‘ಆವೇಶಂ’ ರೀಮೇಕ್​ನಲ್ಲಿ ತೆಲುಗಿನ ಸ್ಟಾರ್ ನಟ, ಆದರೆ…

Nandamuri Balakrishna: ಮಲಯಾಳಂನ ಸೂಪರ್ ಡೂಪರ್ ಹಿಟ್ ಸಿನಿಮಾ ‘ಆವೇಶಂ’ ತೆಲುಗು ರೀಮೇಕ್​ನಲ್ಲಿ ನಟಿಸುವಂತೆ ನಂದಮೂರಿ ಬಾಲಕೃಷ್ಣ ಅವರನ್ನು ಕೇಳಲಾಗಿದೆ.

‘ಆವೇಶಂ’ ರೀಮೇಕ್​ನಲ್ಲಿ ತೆಲುಗಿನ ಸ್ಟಾರ್ ನಟ, ಆದರೆ...

Updated on: Aug 08, 2024 | 12:17 PM

ಫಹಾದ್ ಫಾಸಿಲ್ ನಟಿಸಿರುವ ‘ಆವೇಶಂ’ ಸಿನಿಮಾ ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆ ಆಗಿತ್ತು. ಬೆಂಗಳೂರಿನಲ್ಲಿ ನಡೆಯುವ ಸರಳ ಕತೆಯುಳ್ಳ ಈ ಸಿನಿಮಾ ಭಾರಿ ಬ್ಲಾಕ್ ಬಸ್ಟರ್ ಎನಿಸಿಕೊಂಡಿತ್ತು. ಫಹಾದ್ ಫಾಸಿಲ್ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದರು. ಸಿನಿಮಾದ ‘ಇಲ್ಲು ಮಿನಾಟಿ’ ಹಾಗೂ ಇತರೆ ಕೆಲವು ಹಾಡುಗಳು ಇನ್​ಸ್ಟಾಗ್ರಾಂ, ಯೂಟ್ಯೂಬ್​ನಲ್ಲಿ ವೈರಲ್ ಆಗಿದ್ದವು. ವಿಶೇಷವಾಗಿ ಫಹಾದ್​ರ ‘ರಂಗ’ ಪಾತ್ರವಂತೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ತುಂಬಿದ ಗೃಹಗಳ ಪ್ರದರ್ಶನವನ್ನು ಈ ಸಿನಿಮಾ ಕಂಡಿತ್ತು. ಇದೀಗ ಈ ಸಿನಿಮಾವನ್ನು ರೀಮೇಕ್ ಮಾಡಲು ತೆಲುಗು ಚಿತ್ರರಂಗದ ನಿರ್ದೇಶಕರೊಬ್ಬರು ಮುಂದಾಗಿದ್ದು, ತೆಲುಗಿನ ಸ್ಟಾರ್ ನಟರೊಬ್ಬರನ್ನು ಫಹಾದ್ ಪಾತ್ರದಲ್ಲಿ ನಟಿಸುವಂತೆ ಕೇಳಲಾಗಿದೆ.

ಏಕಾಂಗಿ, ತಮಾಷೆ ಸ್ವಭಾವದ, ಎಲ್ಲರನ್ನೂ ಪ್ರೀತಿಸುವ, ಭೀಕರ ಫ್ಲ್ಯಾಷ್ ಬ್ಯಾಕ್ ಹೊಂದಿರುವ ರೌಡಿ ರಂಗನ ಪಾತ್ರದಲ್ಲಿ ಫಹಾದ್ ಫಾಸಿಲ್ ಸಖತ್ ಮಿಂಚಿದ್ದರು. ತೆಲುಗು ರೀಮೇಕ್​ನಲ್ಲಿ ಇದೇ ಪಾತ್ರದಲ್ಲಿ ನಟಿಸಲು ತೆಲುಗಿನ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅವರನ್ನು ಕೇಳಲಾಗಿದೆ. ನಂದಮೂರಿ ಬಾಲಕೃಷ್ಣ ಹಲವು ವರ್ಷಗಳಿಂದಲೂ ಮಾಸ್ ಸಿನಿಮಾಗಳಲ್ಲಿ ನಟಿಸುತ್ತಾ ಬಂದವರು. ಅವರ ‘ಪೈಸಾ ವಸೂಲ್’ ಸಿನಿಮಾದ ಪಾತ್ರ ತುಸು ‘ಆವೇಶಂ’ನ ರಂಗನ ಪಾತ್ರವನ್ನು ಹೋಲುವಂತಿತ್ತು. ಹಾಗಾಗಿ ಈಗ ‘ಆವೇಶಂ’ ಸಿನಿಮಾದ ರೀಮೇಕ್​ನಲ್ಲಿ ಬಾಲಕೃಷ್ಣರನ್ನು ನಟಿಸುವಂತೆ ಕೋರಲಾಗಿದೆ.

ಆದರೆ ಕೆಲವು ಮೂಲಗಳ ಪ್ರಕಾರ, ಬಾಲಕೃಷ್ಣ ‘ಆವೇಶಂ’ ಸಿನಿಮಾದ ರೀಮೇಕ್​ನಲ್ಲಿ ನಟಿಸುವುದಿಲ್ಲ ಎಂದಿದ್ದಾರಂತೆ. ಬಾಲಕೃಷ್ಣ ಈ ಹಿಂದೆ ಕೆಲವು ರೀಮೇಕ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ‘ಆವೇಶಂ’ ಸಿನಿಮಾದ ನಾಯಕನಿಗೆ ನೆಗೆಟಿವ್ ಶೇಡ್ ಇರುವ ಕಾರಣ ಆ ಪಾತ್ರಕ್ಕೆ ಒಲ್ಲೆ ಎಂದಿದ್ದಾರಂತೆ ಬಾಲಕೃಷ್ಣ. ಈ ಹಿಂದೆ ತಮಿಳಿನ ‘ಜಿಲ್ಲ’ ಸಿನಿಮಾ ರೀಮೇಕ್​ನಲ್ಲಿ ನಟಿಸಲು ಸಹ ಇದೇ ಕಾರಣಕ್ಕೆ ಒಲ್ಲೆ ಎಂದಿದ್ದರು ಬಾಲಕೃಷ್ಣ.

ಇದನ್ನೂ ಓದಿ:ನಂದಮೂರಿ ಬಾಲಕೃಷ್ಣಗೆ ಇಲ್ಲ ಸಚಿವ ಸ್ಥಾನ, ಅಭಿಮಾನಿಗಳ ಬೇಸರ

ಬಾಲಕೃಷ್ಣ ಸಿನಿಮಾಗಳಲ್ಲಿ ನಾಯಕ ನೂರಾರು ಮಂದಿಯನ್ನು ಕತ್ತರಿಸಿ ಕೊಲ್ಲುವುದು ಸಾಮಾನ್ಯ. ಆದರೆ ಬಾಲಕೃಷ್ಣ ಪ್ರಕಾರ ಅದೆಲ್ಲವೂ ಒಳಿತಾಗಿ ಮಾಡುವ ಕೆಲಸ. ನಾಯಕ ಸದಾ ಒಳಿತಿನ ಕಡೆಯೇ ಇರಬೇಕು, ಆತ ಕೆಟ್ಟದ್ದನ್ನು ಪ್ರಚಾರ ಮಾಡಬಾರದು ಎಂಬ ಆದರ್ಶವನ್ನು ಬಾಲಕೃಷ್ಣ ಪಾಲಿಸಿಕೊಂಡು ಬರುತ್ತಿದ್ದಾರೆ. ಆದರೆ ‘ಆವೇಶಂ’ ಸಿನಿಮಾದ ರಂಗ ಪಾತ್ರ ತುಸು ಭಿನ್ನ, ಆ ಪಾತ್ರದಲ್ಲಿ ಕೆಲ ಋಣಾತ್ಮಕ ಅಂಶಗಳೂ ಸಹ ಇವೆ ಹಾಗಾಗಿ ಆ ಪಾತ್ರದಲ್ಲಿ ನಟಿಸಲು ಬೇಡ ಎಂದಿದ್ದಾರಂತೆ ಬಾಲಕೃಷ್ಣ.

ನಟ ಬಾಲಕೃಷ್ಣ ಪ್ರಸ್ತುತ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಾಲಕೃಷ್ಣ ನಟನೆಯ 109ನೇ ಸಿನಿಮಾದಲ್ಲಿ ಬಾಲಿವುಡ್ ನಟ ಬಾಬಿ ಡಿಯೋಲ್, ಕನ್ನಡದ ನಟ ರಿಶಿ ಸಹ ಇದ್ದಾರೆ. ಸಿನಿಮಾಕ್ಕೆ ಪಾಯಲ್ ರಜಪೂತ್ ನಾಯಕಿ. ಕೆಎಸ್ ರವೀಂದ್ರ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಇದಾದ ಬಳಿಕ 110ನೇ ಸಿನಿಮಾವನ್ನು ಬೊಯಪಾಟಿ ಶ್ರೀನು ನಿರ್ದೇಶನ ಮಾಡಲಿದ್ದಾರೆ. ಇವರಿಬ್ಬರ ಕಾಂಬಿನೇಷನ್​ನ ಈ ಹಿಂದಿನ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ