‘ಪಿಆರ್​ಕೆ ಆಡಿಯೋ’ದಲ್ಲಿ ‘ನೀನೊಂದು ಶಾಯರಿ’; ಕಾಡುವ ಕಿರುಚಿತ್ರಕ್ಕೆ ಸಿಕ್ತು ಮೆಚ್ಚುಗೆ

ರಾಕೇಶ್​ ಮಯ್ಯ ಮತ್ತು ಅಶ್ವಿತಾ ಹೆಗಡೆ ಅವರು ‘ನೀನೊಂದು ಶಾಯರಿ’ ಕಿರುಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಪ್ರೇಮಿಗಳಾಗಿ ಅವರಿಬ್ಬರು ಕಾಣಿಸಿಕೊಂಡಿದ್ದಾರೆ. ಇಬ್ಬರ ಕಾಂಬಿನೇಷನ್​ ಚೆನ್ನಾಗಿ ಮೂಡಿಬಂದಿದೆ. ಸ್ವರಾ ಮತ್ತು ಸಾಗರ್​ ಎಂಬ ಪಾತ್ರಗಳಿಗೆ ಅವರು ಜೀವ ತುಂಬಿದ್ದಾರೆ. ಈ ಪಾತ್ರಗಳು ನೋಡುಗರಿಂದ ಪ್ರಶಂಸೆ ಗಳಿಸುತ್ತಿವೆ.

‘ಪಿಆರ್​ಕೆ ಆಡಿಯೋ’ದಲ್ಲಿ ‘ನೀನೊಂದು ಶಾಯರಿ’; ಕಾಡುವ ಕಿರುಚಿತ್ರಕ್ಕೆ ಸಿಕ್ತು ಮೆಚ್ಚುಗೆ
ರಾಕೇಶ್​ ಮಯ್ಯ, ಅಶ್ವಿತಾ ಹೆಗಡೆ

Updated on: Jan 18, 2024 | 5:31 PM

ಕನ್ನಡದಲ್ಲಿ ಕಿರುಚಿತ್ರಗಳಿಗೇನೂ ಕೊರತೆ ಇಲ್ಲ. ಅವುಗಳ ನಡುವೆ ಕೆಲವು ಪ್ರಯತ್ನಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಇತ್ತೀಚೆಗೆ ಪಿಆರ್​ಕೆ ಆಡಿಯೋ’ (PRK Audio) ಮೂಲಕ ‘ನೀನೊಂದು ಶಾಯರಿ’ ಶಾರ್ಟ್​ ಫಿಲ್ಮ್​ (Kannada Short Film) ಬಿಡುಗಡೆ ಆಗಿದೆ. 20 ನಿಮಿಷ ಅವಧಿಯ ಈ ಕಿರುಚಿತ್ರಕ್ಕೆ ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನೋಡಿದ ಎಲ್ಲರೂ ಪಾಸಿಟಿವ್​ ಆಗಿ ಕಮೆಂಟ್​ ಮಾಡುತ್ತಿದ್ದಾರೆ. ಕೇವಲ ಎರಡು ಪಾತ್ರಗಳನ್ನು ಹೊಂದಿರುವ ‘ನೀನೊಂದು ಶಾಯರಿ’ (Neenondu Shayari) ಕಿರುಚಿತ್ರವು ತುಂಬ ಕಾವ್ಯಾತ್ಮಕವಾಗಿ ಮೂಡಿಬಂದಿದೆ. ದಿನ ಕಳೆದಂತೆ ‘ಪಿಆರ್​ಕೆ ಆಡಿಯೋ’ದಲ್ಲಿ ಇದರ ವೀಕ್ಷಣೆ ಹೆಚ್ಚಾಗುತ್ತಿದೆ.

ರಾಕೇಶ್​ ಮಯ್ಯ ಮತ್ತು ಅಶ್ವಿತಾ ಹೆಗಡೆ ಅವರು ‘ನೀನೊಂದು ಶಾಯರಿ’ ಕಿರುಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಪ್ರೇಮಿಗಳಾಗಿ ಅವರಿಬ್ಬರು ಕಾಣಿಸಿಕೊಂಡಿದ್ದಾರೆ. ಇಬ್ಬರ ಕಾಂಬಿನೇಷನ್​ ಚೆನ್ನಾಗಿ ಮೂಡಿಬಂದಿದೆ. ಸ್ವರಾ ಮತ್ತು ಸಾಗರ್​ ಎಂಬ ಪಾತ್ರಗಳಿಗೆ ಅವರು ಜೀವ ತುಂಬಿದ್ದಾರೆ. ಈ ಪಾತ್ರಗಳು ನೋಡುಗರಿಂದ ಪ್ರಶಂಸೆ ಗಳಿಸುತ್ತಿವೆ. ಒಂದು ಕವನದ ರೀತಿ ಮೂಡಿಬಂದಿರುವ ಈ ಕಿರುಚಿತ್ರದ ಲವ್​ಸ್ಟೋರಿ ಇಷ್ಟವಾಗುವಂತಿದೆ. ‘ಮಳೆ ಎಲ್ಲರಿಗೂ ರೊಮ್ಯಾಂಟಿಕ್​ ಆಗಿರುವುದಿಲ್ಲ. ಕೆಲವರಿಗೆ ಕಣ್ಣೀರು ಮರೆಮಾಚಲು, ಇನ್ನೂ ಕೆಲವರಿಗೆ ನೆನಪುಗಳ ಮರೆಯಲು..’ ಎಂಬಿತ್ಯಾದಿ ಡೈಲಾಗ್​ಗಳಿಂದಾಗಿ ‘ನೀನೊಂದು ಶಾಯರಿ’ಯ ಅಂದ ಹೆಚ್ಚಿದೆ.

ಇದನ್ನೂ ಓದಿ: ‘ಕಾಮಿಡಿ ಕಿಲಾಡಿಗಳು’ ನಟ ಸೀರುಂಡೆ ರಘು ಹೀರೋ ಆಗಿರುವ ‘ರಣಾಕ್ಷ’ ಚಿತ್ರದ ಆಡಿಯೋ ಬಿಡುಗಡೆ

ಭರತ ಕೆ. ತುಮಕೂರು ಅವರು ‘ನೀನೊಂದು ಶಾಯರಿ’ ಕಿರುಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸಂಭಾಷಣೆ ಕೂಡ ಅವರದ್ದೇ. ಅವಿನಾಶ ಶಾಸ್ತ್ರಿ ಅವರು ಛಾಯಾಗ್ರಹಣ ಮಾಡಿದ್ದಾರೆ. ಕಥೆಯ ಜೊತೆಗೆ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತಿದೆ. ಪ್ರಸನ್ನ ಕುಮಾರ್​ ಎಂ.ಎಸ್​. ಅವರ ಸಂಗೀತ ನಿರ್ದೇಶನ ಈ ಕಿರುಚಿತ್ರಕ್ಕಿದೆ. ಸಂಜೀವ್​ ಜಾಗಿರ್ದಾರ್​ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ‘4s ಪ್ರೊಡಕ್ಷನ್​’ ಮತ್ತು ‘ಕ್ಲ್ಯಾಪ್​ಬೋರ್ಡ್​ ಪ್ರೊಡಕ್ಷನ್​’ ಮೂಲಕ ಈ ಶಾರ್ಟ್​ಫಿಲ್ಮ್​ ನಿರ್ಮಾಣ ಆಗಿದೆ.

‘ನೀನೊಂದು ಶಾಯರಿ’ ಕಿರುಚಿತ್ರ:

ರಂಗಭೂಮಿ ಹಿನ್ನೆಲೆ ಹೊಂದಿರುವ ಅಶ್ವಿತಾ ಹೆಗಡೆ ಅವರು ಈ ಮೊದಲು ‘ಕಂಬ್ಳಿಹುಳ’ ಸಿನಿಮಾದಲ್ಲಿ ನಟಿಸಿದ್ದರು. ಈಗ ಅವರು ‘ನೀನೊಂದು ಶಾಯರಿ’ ಶಾರ್ಟ್​ ಫಿಲ್ಮ್​ ಮೂಲಕ ಗಮನ ಸಳೆಯುತ್ತಿದ್ದಾರೆ. ಇನ್ನು, ‘ಮಗಳು ಜಾನಕಿ’ ಸೀರಿಯಲ್​ನಲ್ಲಿ ಪ್ರಮುಖ ಪಾತ್ರ ಮಾಡಿ ಜನಮನ ಗೆದ್ದ ನಟ ರಾಕೇಶ್​ ಮಯ್ಯ ಅವರು ಈಗಾಗಲೇ ‘ಖುಷ್​ ಖುಷಿಯಾಗಿ’ ರೀತಿಯ ಕಿರುಚಿತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅವರ ನಟನೆಯಿಂದ ‘ನೀನೊಂದು ಶಾಯರಿ’ ತೂಕ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us