ಶಾಲಾ ಮಕ್ಕಳಿಗೆ 10 ನಿಮಿಷದ ಡ್ಯಾನ್ಸ್ ಹೇಳಿಕೊಡಲು 5 ಲಕ್ಷ ಕೇಳಿದ್ರು; ‘ಗಜ’ ಸಿನಿಮಾ ನಟಿ ಬಗ್ಗೆ ಸಚಿವನ ಆರೋಪ

ಕೇರಳ ರಾಜ್ಯ ಶಿಕ್ಷಣ ಸಚಿವ ವಿ. ಶಿವನ್​ಕುಟ್ಟಿ ಅವರು ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಮುಂಬರುವ ರಾಜ್ಯ ಶಾಲಾ ಉತ್ಸವಕ್ಕೆ ಸ್ವಾಗತಕೋರುವ ಡ್ಯಾನ್ಸ್ ಮಾಡಲು ನಿರ್ಧರಿಸಲಾಗಿತ್ತು. 10 ನಿಮಿಷಗಳ ಡ್ಯಾನ್ಸ್ ಇದಾಗಿದ್ದು, ಇದನ್ನು ಹೇಳಿಕೊಡಲು ಅವರು ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಶಾಲಾ ಮಕ್ಕಳಿಗೆ 10 ನಿಮಿಷದ ಡ್ಯಾನ್ಸ್ ಹೇಳಿಕೊಡಲು 5 ಲಕ್ಷ ಕೇಳಿದ್ರು; ‘ಗಜ’ ಸಿನಿಮಾ ನಟಿ ಬಗ್ಗೆ ಸಚಿವನ ಆರೋಪ
ನವ್ಯಾ ನಾಯರ್

Updated on: Dec 09, 2024 | 2:32 PM

‘ಗಜ’ ಸಿನಿಮಾದಲ್ಲಿ ನಟಿಸಿ ಕನ್ನಡ ಮಂದಿಗೆ ಪರಿಚಯ ಆಗೀರೋ ನವ್ಯಾ ನಾಯರ್​ಗೆ ಸಾಕಷ್ಟು ಬೇಡಿಕೆ ಇದೆ. ಅವರು ಕನ್ನಡದಲ್ಲಿ ‘ದೃಶ್ಯ’ ಹಾಗೂ ‘ದೃಶ್ಯ 2’ ಸಿನಿಮಾಗಳಲ್ಲಿಯೂ ನಟಿಸಿದ್ದರು. ಈಗ ಅವರ ವಿರುದ್ಧ ಗಂಭೀರ ಆರೋಪ ಒಂದು ಕೇಳಿ ಬಂದಿದೆ. ಅವರು, ಸರ್ಕಾರಿ ಶಾಲಾ ಮಕ್ಕಳಿಗೆ ಡ್ಯಾನ್ಸ್ ಹೇಳಿಕೊಡಲು 5 ಲಕ್ಷ ರೂಪಾಯಿ ಕೇಳಿದ್ದರು ಎನ್ನಲಾಗಿದೆ. ಈ ಬಗ್ಗೆ ಸಚಿರೊಬ್ಬರು ಮಾತನಾಡಿದ್ದಾರೆ. ಅವರು ನೇರವಾಗಿ ಹೆಸರು ಉಲ್ಲೇಖಿಸದೇ ಇದ್ದರೂ ಹಾಗೊಂದು ಚರ್ಚೆ ನಡೆಯುತ್ತಿದೆ.

ಕೇರಳ ರಾಜ್ಯ ಶಿಕ್ಷಣ ಸಚಿವ ವಿ. ಶಿವನ್​ಕುಟ್ಟಿ ಅವರು ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಮುಂಬರುವ ರಾಜ್ಯ ಶಾಲಾ ಉತ್ಸವಕ್ಕೆ ಸ್ವಾಗತಕೋರುವ ಡ್ಯಾನ್ಸ್ ಮಾಡಲು ನಿರ್ಧರಿಸಲಾಗಿತ್ತು. 10 ನಿಮಿಷಗಳ ಡ್ಯಾನ್ಸ್ ಇದಾಗಿದ್ದು, ಇದನ್ನು ಹೇಳಿಕೊಡಲು ಅವರು ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅಲ್ಲದೆ, ದುರಹಂಕಾರ ತೋರಿಸಿದ್ದರು ಎನ್ನಲಾಗಿದೆ.

‘ನನಗೆ ಆ ಘಟನೆಯ ಬಗ್ಗೆ ಬೇಸರ ಇದೆ. ನಾನು ನಟಿಯೊಬ್ಬರ ಬಳಿ ಶಾಲಾ ಮಕ್ಕಳಿಗೆ 10 ನಿಮಿಷಗಳ ಡ್ಯಾನ್ಸ್ ಕಲಿಸಬಹುದೇ ಎಂದು ಕೇಳಿದೆ. ಇದಕ್ಕೆ ಅವರು ಒಪ್ಪಿದರು. ಆ ಬಳಿಕ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟರು. ಇದು ನಿಜಕ್ಕೂ ಬೇಸರ ಮೂಡಿಸುವಂಥದ್ದು’ ಎಂದು ಶಿವನ್ ಕುಟ್ಟಿ ಹೇಳಿದ್ದಾರೆ. ಅವರು ನಟಿಯ ಹೆಸರನ್ನು ರಿವೀಲ್ ಮಾಡಿಲ್ಲ. ಆದರೆ, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇರುವ ಚರ್ಚೆ ಏನು ಎಂದರೆ ಈ ರೀತಿ ಬೇಡಿಕೆ ಇಟ್ಟಿದ್ದು ನವ್ಯಾ ನಾಯರ್ ಎನ್ನಲಾಗಿದೆ.

‘ಹಣದ ದುರಾಸೆಗೆ ಬೀಳದೇ ಇರುವ ಅನೇಕ ನೃತ್ಯ ಶಿಕ್ಷಕರಿದ್ದಾರೆ. ಈಗ ನಾವು ವಿದ್ಯಾರ್ಥಿಗಳಿಗೆ ಅವರಿಂದ ಡ್ಯಾನ್ಸ್ ಕಲಿಸೋ ನಿರ್ಧಾರಕ್ಕೆ ಬಂದಿದ್ದೇವೆ’ ಎಂದು ಶಿವನ್​ಕುಟ್ಟಿ ಹೇಳಿದ್ದಾರೆ. ‘ಈ ರೀತಿಯ ಯೂತ್ ಫೆಸ್ಟಿವಲ್​ನಿಂದ ಸಾಕಷ್ಟು ಸಿನಿಮಾ ಸ್ಟಾರ್​ಗಳು ಬೆಳೆದಿದ್ದಾರೆ. ಈಗ ಅದಕ್ಕೆ ಅಗೌರವ ಸೂಚಿಸುತ್ತಿದ್ದಾರೆ’ ಎಂದು ಸಚಿವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: ನಟಿ ನವ್ಯಾ ನಾಯರ್ ವಿರುದ್ಧ ಎಫ್​ಐಆರ್

ನವ್ಯಾ ನಾಯರ್ ಅವರು ಇತ್ತೀಚೆಗೆ ಮಲಯಾಳಂ ಚಿತ್ರರಂಗದಲ್ಲಿ ಬ್ಯುಸಿ ಇದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರು ನೃತ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.