‘ಕಾಮಿಡಿ ಕಿಲಾಡಿಗಳು’ ನಟ ಸೀರುಂಡೆ ರಘು ಹೀರೋ ಆಗಿರುವ ‘ರಣಾಕ್ಷ’ ಚಿತ್ರದ ಆಡಿಯೋ ಬಿಡುಗಡೆ
‘ರಣಾಕ್ಷ’ ಚಿತ್ರತಂಡದ ಪ್ರಯತ್ನಕ್ಕೆ ನಾಗೇಂದ್ರ ಪ್ರಸಾದ್ ಮೆಚ್ಚುಗೆ ಸೂಚಿಸಿದ್ದಾರೆ. ‘ಟೀಸರ್ ಮತ್ತು ಹಾಡುಗಳಲ್ಲಿ ರಣಾಕ್ಷ ತಂಡದ ಶ್ರಮ ಕಾಣುತ್ತದೆ. ಈ ಟೈಟಲ್ ತುಂಬ ಸ್ಟ್ರಾಂಗ್ ಆಗಿದೆ. ಈ ಚಿತ್ರದ ಹಾಡುಗಳನ್ನು ನೋಡಿ ಖುಷಿ ಎನಿಸಿತು. ಸಂಗೀತ ನಿರ್ದೇಶಕ ವಿಶಾಲ್ ಅಲಾಪ್ ಅವರ ಕೆಲಸ ಸೊಗಸಾಗಿದೆ’ ಎಂದು ಅವರು ಹೇಳಿದ್ದಾರೆ.
ನಟ ಸೀರುಂಡೆ ರಘು (Seerunde Raghu) ಅವರು ಕನ್ನಡ ಕಿರುತೆರೆಯಲ್ಲಿ ಫೇಮಸ್ ಆಗಿದ್ದಾರೆ. ‘ಕಾಮಿಡಿ ಕಿಲಾಡಿಗಳು’ (Comedy Khiladigalu) ಶೋ ಮೂಲಕ ಗುರುತಿಸಿಕೊಂಡ ಅವರು ‘ಸತ್ಯ’ ಸೀರಿಯಲ್ನಲ್ಲೂ ನಟಿಸಿ ಪ್ರೇಕ್ಷಕರ ಗಮನ ಸೆಳೆದರು. ಈಗ ಅವರು ಸಿನಿಮಾದಲ್ಲಿ ಹೀರೋ ಆಗಿದ್ದಾರೆ. ಅವರು ನಟಿಸಿರುವ ಸಿನಿಮಾದ ಹೆಸರು ‘ರಣಾಕ್ಷ’. ಇತ್ತೀಚೆಗೆ ಈ ಸಿನಿಮಾದ ಆಡಿಯೋ ಬಿಡುಗಡೆ ಮಾಡಲಾಯಿತು. ಖ್ಯಾತ ಗೀತರಚನಾಕಾರ ನಾಗೇಂದ್ರ ಪ್ರಸಾದ್ ಅವರು ‘ರಣಾಕ್ಷ’ (Ranaksha) ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಸಿನಿಮಾ ಬಗ್ಗೆ, ತಮ್ಮ ಪಾತ್ರದ ಬಗ್ಗೆ ಸೀರುಂಡೆ ರಘು ಮಾತನಾಡಿದ್ದಾರೆ. ಮೊದಲ ಬಾರಿಗೆ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ ಖುಷಿ ಅವರಿಗೆ ಇದೆ.
‘ನಾನು ಸಹ ಮಾಧ್ಯಮದಲ್ಲಿ ಕ್ಯಾಮರಾ, ಟ್ರೈಪಾಡ್ ಹಿಡಿದುಕೊಂಡು ಬಂದವನು. ಆ ಬಳಿಕ ಕಾಮಿಡಿ ಕಿಲಾಡಿಗಳು ಶೋನಲ್ಲಿ ಕಾಣಿಸಿಕೊಂಡೆ. 20ಕ್ಕೂ ಅಧಿಕ ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನು ಮಾಡಿದೆ. ಈಗ ಈ ಸಿನಿಮಾದಲ್ಲಿ ಕಥಾನಾಯಕನ ಪಾತ್ರ ಮಾಡಿದ್ದೇನೆ. ಮೊದಲ ಬಾರಿಗೆ ಲೀಡ್ ರೋಲ್ ಮಾಡುವ ಅವಕಾಶ ಸಿಕ್ಕಿದೆ. ನಾಲ್ವರು ಗೆಳೆಯರ ಜೊತೆ ಸಾಗುವ ಪಾತ್ರ ಇದು. ಅವಕಾಶ ನೀಡಿದ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಧನ್ಯವಾದಗಳು. ನಾನು ಹೀರೋ ಆಗಿ ಅಭಿನಯಿಸುತ್ತಿರುವುದರಿಂದ ಬೇರೆ ಪಾತ್ರಗಳನ್ನು ಮಾಡಲ್ಲ ಎಂದು ಭಾವಿಸಿ ಕೆಲವೊಂದು ಅವಕಾಶಗಳು ಕೈತಪ್ಪಿವೆ. ಆದರೆ ನಾನೊಬ್ಬ ಕಲಾವಿದ. ಯಾವ ಪಾತ್ರವಾದರೂ ಸರಿ, ಮಾಡುವುದಷ್ಟೇ ನನ್ನ ಕೆಲಸ. ಮೊದಲ ಸಲ ಕಾಮಿಡಿ ಬಿಟ್ಟು ಕ್ಲಾಸ್ ಹಾಗೂ ಮಾಸ್ ಆಗಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದು ರಘು ಹೇಳಿದ್ದಾರೆ.
ಇದನ್ನೂ ಓದಿ: ಕಾಮಿಡಿ ಕಿಲಾಡಿಗಳ ‘ಆನ್ಲೈನ್ ಮದುವೆ, ಆಫ್ಲೈನ್ ಶೋಭನ’
ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥಾಹಂದರ ‘ರಣಾಕ್ಷ’ ಸಿನಿಮಾದಲ್ಲಿ ಇದೆ. ರಾಘವ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ವಿಶಾಲ್ ಆಲಾಪ್ ಅವರು ಸಂಗೀತ ನೀಡಿದ್ದಾರೆ. ದೀಪಕ್ ಕುಮಾರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಸಕಲೇಶಪುರ, ಮೂಡಬಿದ್ರೆ, ಹೊನ್ನಾವರ, ಕಾರ್ಕಳ ಮುಂತಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈ ಸಿನಿಮಾದಲ್ಲಿ ಮೂರು ಸಾಹಸ ದೃಶ್ಯಗಳಿವೆ. ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಚಿತ್ರತಂಡ ಕಾಯುತ್ತಿದೆ.
‘ರಣಾಕ್ಷ’ ಎಂದರೆ ಏನು ಎಂಬ ಬಗ್ಗೆ ನಿರ್ದೇಶಕ ರಾಘವ ಅವರು ಮಾಹಿತಿ ನೀಡಿದ್ದಾರೆ. ‘ರಣಾಕ್ಷ ಎಂದರೆ ಹದ್ದಿನಂತೆ ಕಣ್ಣಿಟ್ಟು ಕಾಯುವವನು ಎಂದು ಅರ್ಥ. ಸಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನು ಒಳಗೊಂಡ ಚಿತ್ರ ಇದು. ಯಾವುದೇ ಮಂತ್ರ, ತಂತ್ರ, ಶಕ್ತಿ ಏನೇ ಸಮಸ್ಯೆ ಎದುರಾದರೂ ಅದನ್ನು ಎದುರಿಸುವುದಕ್ಕೆ ಮನುಷ್ಯನೇ ಬರಬೇಕು. ಅದು ಹೇಗೆ ಎಂಬುದನ್ನು ಸಿನಿಮಾದಲ್ಲಿ ತೋರಿಸಲಿದ್ದೇವೆ’ ಎಂದು ನಿರ್ದೇಶಕರು ಹೇಳಿದ್ದಾರೆ. ರಾಮು ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ
ಚಿತ್ರತಂಡದ ಪ್ರಯತ್ನಕ್ಕೆ ನಾಗೇಂದ್ರ ಪ್ರಸಾದ್ ಮೆಚ್ಚುಗೆ ಸೂಚಿಸಿದ್ದಾರೆ. ‘ಟೀಸರ್ ಮತ್ತು ಹಾಡುಗಳಲ್ಲಿ ರಣಾಕ್ಷ ತಂಡದ ಶ್ರಮ ಕಾಣುತ್ತದೆ. ಈ ಟೈಟಲ್ ತುಂಬ ಸ್ಟ್ರಾಂಗ್ ಆಗಿದೆ. ಈ ಚಿತ್ರದ ಹಾಡುಗಳನ್ನು ನೋಡಿ ಖುಷಿ ಎನಿಸಿತು. ಸಂಗೀತ ನಿರ್ದೇಶಕ ವಿಶಾಲ್ ಅಲಾಪ್ ಅವರ ಕೆಲಸ ಸೊಗಸಾಗಿದೆ’ ಎಂದು ನಾಗೇಂದ್ರ ಪ್ರಸಾದ್ ಹೇಳಿದ್ದಾರೆ. ಸೀರುಂಡೆ ರಘು ಜೊತೆ ನಾಯಕಿಯಾಗಿ ರಕ್ಷಾ ಅಭಿನಯಿಸಿದ್ದಾರೆ. ಇದು ಅವರಿಗೆ ಮೊದಲ ಸಿನಿಮಾ. ಹಳ್ಳಿ ಹುಡುಗಿ ಪಾತ್ರದಲ್ಲಿ ಅವರು ನಟಿಸಿದ್ದಾರೆ. ನಟಿ ರೋಹಿ ಅವರಿಗೂ ಒಂದು ಪ್ರಮುಖ ಪಾತ್ರವಿದೆ. ಟೀಸರ್ ಮತ್ತು ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೋಹನ್ ರಾವ್ ನಾಲ್ವಡೆ, ಗಿರೀಶ್ ಗೌಡ, ರಮೇಶ್ ಗೌಡ, ಲಕ್ಷ್ಮಣ್ ಪಡಿಮನಿ ಮುಂತಾದವರು ಭಾಗಿ ಆಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ