
ನಟ ಶಿವರಾಜ್ಕುಮಾರ್ ಹಾಗೂ ನಿರ್ದೇಶಕ ಪವನ್ ಒಡೆಯರ್ ಅವರ ಕಾಂಬಿನೇಷನ್ನಲ್ಲಿ ‘ಬೇಲ್’ ಸಿನಿಮಾ ಮೂಡಿಬಂದಿದೆ. ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣದ ಈ ಚಿತ್ರ ಅಕ್ಟೋಬರ್ 2ರಂದು ಬಿಡುಗಡೆ ಆಗಿದೆ. 2022ರಲ್ಲಿ ಬಂದ ‘ರೇಮೋ’ ಸಿನಿಮಾ ಬಳಿಕ ಪವನ್ ಒಡೆಯರ್ ಅವರು ಒಂದು ಸಣ್ಣ ಬ್ರೇಕ್ ತೆಗೆದುಕೊಂಡಿದ್ದರು. ‘ಬೇಲ್’ ಸಿನಿಮಾ ಮೂಲಕ ಅವರು ನಿರ್ದೇಶನಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಈ ಬಾರಿ ಅವರು ಮಾಸ್ ಮತ್ತು ಕ್ಲಾಸ್ ಎರಡೂ ವರ್ಗದ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ಕಾನೂನಿನಲ್ಲಿ ಇರುವ ಲೋಪಗಳನ್ನು ದುರ್ಬಳಕೆ ಮಾಡಿಕೊಂಡು ಅಪರಾಧಿಗಳು ಯಾವ ರೀತಿ ಬಚಾವ್ ಆಗುತ್ತಾರೆ ಮತ್ತು ಅಂಥವರಿಗೆ ಹೀರೋ ಯಾವ ರೀತಿ ಶಿಕ್ಷೆ ನೀಡುತ್ತಾನೆ ಎಂಬುದೇ ಈ ಸಿನಿಮಾದ ಕಥಾಹಂದರ.
‘ಬೇಲ್’ ಚಿತ್ರದಲ್ಲಿ ಶಿವರಾಜ್ಕುಮಾರ್ ಅವರು ನಿವೃತ್ತ ಪೊಲೀಸ್ ಅಧಿಕಾರಿಯ ಪಾತ್ರವನ್ನು ಮಾಡಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿಗೆ ಯಾವುದೇ ದೊಡ್ಡ ಅಧಿಕಾರ ಇರುವುದಿಲ್ಲ. ಹಾಗಿದ್ದರೂ ಕೂಡ ಆತ ಹೇಗೆ ವಿಲನ್ಗಳನ್ನು ಮಟ್ಟಹಾಕುತ್ತಾನೆ ಎಂಬುದು ದೊಡ್ಡ ಸವಾಲು. ಅಂಥ ಪಾತ್ರಕ್ಕೆ ಶಿವರಾಜ್ಕುಮಾರ್ ಅವರು ಜೀವ ತುಂಬಿದ್ದಾರೆ. ಅವರ ಸ್ನೇಹಿತರ ಪಾತ್ರದಲ್ಲಿ ಸಾಯಿ ಕುಮಾರ್ ಮತ್ತು ಜಯರಾಮ್ ಅವರು ಕಾಣಿಸಿಕೊಂಡಿದ್ದಾರೆ.
ಈ ಚಿತ್ರಕ್ಕೆ ‘ಬೇಲ್’ ಎಂದು ಶೀರ್ಷಿಕೆ ಇಡಲು ಕಾರಣ ಇದೆ. ಹೀನಕೃತ್ಯಗಳನ್ನು ಮಾಡಿ ಜೈಲು ಸೇರಿದ ಪ್ರಭಾವಿಗಳು ಕಾನೂನಿನ ಲೋಪಗಳನ್ನು ಬಳಸಿಕೊಂಡು ಜಾಮೀನು ಪಡೆಯುತ್ತಾರೆ. ಅಂಥವರನ್ನು ಸಂಹಾರ ಮಾಡಲು ಹೀರೋ ಮುಂದಾಗುತ್ತಾನೆ. ಪ್ರತಿ ಬಾರಿಯೂ ಇಂಥ ಕ್ರಿಮಿನಲ್ಗಳು ಜಾಮೀನು ಪಡೆದು ಹೊರಬಂದಾಗ ಯಾರಿಗೂ ಗೊತ್ತಾಗದ ರೀತಿಯಲ್ಲಿ ಅವರನ್ನು ಕಥಾನಾಯಕ ಕೊಲ್ಲುತ್ತಾನೆ. ಹಾಗಾಗಿ ಈ ಚಿತ್ರಕ್ಕೆ ‘ಬೇಲ್’ ಎಂದು ಹೆಸರಿಡಲಾಗಿದೆ. ದುಷ್ಟರ ಸಂಹಾರಕ್ಕೆ ಕಾನೂನಿನ ಚೌಕಟ್ಟಿನ ಹೊರಗೆ ಒಂದು ಪರ್ಯಾಯ ಮಾರ್ಗವಿದ್ದರೆ ಹೇಗಿರುತ್ತದೆ ಎಂಬುದನ್ನು ನಿರ್ದೇಶಕ ಪವನ್ ಒಡೆಯರ್ ಅವರು ಈ ಚಿತ್ರದಲ್ಲಿ ತೋರಿಸಿದ್ದಾರೆ.
ಬೇಲ್ ಪಡೆದ ಕ್ರಿಮಿನಲ್ಗಳನ್ನು ಹೀರೋ ಸಾಯಿಸುತ್ತಾನೆ ಎಂಬುದನ್ನಷ್ಟೇ ವಿವರಿಸಲು ಇಡೀ ಮೊದಲಾರ್ಧವನ್ನು ಮೀಸಲಿಡಲಾಗಿದೆ. ಮಧ್ಯಂತರದ ವೇಳೆ ಒಂದು ಟ್ವಿಸ್ಟ್ ಎದುರಾಗುತ್ತದೆ. ಹೀರೋ ಒಳ್ಳೆಯ ಕೆಲಸ ಮಾಡುತ್ತಿದ್ದರೂ ಕೂಡ ಅದು ಕಾನೂನಿನ ಪ್ರಕಾರ ಸರಿಯಲ್ಲ. ಹಾಗಾಗಿ ಆತ ಪೊಲೀಸರ ಕೈಗೆ ಸಿಕ್ಕಿಬೀಳುತ್ತಾನಾ ಇಲ್ಲವಾ ಎಂಬ ಕುತೂಹಲದೊಂದಿಗೆ ದ್ವಿತೀಯಾರ್ಧ ಸಾಗುತ್ತದೆ.
ಪ್ರೇಕ್ಷಕರು ಈ ಸಿನಿಮಾ ನೋಡುವಾಗ ಹೆಚ್ಚು ಪ್ರಶ್ನೆಗಳನ್ನು ಮಾಡಿದರೆ ಮಜಾ ಮಿಸ್ ಆಗಬಹುದು. ಯಾಕೆಂದರೆ, ನಿರ್ದೇಶಕರು ಲಾಜಿಕ್ ಕಡೆಗೆ ಜಾಸ್ತಿ ಗಮನ ಕೊಟ್ಟಿಲ್ಲ. ಸಿಂಪಲ್ ಆಗಿ ಕಾಣಿಸಿದರೂ ಸೂಪರ್ ಹೀರೋ ರೀತಿ ಕೆಲಸ ಮಾಡುವಂತಹ ಕಥಾನಾಯಕನ್ನು ಅವರು ಪ್ರೇಕ್ಷಕರಿಗೆ ತೋರಿಸಿದ್ದಾರೆ. ಬಹುತೇಕ ಸಂದರ್ಭಗಳು ಹೀರೋ ಪರವಾಗಿಯೇ ಇರುವಂತೆ ಕಥೆಯನ್ನು ಹೆಣೆದುಕೊಳ್ಳಲಾಗಿದೆ. ದ್ವಿತೀಯಾರ್ಧದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಮತ್ತು ಲೂಸ್ ಮಾದ ಯೋಗಿ ಅವರು ಎಂಟ್ರಿ ನೀಡಿದ ಬಳಿಕ ಚಿತ್ರದ ವೇಗ ಹೆಚ್ಚಿದೆ.
ಶಿವಣ್ಣ ಇಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿರುವುದರಿಂದ ಆ್ಯಕ್ಷನ್ ದೃಶ್ಯಗಳನ್ನು ವೈಭವೀಕರಿಸಿಲ್ಲ. ಶಕ್ತಿಗಿಂತಲೂ ಯುಕ್ತಿಯಿಂದಲೇ ದುಷ್ಟರನ್ನು ಮಟ್ಟಹಾಕುವ ಪಾತ್ರವನ್ನು ಅವರಿಗೆ ನೀಡಲಾಗಿದೆ. ಆ ಪಾತ್ರಕ್ಕೆ ತಕ್ಕಂತಹ ಗೆಟಪ್ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಯೋಗಿ ಅವರು ಖಡಕ್ ವಿಲನ್ ಆಗಿ ಅಬ್ಬರಿಸಿದ್ದಾರೆ. ತಮಗೆ ಸಿಕ್ಕ ಅವಕಾಶವನ್ನು ಅವರು ಉತ್ತಮವಾಗಿ ಬಳಸಿಕೊಂಡಿದ್ದಾರೆ. ರಮೇಶ್ ಇಂದಿರಾ ಅವರು ಮಾಡಿರುವ ಪತ್ರಕರ್ತನ ಪಾತ್ರಕ್ಕೆ ತೂಕ ಇದೆ. ದೀಕ್ಷಿತ್ ಶೆಟ್ಟಿ ಅವರು ಐಪಿಎಸ್ ಅಧಿಕಾರಿಯಾಗಿ ಗಮನ ಸೆಳೆದಿದ್ದಾರೆ. ಸಂಜನಾ ಆನಂದ್ ಮತ್ತು ದೀಕ್ಷಿತ್ ಶೆಟ್ಟಿ ಅವರ ಕಾಂಬಿನೇಷನ್ನ ಹಾಡು ಕಥೆಯ ಓಟಕ್ಕೆ ಅಡೆಚಣೆ ಉಂಟುಮಾಡಿದಂತಿದೆ. ನಿವೇದಿತಾ ಗೌಡ ಅವರು ‘ಕುಮಾರಿ..’ ಹಾಡಿಗಷ್ಟೇ ಸೀಮಿತವಾಗಿದ್ದಾರೆ.
ಇದನ್ನೂ ಓದಿ: ಚಿತ್ರ ವಿಮರ್ಶೆ: ಹಳ್ಳಿಯ ಪ್ರೇಮಕಥೆ ಇರುವ ಭಾವುಕ ಸಿನಿಮಾ ‘ಪ್ರೇಮದ ಊರಲಿ’
ಹಾಡುಗಳಿಗಿಂತಲೂ ಹಿನ್ನೆಲೆ ಸಂಗೀತದಲ್ಲಿ ಅಜನೀಶ್ ಲೋಕನಾಥ್ ಅವರು ಹೆಚ್ಚು ಕೊಡುಗೆ ನೀಡಿದ್ದಾರೆ. ವೈದಿ ಎಸ್. ಅವರ ಛಾಯಾಗ್ರಹಣ, ಶಶಾಂಕ್ ನಾರಾಯಣ್ ಅವರ ಸಂಕಲನ, ಅಜನೀಶ್ ಅವರ ಸಂಗೀತದಿಂದಾಗಿ ಪವನ್ ಒಡೆಯರು ಅವರು ಈ ಸಿನಿಮಾವನ್ನು ತಾಂತ್ರಿಕವಾಗಿ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಮೊದಲಾರ್ಧದಲ್ಲಿ ಕಥೆ ಟೇಕಾಫ್ ಆಗಲು ಹೆಚ್ಚು ಸಮಯ ತೆಗೆದುಕೊಂಡಿದೆ. ಆದರೆ ದ್ವಿತೀಯಾರ್ಧವು ಪಟಪಟನೇ ಸಾಗುತ್ತದೆ. ಇಲ್ಲಿ ಒಂದು ಸಮತೋಲನ ಕಾಯ್ದುಕೊಂಡಿದ್ದರೆ ಚೆನ್ನಾಗಿರುತ್ತಿತ್ತು ಅನಿಸುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.