
2023ರಲ್ಲಿ ಬಂದ ‘ಹೊಂದಿಸಿ ಬರೆಯಿರಿ’ ಸಿನಿಮಾ ಗಮನ ಸೆಳೆಯಿತು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ರಾಮೇನಹಳ್ಳಿ ಜಗನ್ನಾಥ. ಈಗ ಅವರು ‘ತೀರ್ಥರೂಪ ತಂದೆಯವರಿಗೆ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸ್ಟಾರ್ ಕಲಾವಿದರು ಇಲ್ಲದೆ ಇದ್ದರೂ ಟ್ರೇಲರ್ ಮೂಲಕ ಈ ಸಿನಿಮಾ ಗಮನ ಸೆಳೆದಿದೆ. ಆ ಚಿತ್ರದ ವಿಮರ್ಶೆ ಇಲ್ಲಿದೆ.
ಜಾನಕಿ (ಸಿತಾರಾ) ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡವಳು. ಈಗ ಆಕೆಗೆ ಮಗನೇ ಪ್ರಪಂಚ. ಆದರೆ, ಮಗ ಪೃಥ್ವಿ ಸಂಚಾರಿ (ನಿಹಾರ್ ಮುಕೇಶ್) ಮನೆಯ ಮೇಲೆ ತಾಯಿ ಮೇಲೆ ಅದೇನೋ ದ್ವೇಷ. ಯೂಟ್ಯೂಬ್ ಚಾನೆಲ್ ಹೊಂದಿರುವ ಆತನಿಗೆ ಬೇರೆಯದೇ ಪ್ರಪಂಚ ಇದೆ. ಈತ ಮೇಲೆ ತಾಯಿ ಪ್ರೀತಿಯ ಮಳೆ ಸುರಿಸಿದರೂ ಅದು ಕೆಸುವಿನ ಎಲೆಯ ಮೇಲೆ ಬಿದ್ದ ನೀರಂತೆ, ನಿಲ್ಲುವುದಿಲ್ಲ ಜಾರಿ ಹೋಗುತ್ತದೆ. ಜಾನಕಿ ಹಾಗೂ ಊರಿನವನೇ ಆದ ವಿಶ್ವನಾಥ್ (ರಾಜೇಶ್ ನಟರಂಗ) ಒಡನಾಟ ಕೂಡ ಇದಕ್ಕೆ ಕಾರಣ ಇದ್ದಿರಬಹುದು. ತಾಯಿಯನ್ನು ದ್ವೇಷಿಸುವ ಪೃಥ್ವಿ ಬಾಳಲ್ಲಿ ಅಕ್ಷರಾನ (ರಚನಾ ಇಂದರ್) ಎಂಟ್ರಿ ಆಗುತ್ತದೆ. ಅಲ್ಲಿಂದ ಭಾವನೆಗಳ ಸವಾರಿ ಶುರು.
‘ತೀರ್ಥರೂಪ ತಂದೆಯವರಿಗೆ’ ಸಿನಿಮಾದಲ್ಲಿ ಹಲವು ಭಾವನೆಗಳನ್ನು ಸೇರಿಸಿದ್ದಾರೆ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ. ಇಲ್ಲಿ ಒಡೆದ ಹೃದಯವಿದೆ. ಮಗನ ಪ್ರೀತಿಗಾಗಿ ಹಂಬಲಿಸುವ ತಾಯಿಯ ಕರುಳಿದೆ. ದೇಹದ ಆಸೆಯನ್ನು ಮೀರಿ ನಿಂತ ಸಂಬಂಧಕ್ಕೆ ವಿವಿಧ ರೀತಿಯ ಬಣ್ಣ ಕಟ್ಟಿದಾಗ ನಿಶ್ಚಲವಾಗಿ ನಿಲ್ಲುವ ವ್ಯಕ್ತಿಯಿದ್ದಾನೆ. ಮಾಡಿದ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳಬೇಕಿರುವ ತಂದೆ ಒಂದು ಕಡೆಯಾದರೆ, ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವ ಅಪ್ಪ ಮತ್ತೊಂದು ಕಡೆ. ಅವರೆಲ್ಲಾ ಬೆಳೆದು ದೊಡ್ಡವರಾಗುತ್ತಿದ್ದಾರೆ, ನಮ್ಮ ಏಳ್ಗೆ ಯಾವಾಗ ಎಂದು ಉರಿದುಕೊಳ್ಳುವ ಗೆಳೆಯನಿದ್ದಾನೆ. ಎಲ್ಲವೂ ಕಥೆಯಲ್ಲಿ ಬೆಸೆದುಕೊಂಡಿದೆ.
ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಅವರು ‘ಹೊಂದಿಸಿ ಬರೆಯಿರಿ’ ಸಿನಿಮಾ ಮೂಲಕ ಭಾವನಾತ್ಮಕ ವಿಷಯಗಳನ್ನು ಎಷ್ಟು ಚೆನ್ನಾಗಿ ಹೆಣೆಯಬಲ್ಲರು ಎಂಬುದನ್ನು ತೋರಿಸಿದ್ದರು. ಈಗ ಅವರು ಮತ್ತೊಮ್ಮೆ ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ. ಒಂದೊಳ್ಳೆಯ ಕಥೆ ಹೆಣೆದು, ಅದಕ್ಕೆ ಕೌಟುಂಬಿಕ ಮೌಲ್ಯ ಹಾಗೂ ಭಾವನೆಗಳನ್ನು ತುಂಬಿದ್ದಾರೆ. ಇಲ್ಲಿಯೂ ಹೊಂದಿಸಿ ಬರೆಯಿರಿ ಆಟ ಮುಂದುವರಿದಿದೆ. ಕ್ಲೈಮ್ಯಾಕ್ಸ್ ಭಾವನಾತ್ಮಕ ಜೀವಿಗಳ ಕಣ್ಣಲ್ಲಿ ನೀರು ತರಿಸೋ ಶಕ್ತಿ ಹೊಂದಿದೆ. ಜೋ ಕೋಸ್ಟಾ ಅವರ ಹಿನ್ನೆಲೆ ಸಂಗೀತ ಹಾಗೂ ದೀಪಕ್ ಯರಗೆರಾ ಛಾಯಾಗ್ರಹಣ ಇಡೀ ಸಿನಿಮಾದ ಅಂದವನ್ನು ಹೆಚ್ಚಿಸಿದೆ.
ಕಥಾ ನಾಯಕ ನಿಹಾರ್ ಅವರಿಗೆ ನಟನೆಯಲ್ಲಿ ಇದು ಮೊದಲ ಅನುಭವ. ಅವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಭಾವನಾತ್ಮಕ ದೃಶ್ಯಗಳನ್ನು ಮತ್ತಷ್ಟು ಅಂದವಾಗಿ ನಿರ್ವಹಿಸೋ ಅವಕಾಶ ಅವರಿಗೆ ಇತ್ತು. ಕಲಿಕೆ ಮುಂದುವರಿದರೆ ಅವರು ಭರವಸೆಯ ನಾಯಕನಾಗಿ ಕಾಣಿಸುತ್ತಾರೆ. ರಚನಾ ಇಂದರ್ ಅಕ್ಷರಾ ಆಗಿ ಇಷ್ಟ ಆಗುತ್ತಾರೆ. ಅವರ ಮುದ್ದುತನ ಇಷ್ಟ ಆಗುತ್ತದೆ. ಸಿತಾರಾ, ಅಜಿತ್ ಹಂಡೆ, ರಾಜೇಶ್ ನಟರಂಗ, ಅಶ್ವಿತಾ ಹೆಗಡೆ ತಮಗೆ ಸಿಕ್ಕ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಕನ್ನಡದವರೇ ಆದ ರವೀಂದ್ರ ವಿಜಯ್ ಪಾತ್ರ ಸಿನಿಮಾಗೆ ಮತ್ತೊಂದು ತೂಕ ಕೊಡುತ್ತದೆ. ಅವರ ಪಾತ್ರಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ.
ಹಾಗಾದರೆ ಇದು ಪರಿಪೂರ್ಣ ಚಿತ್ರವೇ? ಅಲ್ಲ. ಬರವಣಿಗೆಯ ವಿಷಯದಲ್ಲಿ ಈ ಚಿತ್ರ ಪರಿಪೂರ್ಣವಾಗಿಲ್ಲ. ಸಿನಿಮಾದಲ್ಲಿ ಕೆಲವು ನ್ಯೂನ್ಯತೆಗಳು ಇವೆ. ಸಿನಿಮಾನ ಸಂಪೂರ್ಣ ನೋಡಿದ ಬಳಿಕ ಕೆಲವು ವಿಷಯಗಳಲ್ಲಿ, ಕೆಲವು ಪಾತ್ರಗಳಲ್ಲಿ ಪ್ರೇಕ್ಷಕನಿಗೆ ಗೊಂದಲ ಮೂಡುತ್ತದೆ. ಆ ವಿಷಯಗಳನ್ನು ಇನ್ನಷ್ಟು ಸರಳೀಕೃತಗೊಳಿಸಿದ್ದರೆ ಸಿನಿಮಾ ಇನ್ನಷ್ಟು ಸುಂದರವಾಗಿ ಮೂಡಿ ಬರುತ್ತಿತ್ತು. ಕೆಲವು ಪಾತ್ರಗಳು ಆರಂಭದಲ್ಲಿ ತುಂಬಾನೇ ಪ್ರಾಮುಖ್ಯತೆ ಪಡೆದುಕೊಂಡಿದ್ದರೂ ನಂತರ ಬಾಲಿಶಗೊಂಡು ಕಥೆಗೆ ಬೆಂಬಲವಾಗಿ ನಿಲ್ಲುವುದಿಲ್ಲ. ಕೆಲವು ಪಾತ್ರ ಹೊರ ನಡೆದಿದ್ದಕ್ಕೆ ಸರಿಯಾದ ಸಮರ್ಥನೆ ಇಲ್ಲ. ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವ ಅವಶ್ಯಕತೆ ಇತ್ತು.
ಒಟ್ಟಾರೆ ನೋಡುವುದಾದರೆ 2026ರ ಆರಂಭದಲ್ಲಿ ಬಿಡುಗಡೆ ಆಗುತ್ತಿರುವ ಈ ಚಿತ್ರ ಸುಂದರ ಹಾಗೂ ಭಾವನಾತ್ಮಕ ಚಿತ್ರ ಎನಿಸಿಕೊಳ್ಳುತ್ತದೆ. ಕೆಲವು ನ್ಯೂನ್ಯತೆಗಳನ್ನು ಗಣನೆಗೆ ತೆಗೆದುಕೊಳ್ಳದೆ ನೋಡಿದರೆ ಚಿತ್ರ ಇಷ್ಟ ಆಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:16 pm, Wed, 31 December 25