಮೊದಲ ಬಾರಿಗೆ ಸಿನಿಮಾ ನಿರ್ದೇಶಕನಾಗಿ ಎಂಟ್ರಿ ಕೊಡಲು ಸಜ್ಜಾಗಿರುವ ಸೋನು ಸೂದ್, ಬಾಲಿವುಡ್ನ ಕೆಲ ಕೆಟ್ಟ ಪದ್ಧತಿಗಳ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಬಾಲಿವುಡ್ ನಟರ ಅಶಿಸ್ತಿನ ಬಗ್ಗೆಯೂ ಹೇಳಿದ್ದಾರೆ.
ಸೋನು ಸೂದ್ ಮೂಲತಃ ಹಿಂದಿ ನಟರಾದರು ಅವರು ಕೇವಲ ಬಾಲಿವುಡ್ಗೆ ತಮ್ಮನ್ನು ಸೀಮಿತ ಮಾಡಿಕೊಂಡಿಲ್ಲ. ತೆಲುಗು, ಕನ್ನಡ, ತಮಿಳು ಹೀಗೆ ಅವಕಾಶ ಸಿಕ್ಕ ಭಾಷೆಗಳಲ್ಲೆಲ್ಲ ನಟಿಸುತ್ತಲೇ ಬಂದಿದ್ದಾರೆ. ತೆಲುಗು ಚಿತ್ರರಂಗದಲ್ಲಂತೂ ಹಲವು ನೆನಪುಳಿಯುವ ವಿಲನ್ ಪಾತ್ರಗಳಲ್ಲಿ ಸೋನು ಸೂದ್ ನಟಿಸಿದ್ದಾರೆ. ಕೋವಿಡ್ ಸಮಯದಲ್ಲಿ ಸೋನು ಸೂದ್ ಮಾಡಿದ ಕೆಲಸಗಳು ಅವರನ್ನು ಭಾರಿ ಜನಪ್ರಿಯಗೊಳಿಸಿತ್ತು. ಅವರನ್ನು ‘ಮಸೀಹ’ (ಆಪತ್ತಕ್ಕೆ ಬರುವ ದೇವರು) ಎಂದು ಕರೆಯಲಾಗುತ್ತಿತ್ತು. ಹಲವು ಭಾಷೆಗಳಲ್ಲಿ ನಟಿಸಿರುವ ಸೋನು ಸೂದ್ ಅವರಿಗೆ ಬೇರೆ ಚಿತ್ರರಂಗದ ಪದ್ಧತಿಗಳು, ಅಲ್ಲಿನ ನಟರುಗಳು ವೈಯಕ್ತಿಕವಾಗಿ ಗೊತ್ತು. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಸೋನು ಸೂದ್, ಬಾಲಿವುಡ್ ನಟರ ನಿಜ ಬಣ್ಣ ಬಯಲು ಮಾಡಿದ್ದಾರೆ.
ಬಾಲಿವುಡ್ ನಟರು ಹೊರಗೆ ಹೋದಾಗ ಪಾಪರಾಟ್ಜಿಗಳು, ಅಭಿಮಾನಿಗಳು ಅವರನ್ನು ಸುತ್ತುವರೆಯುವುದು ನೋಡಿಯೇ ಇರುತ್ತೀರಿ. ಆದರೆ ಇದು ನಿಜವಲ್ಲ ಎಂದಿದ್ದಾರೆ ಸೋನು ಸೂದ್. ಪಾಪರಾಟ್ಜಿಗಳಿಗೆ ನಟರು ಮೊದಲೇ ಮಾಹಿತಿ ನೀಡಿರುತ್ತಾರಂತೆ ಇಂಥಹಾ ಕಡೆ ಹೋಗುತ್ತಿದ್ದೀವಿ ನೀವು ಬನ್ನಿ ಎಂದು. ಮಾತ್ರವಲ್ಲದೆ, ನಟರು ಎಲ್ಲಾದರೂ ಹೋದಾಗ ಅವರ ಬಾಡಿಗಾರ್ಡ್ಗಳು ಬೇಕೆಂದೇ ಜೋರಾಗಿ ಸದ್ದು ಮಾಡುವುದು, ಸುಮ್ಮನೆ ನಕಲಿ ಗಡಿಬಿಡಿ ಮಾಡಿ ಜನರ ಗಮನ ಸೆಳೆಯುವ ಕಾರ್ಯ ಮಾಡುತ್ತಾರಂತೆ. ಇದರಿಂದ ಜನ ಗಮನ ಹರಿಸಿ ನಟರನ್ನು ಸುತ್ತುವರಿಯುವಂತೆ ಮಾಡುತ್ತಾರಂತೆ.
ಇದನ್ನೂ ಓದಿ:ಸೋನು ಸೂದ್ಗೆ ಕೊಡಲಾಗಿತ್ತು ಸಿಎಂ, ಡಿಸಿಎಂ ಪದವಿಯ ಆಫರ್, ಕೈಬಿಟ್ಟಿದ್ದು ಏಕೆ?
ಬಾಲಿವುಡ್ ನಟರ ಅಶಿಸ್ತಿನ ಬಗ್ಗೆಯೂ ಮಾತನಾಡಿರುವ ಸೋನು ಸೂದ್, ‘ಕೆಲ ಬಾಲಿವುಡ್ ನಟರು, ಬೆಳಿಗ್ಗೆ ನಿಗದಿ ಆಗಿರುವ ಸಿನಿಮಾ ಶೂಟಿಂಗ್ಗೆ ಮಧ್ಯಾಹ್ನ 3 ಗಂಟೆಗೆ ಬರುತ್ತಾರೆ. ಆ ವರೆಗೆ ಬೇರೆ ನಟರು, ತಂತ್ರಜ್ಞರು ಎಲ್ಲ ಕಾಯುತ್ತಿರುತ್ತಾರೆ. ಅದರಿಂದ ನಿರ್ಮಾಪಕರಿಗೆ ಭಾರಿ ನಷ್ಟವಾಗುತ್ತದೆ. ಮಾತ್ರವಲ್ಲದೆ ನಿರ್ಮಾಪಕರು ಸಹ ವಿದೇಶಗಳಲ್ಲಿ ಶೂಟಿಂಗ್ ಇದ್ದರೆ 100 ಜನರನ್ನು ಕರೆದೊಯ್ಯುವ ಬದಲಿಗೆ 150-200 ಜನರನ್ನು ಕರೆದೊಯ್ಯುತ್ತಾರೆ. ಇದರಿಂದ ಅನವಶ್ಯಕ ಖರ್ಚುಗಳಾಗಿ ಸಿನಿಮಾದ ಬಜೆಟ್ ಕೈಮೀರಿ ಹೋಗುತ್ತದೆ’ ಎಂದಿದ್ದಾರೆ.
ಇದೀಗ ‘ಫತೇಹಿ’ ಹೆಸರಿನ ಸಿನಿಮಾ ನಿರ್ದೇಶನವನ್ನು ಸೋನು ಸೂದ್ ಮಾಡುತ್ತಿದ್ದಾರೆ. ಇದು ನಿರ್ದೇಶಕನಾಗಿ ಅವರ ಮೊದಲ ಸಿನಿಮಾ. ಈ ಬಗ್ಗೆ ಮಾತನಾಡಿರುವ ಸೋನು ಸೂದ್, ‘ನಾನು ‘ಫತೇಹಿ’ ಸಿನಿಮಾ ಶೂಟಿಂಗ್ಗಾಗಿ ಲಂಡನ್ಗೆ ಹೋಗಿದ್ದೆ. ನಾನು ಮಾತ್ರವೇ ಹೋಗಿ ಅಲ್ಲಿ ಕೇವಲ 12 ಜನರ ಸ್ಥಳೀಯ ತಂಡವನ್ನು ಬಾಡಿಗೆಗೆ ಪಡೆದೆ. ಅದಕ್ಕೆ ಅಗತ್ಯವಾದ ಅನುಮತಿಗಳನ್ನು ಪಡೆದುಕೊಂಡೆ. ಕೆಲವೇ ದಿನಗಳಲ್ಲಿ ಶೂಟಿಂಗ್ ಮುಗಿಸಿ ವಾಪಸ್ಸಾದೆ’ ಎಂದಿದ್ದಾರೆ ಸೋನು ಸೂದ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ