ಚಿತ್ರ: ದಿ ವ್ಯಾಕ್ಸಿನ್ ವಾರ್. ನಿರ್ಮಾಣ: ಪಲ್ಲವಿ ಜೋಶಿ. ನಿರ್ದೇಶನ: ವಿವೇಕ್ ಅಗ್ನಿಹೋತ್ರಿ. ಪಾತ್ರವರ್ಗ: ನಾನಾ ಪಾಟೇಕರ್, ಪಲ್ಲವಿ ಜೋಶಿ, ಸಪ್ತಮಿ ಗೌಡ, ಗಿರಿಜಾ ಓಕಾ, ಅನುಪಮ್ ಖೇರ್ ಮುಂತಾದವರು. ಸ್ಟಾರ್: 3/5
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರಿಗೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಿಂದ ಸಖತ್ ಜನಪ್ರಿಯತೆ ಸಿಕ್ಕಿತು. ಈಗ ಅವರು ನಿರ್ದೇಶಿಸಿದ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಬಿಡುಗಡೆ ಆಗಿದೆ. ಎರಡೂ ಸಿನಿಮಾಗಳ ಮೇಕಿಂಗ್ನಲ್ಲಿ ಸಾಮ್ಯತೆ ಇದೆ. ಮಾಮೂಲಿ ಕಮರ್ಷಿಯಲ್ ಸೂತ್ರಗಳನ್ನು ಬಿಟ್ಟು, ತಮ್ಮದೇ ಶೈಲಿಯಲ್ಲಿ ಅವರು ‘ದಿ ವ್ಯಾಕ್ಸಿನ್ ವಾರ್’ (The Vaccine War) ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಕೊವಿಡ್ ಸಮಯದಲ್ಲಿ ಭಾರತದ ವಿಜ್ಞಾನಿಗಳು ಲಸಿಕೆ ಕಂಡು ಹಿಡಿದ ಘಟನೆಯನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ವ್ಯಾಕ್ಸಿನ್ನ ಜೊತೆಜೊತೆಗೆ ಬೇರೆ ಬೇರೆ ವಿಚಾರಗಳನ್ನು ಹೇಳುತ್ತಾ ಈ ಸಿನಿಮಾ ಸಾಗುತ್ತದೆ. ವಿಜ್ಞಾನಿಗಳಿಗೆ ಹ್ಯಾಟ್ಸಾಫ್ ಹೇಳುವ ರೀತಿಯಲ್ಲಿ ಈ ಚಿತ್ರವನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಮಹಿಳಾ ವಿಜ್ಞಾನಿಗಳಿಗೆ ಧನ್ಯವಾದ ಮತ್ತು ಅಭಿನಂದನೆ ಸಲ್ಲಿಸುವ ಕೆಲಸ ಈ ಸಿನಿಮಾದಿಂದ ಆಗಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ನ ಡೈರೆಕ್ಟರ್ ಜನರಲ್ ಡಾ. ಬಲರಾಮ್ ಭಾರ್ಗವ ಅವರು ಬರೆದ ‘ಗೋಯಿಂಗ್ ವೈರಲ್’ ಪುಸ್ತಕವನ್ನು ಆಧರಿಸಿ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ತಯಾರಾಗಿದೆ. ಹಲವು ವಿಜ್ಞಾನಿಗಳ ಸಂದರ್ಶನ ನಡೆಸಿ ಚಿತ್ರಕಥೆ ಬರೆಯಲಾಗಿದೆ. ಸಿನಿಮಾಗೆ ಅನುಕೂಲ ಆಗುವ ರೀತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಕೊರೊನಾಗೆ ವ್ಯಾಕ್ಸಿನ್ ಕಂಡು ಹಿಡಿಯುವ ಪ್ರಕ್ರಿಯೆ ಎಷ್ಟು ಸವಾಲಿನದಾಗಿತ್ತು ಎಂಬುದನ್ನು ಈ ಸಿನಿಮಾ ವಿವರಿಸುತ್ತದೆ. ಹಾಗಾಗಿ ಪ್ರೇಕ್ಷಕರಿಗೆ ಈ ಚಿತ್ರ ಒಂದಷ್ಟು ಮಾಹಿತಿ ಒದಗಿಸುತ್ತದೆ. ಆದರೆ ಮನರಂಜನೆ ನಿರೀಕ್ಷಿಸಲಾಗುವುದಿಲ್ಲ. ಕಮರ್ಷಿಯಲ್ ಸಿನಿಮಾಗಳ ರೀತಿ ರಂಜಿಸುವಂತಹ ಹಾಡು, ಫೈಟ್, ಪಂಚಿಂಗ್ ಡೈಲಾಗ್ ಇಲ್ಲದಿದ್ದರೂ ಕೂಡ ನೋಡುಗರನ್ನು ಹಿಡಿದಿಡುವ ಗುಣ ಈ ಚಿತ್ರಕ್ಕಿದೆ.
ಇದನ್ನೂ ಓದಿ: ‘ದಿ ವ್ಯಾಕ್ಸಿನ್ ವಾರ್’ ಚಿತ್ರ ಕೊವಿಡ್ ಬಗ್ಗೆ ಅಲ್ಲ; ಹಾಗಾದ್ರೆ ಇದ್ರಲ್ಲಿ ಏನಿದೆ? ಉತ್ತರಿಸಿದ ವಿವೇಕ್ ಅಗ್ನಿಹೋತ್ರಿ
ಮೊದಲೇ ಹೇಳಿದಂತೆ ಸಂಪೂರ್ಣವಾಗಿ ಇದು ವ್ಯಾಕ್ಸಿನ್ ಕಂಡುಹಿಡಿದ ವಿಜ್ಞಾನಿಗಳ ಕಹಾನಿ. ಲಸಿಕೆ ತಯಾರಿಸುವ ಪ್ರಕ್ರಿಯೆಯ ಹಲವು ಹಂತಗಳನ್ನು ಇದು ತೋರಿಸುತ್ತದೆ. ಹಾಗೆ ನೋಡಿದರೆ ಇದು ಸಾಕ್ಷ್ಯಚಿತ್ರದಂತೆ ಭಾಸವಾಗುತ್ತದೆ. ಆದರೆ ಪ್ರತಿ ಸನ್ನಿವೇಶದಲ್ಲಿ ಎಮೋಷನ್ ಬೆರೆಸಿದ ಕಾರಣದಿಂದ ಇದರ ಸ್ವರೂಪ ಕೊಂಚ ಬದಲಾಗಿದೆ. ವಿಜ್ಞಾನಿಗಳ ವೈಯಕ್ತಿಕ ಜೀವನ ಹೇಗಿತ್ತು? ಅವರು ಎದುರಿಸಿದ ಸವಾಲುಗಳು ಏನು? ಅವರ ಮೇಲೆ ಎಷ್ಟು ಒತ್ತಡ ಇತ್ತು ಎಂಬಿತ್ಯಾದಿ ವಿಷಯಗಳನ್ನು ಹೆಚ್ಚು ಹೈಲೈಟ್ ಮಾಡಲಾಗಿದೆ. ಅಲ್ಲಲ್ಲಿ ಸಿನಿಮೀಯ ಸ್ಪರ್ಶ ನೀಡಲಾಗಿದೆ.
ಒಂದು ಸಿದ್ಧಾಂತವನ್ನು ಇಟ್ಟುಕೊಂಡು ಏಕಪಕ್ಷೀಯವಾಗಿ ಸಿನಿಮಾ ಮಾಡುತ್ತಾರೆ ಎಂಬುದು ವಿವೇಕ್ ಅಗ್ನಿಹೋತ್ರಿ ಮೇಲೆ ಇರುವ ಆರೋಪ. ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ನೋಡಿದಾಗಲೂ ಆ ರೀತಿ ಅನಿಸುವುದುಂಟು. ಕೊವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಎಲ್ಲ ನಿರ್ಧಾರಗಳು ಸರಿಯಾಗಿತ್ತು ಮತ್ತು ಸರ್ಕಾರದ ಕಡೆಯಿಂದ ಕಿಂಚಿತ್ತೂ ಲೋಪ ಆಗಿಯೇ ಇಲ್ಲ ಎಂಬ ರೀತಿಯಲ್ಲಿ ತೋರಿಸಲಾಗಿದೆ. ದಿಢೀರ್ ಲಾಕ್ಡೌನ್ ಮಾಡಿದ್ದರಿಂದ ಜನಸಾಮಾನ್ಯರಿಗೆ ಆದ ತೊಂದರೆಗಳು, ನಿರ್ವಹಣೆಯ ಲೋಪದಿಂದ ಅನೇಕರು ಪ್ರಾಣಗಳೆದುಕೊಂಡಿದ್ದು ಸೇರಿದಂತೆ ಯಾವುದೇ ವಿಚಾರಗಳ ಬಗ್ಗೆ ಈ ಸಿನಿಮಾ ಪ್ರಶ್ನಿಸುವುದೇ ಇಲ್ಲ. ಹಾಗಾಗಿ ಇದು ಸರ್ಕಾರದ ಮುಖವಾಣಿಯಂತೆ ಕಾಣಿಸುತ್ತದೆ. ಚಿತ್ರದುದ್ದಕ್ಕೂ ಸಂಭಾಷಣೆಗಳು ತುಂಬಿ ತುಳುಕಿವೆ. ವ್ಯಾಕ್ಸಿನ್ ಕಂಡು ಹಿಡಿದ ವಿಜ್ಞಾನಿಗಳ ನಡುವಿನ ಏಕಪಕ್ಷೀಯ ಸಂವಾದದಂತೆ ಪೂರ್ತಿ ಸಿನಿಮಾ ಮೂಡಿಬಂದಿದೆ. ಮಾಧ್ಯಮಗಳೇ ಭಾರತದ ವ್ಯಾಕ್ಸಿನ್ ವಿರೋಧಿಗಳು ಎಂಬಂತೆ ಈ ಚಿತ್ರದಲ್ಲಿ ಬಿಂಬಿಸಲಾಗಿದೆ. ಮಾಧ್ಯಮಗಳಿಂದ ಆದ ಉತ್ತಮ ಕಾರ್ಯಗಳ ಬಗ್ಗೆ ಈ ಸಿನಿಮಾ ಸ್ವಲ್ಪವೂ ಮಾತನಾಡುವುದಿಲ್ಲ.
ಇದನ್ನೂ ಓದಿ: ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ‘ದಿ ವ್ಯಾಕ್ಸಿನ್ ವಾರ್’ ಇಲ್ಲ; ಅಚ್ಚರಿ ವಿಷಯ ತಿಳಿಸಿದ ವಿವೇಕ್ ಅಗ್ನಿಹೋತ್ರಿ
ನಟ ನಾನಾ ಪಾಟೇಕರ್ ಅವರು ಡಾ. ಬಲರಾಮ್ ಭಾರ್ಗವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇಡೀ ಸಿನಿಮಾದಲ್ಲಿ ಅವರ ಪಾತ್ರ ಹೈಲೈಟ್ ಆಗಿದೆ. ತುಂಬ ಸೂಕ್ಷ್ಮವಾದ ಅಭಿನಯದ ಮೂಲಕ ಅವರು ಗಮನ ಸೆಳೆದಿದ್ದಾರೆ. ಇನ್ನು, ವಿಜ್ಞಾನಿಗಳ ಪಾತ್ರದಲ್ಲಿ ಸಪ್ತಮಿ ಗೌಡ, ಪಲ್ಲವಿ ಜೋಶಿ, ಗಿರಿಜಾ ಓಕಾ ಮುಂತಾದವರ ನಟನೆ ಕೂಡ ಮೆಚ್ಚುವಂತಿದೆ. ಅಲ್ಲೊಂದು ಇಲ್ಲೊಂದು ದೃಶ್ಯಗಳಲ್ಲಿ ಸಪ್ತಮಿ ಗೌಡ ಕಾಣಿಸಿಕೊಳ್ಳುತ್ತಾರೆ. ಆದರೂ ಕೂಡ ಇದು ಅವರ ವೃತ್ತಿಜೀವನದಲ್ಲಿ ಅಪರೂಪದ ಪಾತ್ರವಾಗಿ ಉಳಿದುಕೊಳ್ಳಲಿದೆ. ಅನುಪಮ್ ಖೇರ್ ಅವರಿಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲ.
ಇದನ್ನೂ ಓದಿ: Tatsama Tadbhava Review: ಕೊಲೆ ಕೌತುಕದ ಕಥೆಯೊಂದಿಗೆ ನೋಡುಗರ ತಲೆಗೆ ಹುಳ ಬಿಡುವ ‘ತತ್ಸಮ ತದ್ಭವ’
‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ ಹಿನ್ನೆಲೆ ಸಂಗೀತ ಭಿನ್ನವಾಗಿದೆ. ಸಾಧ್ಯವಾದ ಕಡೆಗಳಲ್ಲೆಲ್ಲ ಮೌನಕ್ಕೆ ಜಾಗ ನೀಡಲಾಗಿದೆ. ಸಂಭಾಷಣೆಗಳನ್ನು ಮುಚ್ಚಿಹಾಕುವಂತಹ ಹಿನ್ನೆಲೆ ಸಂಗೀತ ಇದರಲ್ಲಿ ಇಲ್ಲ. ಬೇಗ ಬೇಗ ಕಥೆ ಹೇಳಿ ಮುಗಿಸಬೇಕು ಎಂಬ ಧಾವಂತವನ್ನೂ ನಿರ್ದೇಶಕರು ತೋರಿಲ್ಲ. 2 ಗಂಟೆ 40 ನಿಮಿಷ ಅವಧಿಯ ಈ ಸಿನಿಮಾ ಬಹಳ ನಿಧಾನಗತಿಯಲ್ಲಿ ಸಾಗುತ್ತದೆ. ಕೊವಿಡ್ ಸಂದರ್ಭದ ಪುಟಗಳನ್ನು ಮತ್ತೊಮ್ಮೆ ತೆರೆದು ನೋಡಿದ ಅನುಭವ ಈ ಚಿತ್ರದಿಂದ ಆಗುತ್ತದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.