ನರೇಂದ್ರ ಮೋದಿ ಬಯೋಪಿಕ್ ‘ಮಾ ವಂದೇ’ ಶೂಟಿಂಗ್ ಶುರು; ರವಿ ಬಸ್ರೂರು ಸಂಗೀತ

ನರೇಂದ್ರ ಮೋದಿ ಅವರ ರಾಜಕೀಯ ಮತ್ತು ಖಾಸಗಿ ಬದುಕಿನ ಕುರಿತ ಬಯೋಪಿಕ್ ‘ಮಾ ವಂದೇ’ ಸಿದ್ಧವಾಗುತ್ತಿದೆ. ಮುಂಬೈನಲ್ಲಿ ಇತ್ತೀಚೆಗೆ ಈ ಸಿನಿಮಾಗೆ ಮುಹೂರ್ತ ನೆರವೇರಿಸಲಾಗಿದ್ದು, ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಉನ್ನಿ ಮುಕುಂದನ್ ಅವರು ಮೋದಿ ಪಾತ್ರವನ್ನು ಮಾಡುತ್ತಿದ್ದು, ಘಟಾನುಘಟಿ ತಂತ್ರಜ್ಞರು ಈ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ.

ನರೇಂದ್ರ ಮೋದಿ ಬಯೋಪಿಕ್ ‘ಮಾ ವಂದೇ’ ಶೂಟಿಂಗ್ ಶುರು; ರವಿ ಬಸ್ರೂರು ಸಂಗೀತ
Maa Vande Movie Team

Updated on: Dec 21, 2025 | 11:30 AM

ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಜೀವನದ ಕುರಿತು ಹೊಸದೊಂದು ಸಿನಿಮಾ ತಯಾರಾಗುತ್ತಿದೆ. ಈ ಸಿನಿಮಾಗೆ ‘ಮಾ ವಂದೇ’ (Maa Vande) ಎಂದು ಹೆಸರು ಇಡಲಾಗಿದೆ. ಈಗ ಈ ಸಿನಿಮಾದ ಮುಹೂರ್ತ ಸಮಾರಂಭ ನಡೆದಿದೆ. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು (Ravi Basrur) ಅವರು ಈ ಸಿನಿಮಾಗೆ ಸಂಗೀತ ನೀಡಲಿದ್ದಾರೆ ಎಂಬುದು ವಿಶೇಷ. ಮಲಯಾಳಂ ಚಿತ್ರರಂಗದ ಖ್ಯಾತ ನಟ ಉನ್ನಿ ಮುಕುಂದನ್ ಅವರು ಈ ಸಿನಿಮಾದಲ್ಲಿ ನರೇಂದ್ರ ಮೋದಿ ಪಾತ್ರವನ್ನು ಮಾಡಲಿದ್ದಾರೆ. ನರೇಂದ್ರ ಮೋದಿ ಬಯೋಪಿಕ್ ಬಗ್ಗೆ ಅವರ ಅಭಿಮಾನಿಗಳಿಗೆ ಕೌತುಕ ಮೂಡಿದೆ.

ನರೇಂದ್ರ ಮೋದಿ ಅವರ ಜೀವನದ ವಿವರಗಳನ್ನು ಈಗಾಗಲೇ ಬೇರೆ ಬೇರೆ ರೂಪದಲ್ಲಿ ದಾಖಲಿಸಲಾಗಿದೆ. 2019ರಲ್ಲಿ ‘ಪಿಎಂ ನರೇಂದ್ರ ಮೋದಿ’ ಸಿನಿಮಾ ಬಿಡುಗಡೆ ಆಗಿತ್ತು. ಅದರಲ್ಲಿ ವಿವೇಕ್ ಒಬೆರಾಯ್ ಅವರು ಮೋದಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಬಾಕ್ಸ್ ಆಫೀಸ್​​ನಲ್ಲಿ ಆ ಚಿತ್ರ ಸೋತಿತ್ತು. ನರೇಂದ್ರ ಮೋದಿ ಲುಕ್ ಬಗ್ಗೆ ಟೀಕೆ ವ್ಯಕ್ತವಾಗಿತ್ತು.

ಈಗ ನರೇಂದ್ರ ಮೋದಿ ಅವರ ಖಾಸಗಿ ಬದುಕು ಮತ್ತು ರಾಜಕೀಯ ಜೀವನದ ವಿವರಗಳನ್ನು ಇಟ್ಟುಕೊಂಡು ‘ಮಾ ವಂದೇ’ ಸಿನಿಮಾ ಮಾಡಲಾಗುತ್ತಿದೆ. ಈ ಸಿನಿಮಾವನ್ನು ಸೆಪ್ಟೆಂಬರ್ ತಿಂಗಳಲ್ಲಿ ಘೋಷಿಸಲಾಗಿತ್ತು. ಈಗ ಶೂಟಿಂಗ್ ಆರಂಭ ಆಗಿದೆ. ಮುಹೂರ್ತ ಸಮಾರಂಭದಲ್ಲಿ ಚಿತ್ರತಂಡದವರು ಭಾಗಿ ಆಗಿದ್ದಾರೆ. ಮುಂಬೈನಲ್ಲಿ ಮುಹೂರ್ತ ಮಾಡಲಾಗಿದ್ದು, ರವಿ ಬಸ್ರೂರು ಅವರ ಕೂಡ ಪಾಲ್ಗೊಂಡಿದ್ದಾರೆ.

‘ಮಾ ವಂದೇ’ ಸಿನಿಮಾದ ಮುಹೂರ್ತ ಸಮಾರಂಭದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ‘ಸಿಲ್ವರ್ ಕಾಸ್ಟ್ ಕ್ರಿಯೇಷನ್ಸ್’ ಮೂಲಕ ವೀರ್ ರೆಡ್ಡಿ ಎಂ. ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕ್ರಾಂತಿ ಕುಮಾರ್ ಸಿ.ಹೆಚ್. ಅವರು ‘ಮಾ ವಂದೇ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಗುಜರಾತಿ, ಮಲಯಾಳಂ, ಮರಾಠಿ ಮುಂತಾದ ಭಾಷೆಗಳಲ್ಲಿ ಈ ಸಿನಿಮಾ ಸಿದ್ಧವಾಗಲಿದೆ.

ಇದನ್ನೂ ಓದಿ:  ನಿಂತೇ ಹೋಯ್ತು ಶಿವಾಜಿ ಬಯೋಪಿಕ್; ಕಾರಣ ತಿಳಿಸಿದ ನಿರ್ದೇಶಕ

ಘಟಾನುಘಟಿ ತಂತ್ರಜ್ಞರು ‘ಮಾ ವಂದೇ’ ಸಿನಿಮಾದ ತಾಂತ್ರಿಕ ಬಳಗದಲ್ಲಿ ಕೆಲಸ ಮಾಡುತ್ತಿದ್ದಾರೆ. ‘ಬಾಹುಬಲಿ’ ಸಿನಿಮಾಗೆ ಛಾಯಾಗ್ರಹಣ ಮಾಡಿದ ಕೆ.ಕೆ. ಸೇಂಥಿಲ್ ಕುಮಾರ್ ಅವರ ಈ ಚಿತ್ರಕ್ಕೂ ಕ್ಯಾಮೆರಾ ಕೆಲಸ ಮಾಡಲಿದ್ದಾರೆ. ‘ಕೆಜಿಎಫ್: ಚಾಪ್ಟರ್ 1’, ‘ಕೆಜಿಎಫ್: ಚಾಪ್ಟರ್ 2’, ‘ಸಲಾರ್’ ಸಿನಿಮಾಗಳಿಂದ ಫೇಮಸ್ ಆದ ರವಿ ಬಸ್ರೂರು ಅವರು ಮೋದಿ ಬಯೋಪಿಕ್​​ಗೆ ಸಂಗೀತ ನೀಡುವ ಅವಕಾಶ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.