ಪಾರ್ಟಿಗೆ ಕರಿಯಲ್ವಾ ಎಂದ ಶಿವಣ್ಣನಿಗೆ, ರಕ್ಷಿತ್ ಶೆಟ್ಟಿ ಹೇಳಿದ್ದೇನು?

Rakshit Shetty: ‘ಪಾರ್ಟಿಗೆ ಕರೆಯೋದು ಮರೆಯಬೇಡಿ’ ಎಂದ ಶಿವರಾಜ್​ ಕುಮಾರ್​ ಅವರಿಗೆ ರಕ್ಷಿತ್ ಶೆಟ್ಟಿ ಕೊಟ್ಟ ಭರವಸೆ ಏನು?

ಪಾರ್ಟಿಗೆ ಕರಿಯಲ್ವಾ ಎಂದ ಶಿವಣ್ಣನಿಗೆ, ರಕ್ಷಿತ್ ಶೆಟ್ಟಿ ಹೇಳಿದ್ದೇನು?
Follow us
ಮಂಜುನಾಥ ಸಿ.
|

Updated on: Jan 18, 2024 | 7:39 PM

ರಕ್ಷಿತ್ ಶೆಟ್ಟಿ (Rakshit Shetty) ನಿರ್ಮಿಸಿ, ದಿಗಂತ್ ಮಂಚಾಲೆ, ಯೋಗಿ ನಟಿಸಿರುವ ಹಾಸ್ಯ ಪ್ರಧಾನ ಥ್ರಿಲ್ಲರ್ ಸಿನಿಮಾ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದ ಟ್ರೈಲರ್ ಎರಡು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಟ್ರೈಲರ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವು ಸೆಲೆಬ್ರಿಟಿಗಳು ಸಹ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಟ್ರೈಲರ್​ ವಿಡಿಯೋ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವರ್ಷಗಳಿಂದಲೂ ಪ್ರತಿಭಾವಂತರಿಗೆ, ಆತ್ಮೀಯರಿಗೆ ಬೆಂಬಲ ನೀಡುತ್ತಲೇ ಬಂದಿರುವ ಶಿವರಾಜ್ ಕುಮಾರ್ ಸಹ ‘ಬ್ಯಾಚುಲರ್ ಪಾರ್ಟಿ’ ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಬ್ಯಾಚುಲರ್ ಪಾರ್ಟಿ’ ಸಿನಿಮಾದ ಟ್ರೈಲರ್ ಲಿಂಕ್ ಹಂಚಿಕೊಂಡಿರುವ ಶಿವರಾಜ್ ಕುಮಾರ್ ‘ತುಂಬಾ ಮಜವಾಗಿದೆ, ಪಾರ್ಟಿಗೆ ನಮ್ಮನ್ನು ಕರೆಯೋದು ಮರೆಯಬೇಡಿ’ ಎಂದು ನಿರ್ದೇಶಕ ಅಭಿ ಹಾಗೂ ನಿರ್ಮಾಪಕ ರಕ್ಷಿತ್ ಶೆಟ್ಟಿಗೆ ಟ್ಯಾಗ್ ಮಾಡಿದ್ದಾರೆ. ಮುಂದುವರೆದು, ‘ಇಡೀ ಚಿತ್ರತಂಡಕ್ಕೆ ಶುಭ ಹಾರೈಕೆಗಳು’ ಎಂದು ನಟರಾದ ದಿಗಂತ್ ಹಾಗೂ ಯೋಗಿಗೆ ಸಹ ಟ್ವೀಟ್ ಅನ್ನು ಟ್ಯಾಗ್ ಮಾಡಿದ್ದಾರೆ.

ಶಿವರಾಜ್ ಕುಮಾರ್ ಅವರ ಪ್ರೀತಿ ಭರಿತ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ರಕ್ಷಿತ್ ಶೆಟ್ಟಿ, ‘ತುಂಬಾ ಧನ್ಯವಾದಗಳು, ಖಂಡಿತ ಶಿವಣ್ಣ, ನೀವು ಪಾರ್ಟಿಗೆ ಬರ್ತೀರ ಅಂದ್ರೆ ಈ ಸಲ ಪಾರ್ಟಿ ಇನ್ನೂ ಜೋರಾಗಿ ಮಾಡ್ತೀವಿ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ಶಿವರಾಜ್ ಕುಮಾರ್ ಅವರು ಬಹಳ ವರ್ಷಗಳಿಂದ ಪರಿಚಿತರು. ರಕ್ಷಿತ್​ರ ಮೊದಲ ಹಿಟ್ ಸಿನಿಮಾ ‘ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ’ ಸಿನಿಮಾಕ್ಕೆ ಶಿವಣ್ಣ ಬೆಂಬಲ ನೀಡಿದ್ದರು, ಮಾತ್ರವಲ್ಲ, ‘ರಕ್ಷಿತ್ ಶೆಟ್ಟಿ ನೋಡಿದರೆ ಕಮಲ್ ಹಾಸನ್ ನೋಡಿದಂತೆ ಭಾಸವಾಗುತ್ತದೆ’ ಎಂದು ಆಗಲೇ ರಕ್ಷಿತ್​ರ ಪ್ರತಿಭೆಯನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:ಶಿವರಾಜ್ ಕುಮಾರ್-ರಾಮ್ ಚರಣ್ ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ

‘ಬ್ಯಾಚುಲರ್ ಪಾರ್ಟಿ’ ಸಿನಿಮಾ ಹಾಸ್ಯಪ್ರಧಾನ ಜೊತೆಗೆ ಕೆಲವು ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ಸಿನಿಮಾ ಆಗಿದೆ. ಸಿನಿಮಾದಲ್ಲಿ ದಿಗಂತ್, ಯೋಗಿ ಹಾಗೂ ಅಚ್ಯುತ್ ಕುಮಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಬಾಲಾಜಿ ಮನೋಹರ್, ಪ್ರಕಾಶ್ ತುಮ್ಮಿನಾಡ್ ಸಹ ನಟಿಸಿದ್ದಾರೆ. ಸಿನಿಮಾದಲ್ಲಿ ಲೂಸಿಯಾ ಪವನ್, ಶೈನ್ ಶೆಟ್ಟಿ, ಸೋಷಿಯಲ್ ಮೀಡಿಯಾ ಸ್ಟಾರ್ ವಿಕ್ಕಿಪೀಡಿಯಾ, ಅಂತರಾಷ್ಟ್ರೀಯ ಖ್ಯಾತಿಯ ಯೂಟ್ಯೂಬರ್ ಅಚಾರಾ ಕರ್ಕ್ ಇನ್ನೂ ಕೆಲವರಿದ್ದಾರೆ.

ಸಿನಿಮಾವನ್ನು ಅಭಿಜಿತ್ ನಿರ್ದೇಶನ ಮಾಡಿದ್ದಾರೆ. ಮದುವೆಯಾಗುತ್ತಿರುವ ಗೆಳೆಯನ ಬ್ಯಾಚುಲರ್ ಪಾರ್ಟಿ ಮಾಡಲು ಬ್ಯಾಂಕಾಕ್​ಗೆ ಹೋಗುವ ಗೆಳೆಯರು ಏನೇನು ಮಜಾ ಮಾಡುತ್ತಾರೆ ಜೊತೆಗೆ ಯಾವ ರೀತಿಯ ಇಕ್ಕಟ್ಟಿಗೆ ಸಿಲುಕುತ್ತಾರೆ. ಅಲ್ಲಿಂದ ಹೇಗೆ ಬಚಾವಾಗುತ್ತಾರೆ. ‘ಬ್ಯಾಚುಲರ್ ಪಾರ್ಟಿ’ ಅವರ ಜೀವನದ ಮೇಲೆ ಬೀರುವ ಪರಿಣಾಮ ಏನು ಇತ್ಯಾದಿ ವಿಷಯಗಳನ್ನು ಸಿನಿಮಾ ಒಳಗೊಂಡಿದ್ದು, ಸಿನಿಮಾ ಜನವರಿ 26ಕ್ಕೆ ತೆರೆಗೆ ಬರುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ