ಖ್ಯಾತ ಗಾಯಕನ ಸಾವಿನ ಹಿಂದಿನ ರಹಸ್ಯ ಬಹಿರಂಗ ಆದರೆ ಸರ್ಕಾರಕ್ಕೆ ಬೇಕಿರುವುದೇ ಬೇರೆ?

Zubeen Garg death: ಅಸ್ಸಾಂನ ಖ್ಯಾತ ಗಾಯಕ ಜುಬೀನ್ ಗರ್ಗ್ ಸಾವು ಅಸ್ಸಾಂ ಜನರನ್ನು ತೀವ್ರ ದುಃಖಕ್ಕೆ ತಳ್ಳಿತ್ತು. ಜುಬೀನ್ ಗರ್ಗ್ ಸಾವಿನ ಬಗ್ಗೆ ಅನುಮಾನಗಳು ಹಲವು ಪ್ರಶ್ನೆಗಳು ಎದ್ದಿದ್ದವು. ಅಸ್ಸಾಂ ಸಿಎಂ, ಜುಬೀನ್ ಅವರದ್ದ ಸಾವು ಆಕಸ್ಮಿಕವಲ್ಲ ಕೊಲೆ ಎಂದಿದ್ದರು. ಇದೀಗ ಜುಬೀನ್ ಸಾವಿಗೆ ನಿಜ ಕಾರಣ ಗೊತ್ತಾಗಿದೆ.

ಖ್ಯಾತ ಗಾಯಕನ ಸಾವಿನ ಹಿಂದಿನ ರಹಸ್ಯ ಬಹಿರಂಗ ಆದರೆ ಸರ್ಕಾರಕ್ಕೆ ಬೇಕಿರುವುದೇ ಬೇರೆ?
Zubeen Gurg

Updated on: Jan 16, 2026 | 7:37 AM

ಭಾರತದ ಬಲು ಜನಪ್ರಿಯ ಗಾಯಕರುಗಳಲ್ಲಿ ಒಬ್ಬರಾಗಿರುವ ಜುಬೀನ್ ಗರ್ಗ್ (Zubeen Gurg) ಕೆಲ ತಿಂಗಳ ಹಿಂದಷ್ಟೆ ನಿಧನ ಹೊಂದಿದರು. ಅವರ ನಿಧನ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಅಸ್ಸಾಂನಲ್ಲಿ ಅವರು ನಂಬರ್ 1 ಸೆಲೆಬ್ರಿಟಿ, ಇಡೀ ಅಸ್ಸಾಂ ಜನ ಅವರನ್ನು ತಮ್ಮ ಮನೆಯ ಮಗನಂತೆ ಕಾಣುತ್ತಿದ್ದರು. ಕರ್ನಾಟಕದಲ್ಲಿ ಪುನೀತ್ ರಾಜ್​​ಕುಮಾರ್ ಅಗಲಿಕೆಯ ಬಳಿಕ ಉಂಟಾಗಿದ್ದ ಶೋಕದ, ನಿರ್ವಾತ ಪರಿಸ್ಥಿತಿ ಜುಬೀನ್ ಗರ್ಗ್ ನಿಧನದ ಬಳಿಕ ಅಸ್ಸಾಂನಲ್ಲಿ ಸಹ ಉಂಟಾಗಿತ್ತು. ಇದರ ಜೊತೆಗೆ ಜುಬೀನ್ ಸಾವು ರಹಸ್ಯಮಯವಾಗಿದ್ದಿದ್ದು, ಜುಬೀನ್ ಸಾವಿನ ಬಗ್ಗೆ ಹಲವು ಪ್ರಶ್ನೆಗಳನ್ನು, ಅನುಮಾನಗಳನ್ನು ಎಬ್ಬಿಸಿದ್ದವು. ಇದೀಗ ಗಾಯಕನ ಸಾವಿನ ರಹಸ್ಯ ಬಹುತೇಕ ಬಹಿರಂಗವಾಗಿದೆ. ಆದರೆ ಸರ್ಕಾರ ಇದನ್ನು ಒಪ್ಪುತ್ತದೆಯೇ ಎಂಬುದೇ ಅನುಮಾನ.

ಜುಬೀನ್ ಗರ್ಗ್ ಅವರು ಸಿಂಗಪುರದ ಲಾಜುರಾಸ್ ದ್ವೀಪದ ಬಳಿ ಈಜಾಡುವಾಗ ನಿಧನ ಹೊಂದಿದ್ದರು. ಜುಬೀನ್ ಅವರು ತಮ್ಮ ಮ್ಯಾನೇಜರ್ ಜೊತೆಗೆ ಬೋಟಿನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿತ್ತು. ಜುಬೀನ್ ಅವರನ್ನು ಕೂಡಲೇ ಮೇಲಕ್ಕೆತ್ತಿ ಸಿಪಿಆರ್ ನೀಡಿ ಬಳಿಕ ಆಸ್ಪತ್ರೆಗೆ ಸೇರಿಸಲಾಗಿತ್ತು ಆದರೆ ಅವರು ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಅಸ್ಸಾಂ ಪೊಲೀಸರು ಮತ್ತು ಸಿಂಗಪುರ ಪೊಲೀಸರು ಪ್ರತ್ಯೇಕವಾಗಿ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. ಸಿಂಗಪುರ ಪೊಲೀಸರು ಕಂಡುಕೊಂಡಿರುವಂತೆ ಜುಬೀನ್ ಗರ್ಗ್ ಮೊದಲಿಗೆ ಲೈಫ್ ಜಾಕೆಟ್ ಹಾಕಿದ್ದರು ಆದರೆ ಅದು ಅನ್​ಕಂಫರ್ಟ್ ಎನಿಸಿದ್ದರಿಂದ ಅದನ್ನು ತೆಗೆದರು ಆದರೆ ಮತ್ತೊಂದು ಲೈಫ್ ಜಾಕೆಟ್ ಹಾಕಲು ನಿರಾಕರಿಸಿದರು. ಬಳಿಕ ಅವರು ನೀರಿಗೆ ಧುಮುಕಿ ಈಜಲು ತೊಡಗಿದರು. ಕೆಲವೇ ನಿಮಿಷಗಳ ಬಳಿಕ ಅವರ ದೇಹ, ಬೆನ್ನು ಮೇಲಕ್ಕಾಗಿ ನೀರಿನಲ್ಲಿ ತೇಲಲು ಆರಂಭಿಸಿತು. ಇದನ್ನು ಕಂಡ ಮ್ಯಾನೇಜರ್ ಮತ್ತು ಬೋಟಿನವರು ಅವರನ್ನು ಮೇಲಕ್ಕೆತ್ತಿ ಸಿಪಿಆರ್ ನೀಡಿದರು, ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಿದರು.

ಇದನ್ನೂ ಓದಿ: ಸಿಎಂ ಹೇಳಿಕೆಯಿಂದ ಬದಲಾಯ್ತು ಖ್ಯಾತ ಗಾಯಕನ ಸಾವು ಪ್ರಕರಣ

ಸಿಂಗಪುರ ಪೊಲೀಸರು ಹೇಳಿರುವಂತೆ ಜುಬೀನ್ ಗರ್ಗ್ ನೀರಿಗೆ ಇಳಿಯುವ ಮುಂಚೆ ಮದ್ಯ ಸೇವನೇ ಮಾಡಿದ್ದರು. ಅವರ ರಕ್ತದ ಮಾದರಿಯಲ್ಲಿ ಸಾಕಷ್ಟು ಆಲ್ಕೊಹಾಲ್ ಸೇರಿರುವ ವರದಿ ಬಂದಿತ್ತು. ಇದು ಮಾತ್ರವೇ ಅಲ್ಲದೆ ಜುಬೀನ್ ಅವರಿಗೆ ಬಿಪಿ ಅಥವಾ ಹೈಪರ್​​ಟೆನ್ಷನ್ ಮತ್ತು ಮೆದುಳಿನ ಕ್ರಿಯೆಗೆ ಸಂಬಂಧಿಸಿದ ಎಪಿಲೆಪ್ಸಿ ಎಂಬ ಸಮಸ್ಯೆ ಇತ್ತು. ಇವುಗಳ ಕಾರಣದಿಂದಲೇ ಜುಬೀನ್ ಅವರು ಅಚಾನಕ್ಕಾಗಿ ಸಾವಿಗೆ ಈಡಾಗಿದ್ದಾರೆ ಎಂದು ಸಿಂಗಪುರ ಪೊಲೀಸರು ಹೇಳಿದ್ದಾರೆ.

ಆದರೆ ಅಸ್ಸಾಂ ಸರ್ಕಾರ ಇದನ್ನು ಒಪ್ಪುವ ಪರಿಸ್ಥಿತಿಯಲ್ಲಿ ಇದ್ದಂತಿಲ್ಲ. ಈಗಾಗಲೇ ಜುಬೀನ್ ಸಾವನ್ನು ರಾಜಕೀಯವಾಗಿ ಬಳಸಿಕೊಳ್ಳುವ ಹುನ್ನಾರ ಮೇಲ್ನೋಟಕ್ಕೆ ಕಾಣುತ್ತಿದೆ. ಸ್ವತಃ ಸಿಎಂ ಹಿಮಂತ್ ಬಿಸ್ವ ಶರ್ಮಾ, ಜುಬೀನ್ ಸಾವು ಆಕಸ್ಮಿಕವಲ್ಲ ಅದು ಕೊಲೆ, ಈ ಕೊಲೆಯ ಹಿಂದಿನ ವ್ಯಕ್ತಿಗಳನ್ನು ಹೊರಗೆ ತರುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಈ ಹಿಂದೆ ಸುಶಾಂತ್ ಸಾವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡಂತೆ ಈಗ ಜುಬೀನ್ ಸಾವನ್ನು ಸಹ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಹುನ್ನಾರ ಕಾಣುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ