AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರ ವಿಮರ್ಶೆ: ಹಳ್ಳಿಯ ಪ್ರೇಮಕಥೆ ಇರುವ ಭಾವುಕ ಸಿನಿಮಾ ‘ಪ್ರೇಮದ ಊರಲಿ’

ಚಿತ್ರ ವಿಮರ್ಶೆ: ಹಳ್ಳಿಯ ಪ್ರೇಮಕಥೆ ಇರುವ ಭಾವುಕ ಸಿನಿಮಾ ‘ಪ್ರೇಮದ ಊರಲಿ’
Premada Oorali ReviewImage Credit source: Tv9 Kannada

ಪ್ರೇಮದ ಊರಲಿ

UA
  • Time - 155 Minutes
  • Released - September 25, 2026
  • Language - Kannada
  • Genre - Drama, Romantic
Cast - ರಂಗಾಯಣ ರಘು, ಶ್ರೀ ರಾಮ್, ತಪಸ್ವಿನಿ ಪೂಣಚ್ಚ, ರಮಿಕಾ ಶಿವು, ಇಳಾ ವಿಟ್ಲಾ ಗೋವಿಂದೇಗೌಡ ಮುಂತಾದವರು.
Director - ಮನೋಜ್ ಕುಮಾರ್
3.5
Critic's Rating
ಮದನ್​ ಕುಮಾರ್​
|

Updated on:Sep 25, 2026 | 3:03 PM

Share

ಇತ್ತೀಚಿನ ವರ್ಷಗಳಲ್ಲಿ ಅಪ್ಪಟ ಹಳ್ಳಿಗಾಡಿನ ಕಥೆ ಇರುವ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ. ಆ ಕೊರತೆಯನ್ನು ನೀಗಿಸುವಂತಹ ಚಿತ್ರವಾಗಿ ‘ಪ್ರೇಮದ ಊರಲಿ’ ಸಿನಿಮಾ ಮೂಡಿಬಂದಿದೆ. ಇದು ಬರೀ ಗ್ರಾಮೀಣ ಸೊಗಡಿನ ಕಥೆ ಇರುವ ಸಿನಿಮಾ ಮಾತ್ರವಲ್ಲ. ಇದರಲ್ಲಿ ಎಮೋಷನಲ್ ಆದಂತಹ ಪ್ರೇಮಕಥೆ ಕೂಡ ಇದೆ. ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆಯುವಂತಹ ಗುಣ ಈ ಸಿನಿಮಾಗಿದೆ. ಮಮತಾ ದೇವೇಂದ್ರ, ಪ್ರಶಾಂತ ಡಿಎಸ್, ರಮೇಶ್ ಎನ್. ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ‘ಪ್ರೇಮದ ಊರಲಿ’ ಚಿತ್ರದ ವಿಮರ್ಶೆ ಇಲ್ಲಿದೆ..

ನಿರ್ದೇಶಕ ಮನೋಜ್ ಕುಮಾರ್ ಅವರು ‘ಪ್ರೇಮದ ಊರಲಿ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಹಿಂದೆ ಅವರು ‘ಅಕ್ಷಿ’ ಸಿನಿಮಾ ಮಾಡಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದರು. ಈ ಬಾರಿ ಅವರು ಒಂದು ಪಕ್ಕಾ ಕೌಟುಂಬಿಕ ಕಥೆಯನ್ನು ತೆರೆಗೆ ತಂದಿದ್ದಾರೆ. ಸೂಕ್ತವಾದ ಪಾತ್ರವರ್ಗ ಹಾಗೂ ತಾಂತ್ರಿಕ ಬಳಗ ಅವರಿಗೆ ಸಾಥ್ ನೀಡಿದೆ. ಹಾಗಾಗಿ ‘ಪ್ರೇಮದ ಊರಲಿ’ ಸಿನಿಮಾ ಒಂದು ಅಚ್ಚುಕಟ್ಟು ಪ್ರಯತ್ನವಾಗಿ ಮೂಡಿಬಂದಿದೆ.

ಕೃಷಿ ನಂಬಿಕೊಂಡಿರುವ ಯುವಕರಿಗೆ ಹೆಣ್ಣು ಕೊಡಲು ಯಾರೂ ಮುಂದೆಬರುವುದಿಲ್ಲ. ಹಳ್ಳಿಯಲ್ಲಿ ಇರುವ ಯುವತಿಯರು ನಗರದ ಜೀವನಕ್ಕೆ ಆಕರ್ಷಿತರಾಗುತ್ತಿದ್ದಾರೆ. ಹಾಗಾಗಿ ರೈತ ಕುಟುಂಬದಲ್ಲಿ ಹುಟ್ಟಿದ ಯುವಕರಿಗೆ ಮದುವೆಯೇ ಒಂದು ಸವಾಲಾಗಿದೆ ಎಂಬುದು ತಿಳಿದಿರುವ ವಿಷಯ. ಇದೇ ಅಂಶವನ್ನು ಕೇಂದ್ರವಾಗಿ ಇಟ್ಟುಕೊಂಡು ಮನೋಜ್ ಕುಮಾರ್ ಅವರು ‘ಪ್ರೇಮದ ಊರಲಿ’ ಸಿನಿಮಾವನ್ನು ಮಾಡಿದ್ದಾರೆ.

ಹಾಗಂತ ‘ಪ್ರೇಮದ ಊರಲಿ’ ಸಿನಿಮಾದ ಕಥೆ ಇಷ್ಟು ಸಿಂಪಲ್ ಆಗಿಲ್ಲ. ಇದನ್ನು ಒಂದು ಸಾಕ್ಷ್ಯಚಿತ್ರದ ರೀತಿಯೂ ಅವರು ತೋರಿಸಿಲ್ಲ. ರೈತ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ ಎಂಬುದನ್ನು ಕೇಂದ್ರಬಿಂದುವಾಗಿ ಮಾತ್ರ ಇಟ್ಟುಕೊಂಡು, ಅದರ ಸುತ್ತ ಒಂದು ಸುಂದರವಾದ ಪ್ರೇಮಕಥೆಯನ್ನು ತೋರಿಸಲಾಗಿದೆ. ಅಲ್ಲಿ ತ್ರಿಕೋನ ಪ್ರೇಮಕಥೆ ಕೂಡ ಹೈಲೈಟ್ ಆಗಿದೆ. ಕೌಟುಂಬಿಕ ಮೌಲ್ಯಗಳನ್ನು ಉತ್ತಮವಾಗಿ ಕಟ್ಟಿಕೊಡಲಾಗಿದೆ.

ಪತ್ನಿಯನ್ನು ಕಳೆದುಕೊಂಡ ನಾಗಣ್ಣ (ರಂಗಾಯಣ ರಘು) ಇನ್ನೊಂದು ಮದುವೆ ಆಗಲು ಒಪ್ಪುವುದಿಲ್ಲ. ಮಗ ಸಂತು​ನನ್ನು (ಶ್ರೀರಾಮ್) ತುಂಬಾ ಪ್ರೀತಿಯಿಂದ ನಾಗಣ್ಣ ಸಾಗುತ್ತಾನೆ. ಆದರೆ ವಿದ್ಯಾಭ್ಯಾಸ ಎಂದರೆ ಸಂತು​ಗೆ ಅಷ್ಟಕಷ್ಟೇ. ಶಾಲೆಗೆ ಹೋಗದ ಮಗನಿಗೆ ಪದವಿ ಓದಿದ ಹುಡುಗಿ ತಂದು ಮದುವೆ ಮಾಡಬೇಕು ಎಂಬುದು ನಾಗಣ್ಣನ ಆಸೆ. ಆದರೆ ವಿದ್ಯೆ ಇಲ್ಲದೇ ಬರೀ ಕೃಷಿಕನಾಗಿರುವ ಸಂತು​ಗೆ ಯಾರೂ ಹೆಣ್ಣು ಕೊಡಲ್ಲ. ಇಂಥ ಸವಾಲಿನ ನಡುವೆಯೂ, ವಿದೇಶ ಸುತ್ತಿಬಂದ ಓರ್ವ ಸುಶಿಕ್ಷಿತ ಹುಡುಗಿಯ ಜೊತೆ ಸಂತು​ ಮದುವೆ ಆಗುತ್ತದೆ! ಆ ಮದುವೆ ಹೇಗೆ ನಡೆಯಿತು? ಅದರೊಳಗೆ ಇರುವ ಟ್ವಿಸ್ಟ್ ಏನು ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

ಯಾವುದೇ ಸಂಬಂಧದಲ್ಲಿ ನಂಬಿಕೆಯೇ ಬಹಳ ಮುಖ್ಯ ಎಂಬುದನ್ನು ತುಂಬಾ ಚೆನ್ನಾಗಿ ಮನವರಿಕೆ ಮಾಡಿಕೊಡಲು ನಿರ್ದೇಶಕರು ಈ ಸಿನಿಮಾ ಮೂಲಕ ಪ್ರಯತ್ನಿಸಿದ್ದಾರೆ. ತಂದೆ-ಮಗನ ಸೆಂಟಿಮೆಂಟ್, ಪ್ರೇಮಿಗಳ ಸಂಬಂಧ, ಗಂಡ-ಹೆಂಡತಿ ನಡುವಿನ ಪ್ರೀತಿ, ಅಣ್ಣ-ತಂಗಿಯ ಬಾಂಧವ್ಯ ಸೇರಿದಂತೆ ಹಲವು ಭಾವನೆಗಳು ಈ ಸಿನಿಮಾದಲ್ಲಿ ಹೈಲೈಟ್ ಆಗಿವೆ. ಜೊತೆಗೆ ತಿಳಿಯಾದ ಹಾಸ್ಯ ಮತ್ತು ಮಿತವಾದ ಆ್ಯಕ್ಷನ್ ಕೂಡ ಇದೆ. ಒಟ್ಟಾರೆಯಾಗಿ ಈ ಸಿನಿಮಾ ಒಂದು ಮನರಂಜನೆಯ ಪ್ಯಾಕೇಜ್ ಆಗಿದೆ.

ಸುನಾದ್ ಗೌತಮ್ ಅವರು ಸಂಗೀತ ನೀಡಿರುವ ಹಾಡುಗಳಿಂದ ‘ಪ್ರೇಮದ ಊರಲಿ’ ಸಿನಿಮಾದ ಭಾವತೀವ್ರತೆ ಹೆಚ್ಚಿದೆ. ರಾಜ್​ಕಾಂತ್ ಅವರ ಛಾಯಾಗ್ರಹಣ ಕೂಡ ಗಮನ ಸೆಳೆಯುತ್ತದೆ. ರಂಗಾಯಣ ರಘು ಅವರು ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಆರಂಭದಿಂದ ಕೊನೆಯ ತನಕ ಆ ಪಾತ್ರದ ಸುತ್ತವೇ ಕಥೆ ಸುತ್ತುತ್ತದೆ. ನಟ ಶ್ರೀರಾಮ್ ಅವರ ವೃತ್ತಿಜೀವನದ ಬೆಸ್ಟ್ ಚಿತ್ರವಾಗಿ ‘ಪ್ರೇಮದ ಊರಲಿ’ ಮೂಡಿಬಂದಿದೆ. ನಟಿ ಇಳಾ ವಿಟ್ಲಾ ಅವರು ಅಜ್ಜಿಯ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ನಾಯಕಿಯರಾದ ತಪಸ್ವಿನಿ ಪೂಣಚ್ಚ ಮತ್ತು ರಮಿಕಾ ಶಿವು ಅವರು ಚಪ್ಪಾಳೆ ಗಿಟ್ಟಿಸುತ್ತಾರೆ.

ಇದನ್ನೂ ಓದಿ: ಈ ವಾರ ರಿಲೀಸ್ ಆಗುತ್ತಿವೆ ಹಲವಾರು ಸಿನಿಮಾಗಳು: ಪಟ್ಟಿ ಇಲ್ಲಿದೆ ನೋಡಿ

‘ಪ್ರೇಮದ ಊರಲಿ’ ಸಿನಿಮಾದ ಒಟ್ಟಾರೆ ನಿರೂಪಣೆಯು ಹಳೇ ಶೈಲಿಯಲ್ಲಿದೆ. ಚಿತ್ರದ ಅವಧಿ ಕೊಂಚ ದೀರ್ಘ ಎನಿಸುತ್ತದೆ ಕೂಡ. ಈ ಬಗ್ಗೆ ನಿರ್ದೇಶಕರು ಗಮನ ಹರಿಸಿದ್ದರೆ ಸಿನಿಮಾ ಇನ್ನೂ ಚೆನ್ನಾಗಿರುತ್ತಿತ್ತು. ಕೆಲವೇ ಕೆಲವು ಸಣ್ಣ-ಪುಟ್ಟ ಮೈನಸ್ ಅಂಶಗಳ ನಡುವೆಯೂ ಇದೊಂದು ಉತ್ತಮ ಸಿನಿಮಾ ಎನಿಸಿಕೊಳ್ಳುತ್ತದೆ. ಪ್ರೇಮಿಗಳು, ದಂಪತಿಗಳು ಜೊತೆಯಾಗಿ ನೋಡಿದರೆ ಹೆಚ್ಚು ಕನೆಕ್ಟ್ ಆಗುತ್ತದೆ. ಫ್ಯಾಮಿಲಿ ಪ್ರೇಕ್ಷಕರು ಹಲವು ದೃಶ್ಯಗಳಲ್ಲಿ ಭಾವುಕರಾಗುವುದು ಖಚಿತ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:00 pm, Fri, 25 September 26

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More