
ಕಮಲ್ ಹಾಸನ್ (Kamal Haasan) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಅವರ ನಟನೆಯ ಸಿನಿಮಾಗಳು ಬಿಡುಗಡೆಯಾದರೆ ಭರ್ಜರಿ ಓಪನಿಂಗ್ ಪಡೆದುಕೊಳ್ಳುತ್ತವೆ. ಇತ್ತೀಚಿನ ವರ್ಷಗಳಲ್ಲಿ ಅವರು ನಟನೆಯಿಂದ ಕೊಂಚ ದೂರ ಉಳಿದುಕೊಂಡಿದ್ದರು. ಆದರೆ ಈಗ ಸಖತ್ ಮಾಸ್ ಆಗಿ ಕಮ್ಬ್ಯಾಕ್ ಮಾಡಿದ್ದಾರೆ. ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾ (Vikram Movie) ಇಂದು (ಜೂನ್ 3) ರಿಲೀಸ್ ಆಗಿ ಅಬ್ಬರಿಸುತ್ತಿದೆ. ಹಲವು ಕಡೆಗಳಲ್ಲಿ ಮುಂಜಾನೆಯೇ ಶೋ ಆರಂಭ ಆಗಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಿ ಬಂದ ಅಭಿಮಾನಿಗಳು ಈ ಚಿತ್ರದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಪ್ರೇಕ್ಷಕರು ಟ್ವಿಟರ್ ಮೂಲಕ ತಮ್ಮ ವಿಮರ್ಶೆ (Vikram Twitter Review) ತಿಳಿಸಿದ್ದಾರೆ. ಈ ಚಿತ್ರಕ್ಕೆ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದು, ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’ ಬ್ಯಾನರ್ ಮೂಲಕ ನಿರ್ಮಾಣ ಆಗಿದೆ.
‘ವಿಕ್ರಮ್’ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಕಮಲ್ ಹಾಸನ್ ಜೊತೆಗೆ ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಕೂಡ ಮಿಂಚಿದ್ದಾರೆ. ಸೂರ್ಯ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಈ ಕಲಾವಿದರ ಕಾಂಬಿನೇಷನ್ ಕಾರಣದಿಂದ ಚಿತ್ರಕ್ಕೆ ಹೈವೋಲ್ಟೇಜ್ ಬಂದಂತೆ ಆಗಿದೆ. ಇದು ಪ್ರೇಕ್ಷಕರಿಗೆ ಇಷ್ಟ ಆಗಿದೆ.
ಇಂಟರ್ವಲ್ ದೃಶ್ಯ ನೋಡಿದ ಪ್ರೇಕ್ಷಕರು ಫಿದಾ ಆಗಿದ್ದಾರೆ. ಅನೇಕ ಮಂದಿ ಆ ಬಗ್ಗೆಯೇ ಟ್ವೀಟ್ ಮಾಡುತ್ತಿದ್ದಾರೆ. ಒಟ್ಟಾರೆ ಸಿನಿಮಾದ ಮೇಕಿಂಗ್ ಕಂಡು ಕಮಲ್ ಹಾಸನ್ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಇದರಿಂದ ಚಿತ್ರಕ್ಕೆ ಉತ್ತಮವಾದ ಕಲೆಕ್ಷನ್ ಆಗುವ ಸಾಧ್ಯತೆ ದಟ್ಟವಾಗಿದೆ.
ನಿರ್ದೇಶಕ ಲೋಕೇಶ್ ಕನಗರಾಜ್ ಅವರ ಮೇಲೆ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಆ ನಿರೀಕ್ಷೆಯ ಮಟ್ಟವನ್ನು ತಲುಪುವಲ್ಲಿ ಅವರು ಯಶಸ್ವಿ ಆಗಿದ್ದಾರೆ ಎಂಬ ಅಭಿಪ್ರಾಯ ಪ್ರೇಕ್ಷಕರಿಂದ ಕೇಳಿಬಂದಿದೆ. ‘ಇದು ನಿಜವಾಗಿಯೂ ಲೋಕೇಶ್ ಕನಗರಾಜ್ ಶೈಲಿಯ ಚಿತ್ರ. ಒಂದು ಮ್ಯಾಜಿಕ್ ರೀತಿಯಲ್ಲಿ ಇದೆ’ ಎಂದು ಪ್ರೇಕ್ಷಕರು ಟ್ವೀಟ್ ಮಾಡಿದ್ದಾರೆ.
‘ವಿಕ್ರಮ್’ ಸಿನಿಮಾದಲ್ಲಿ ಸಾಹಸ ದೃಶ್ಯಗಳು ಮತ್ತು ಚೇಸಿಂಗ್ ದೃಶ್ಯಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಒಟ್ಟಾರೆಯಾಗಿ ಚಿತ್ರದ ಮೇಕಿಂಗ್ ಗುಣಮಟ್ಟ ಗಮನ ಸೆಳೆಯುತ್ತಿದೆ. ಕಲಾವಿದರ ನಟನೆಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಬಾಕ್ಸ್ ಆಫೀಸ್ನಲ್ಲಿ ‘ವಿಕ್ರಮ್’ ಸಿನಿಮಾ ಜಯಭೇರಿ ಬಾರಿಸುವ ಸೂಚನೆ ಸಿಕ್ಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:21 am, Fri, 3 June 22