ಭಾರತ ಕಷ್ಟದಲ್ಲಿದ್ದಾಗ ಮಾಲ್ಡೀವ್ಸ್​ಗೆ ಹೋಗಿ ಮಜಾ ಮಾಡುವ ಸೆಲೆಬ್ರಿಟಿಗಳು; ನೆಟ್ಟಿಗರಿಂದ ತರಾಟೆ

| Updated By: Digi Tech Desk

Updated on: Apr 27, 2021 | 12:07 PM

ಅನೇಕ ಸೆಲೆಬ್ರಿಟಿಗಳು ಮಾಲ್ಡೀವ್ಸ್​ಗೆ ತೆರಳಿದ್ದಾರೆ. ಇನ್ನೂ ಕೆಲವರು ಅಲ್ಲಿಗೆ ಹೋಗಲು ತಯಾರಿ ನಡೆಸಿದ್ದರು. ಅಷ್ಟರಲ್ಲಾಗಲೇ ಮಾಲ್ಡೀವ್ಸ್​ ಸರ್ಕಾರ ಶಾಕ್​ ನೀಡಿದೆ.

ಭಾರತ ಕಷ್ಟದಲ್ಲಿದ್ದಾಗ ಮಾಲ್ಡೀವ್ಸ್​ಗೆ ಹೋಗಿ ಮಜಾ ಮಾಡುವ ಸೆಲೆಬ್ರಿಟಿಗಳು; ನೆಟ್ಟಿಗರಿಂದ ತರಾಟೆ
ಮಾಲ್ಡೀವ್ಸ್​ನಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳು
Follow us on

ಭಾರತ ಈಗ ತುಂಬಾ ಸಂಕಷ್ಟದಲ್ಲಿದೆ. ಕೊರೊನಾ ವೈರಸ್​ನ ಎರಡನೇ ಅಲೆಗೆ ಸಿಲುಕಿ ಜನರೆಲ್ಲ ಪರದಾಡುತ್ತಿದ್ದಾರೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಜನಸಾಮಾನ್ಯರು ಕಣ್ಣೀರು ಹಾಕುತ್ತಿರುವಾಗ ಕೆಲವು ಸೆಲೆಬ್ರಿಟಗಳು ವಿದೇಶಕ್ಕೆ ಹಾರಿದ್ದಾರೆ. ತಮ್ಮ ಸಿನಿಮಾಗಳು ತೆರೆಕಂಡಾಗ ಪ್ರಚಾರಕ್ಕಾಗಿ ಜನರ ಬಳಿಗೆ ಬರುವ ಸೆಲೆಬ್ರಿಟಿಗಳೆಲ್ಲ ಕೊರೊನಾ ವೈರಸ್​ನಿಂದ ಉಂಟಾದ ಈ ಕಡುಕಷ್ಟ ಕಾಲದಲ್ಲಿ ವಿದೇಶಕ್ಕೆ ಹೋಗಿದ್ದಾರೆ. ಅದರಲ್ಲೂ ಮಾಲ್ಡೀವ್ಸ್​ನ ದ್ವೀಪಗಳಲ್ಲಿ ಎಂಜಾಯ್​ ಮಾಡುತ್ತ, ಸುಖವಾಗಿದ್ದಾರೆ. ಅಂಥವರನ್ನು ಈಗ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಭಾರತದ ಸೆಲೆಬ್ರಿಟಿಗಳಿಗೆ ಮಾಲ್ಡೀವ್ಸ್​ ಎಂದರೆ ಸಿಕ್ಕಾಪಟ್ಟೆ ಇಷ್ಟ. ಬಿಡುವು ಸಿಕ್ಕಾಗಲೆಲ್ಲ ಅವರು ಮಾಲ್ಡೀವ್ಸ್​ಗೆ ಹೋಗಿ ಅಲ್ಲಿನ ದ್ವೀಪಗಳಲ್ಲಿ ಕಾಲ ಕಳೆಯುತ್ತಾರೆ. ಇತ್ತೀಚೆಗೆ ಮುಂಬೈನಲ್ಲಿ ಕೊರೊನಾ ವೈರಸ್​ ನಿಯಂತ್ರಿಸುವ ಸಲುವಾಗಿ ಲಾಕ್​ಡೌನ್​ ಘೋಷಿಸಲಾಯಿತು. ಈ ಸಂದರ್ಭದಲ್ಲಿ ಸಿನಿಮಾ ಶೂಟಿಂಗ್​ಗಳನ್ನೂ ನಿಲ್ಲಿಸಲಾಗಿದೆ. ಹಾಗಾಗಿ ಅನೇಕ ಸೆಲೆಬ್ರಿಟಿಗಳು ಮಾಲ್ಡೀವ್ಸ್​ಗೆ ತೆರಳಿದ್ದಾರೆ. ಇನ್ನೂ ಕೆಲವರು ಅಲ್ಲಿಗೆ ಹೋಗಲು ತಯಾರಿ ನಡೆಸಿದ್ದರು. ಅಷ್ಟರಲ್ಲಾಗಲೇ ಮಾಲ್ಡೀವ್ಸ್​ ಸರ್ಕಾರ ಶಾಕ್​ ನೀಡಿದೆ.

ಭಾರತದಲ್ಲಿ ಕೊರೊನಾ ವೈರಸ್​ ಹಾವಳಿ ಮಿತಿ ಮೀರಿ ಹಬ್ಬುತ್ತಿರುವುದರಿಂದ ಭಾರತದಿಂದ ಪ್ರವಾಸಕ್ಕೆ ಬರುವವರನ್ನು ಮಾಲ್ಡೀವ್ಸ್​ ನಿರ್ಬಂಧಿಸಿದೆ. ಅಲ್ಲಿನ ಹೋಟೆಲ್​, ರೆಸ್ಟೋರೆಂಟ್​ಗಳಲ್ಲಿ ಉಳಿದುಕೊಳ್ಳುವುದನ್ನು ನಿಷೇಧಿಸಲಾಗಿದೆ. ಇದು ಬಾಲಿವುಡ್​ ಮಂದಿಗೆ ಬರೆ ಹಾಕಿದಂತಾಗಿದೆ. ಕೆಲವೇ ದಿನಗಳ ಹಿಂದೆ ಜರ್ಮನಿ, ಇಟಲಿ, ಇರಾನ್​, ಸಿಂಗಾಪುರ್​ ಮುಂತಾದ ದೇಶಗಳು ಭಾರತೀಯರ ಪ್ರವೇಶವನ್ನು ನಿರ್ಬಂಧಿಸಿದ್ದವು. ಈಗಿನದ್ದು ಮಾಲ್ಡೀವ್ಸ್​ ಸರದಿ.

ಜಾನ್ವಿ ಕಪೂರ್​, ದಿಶಾ ಪಠಾಣಿ, ಟೈಗರ್​ ಶ್ರಾಫ್​, ರಣಬೀರ್​ ಕಪೂರ್​, ಆಲಿಯಾ ಭಟ್​ ಮುಂತಾದ ಸೆಲೆಬ್ರಿಟಿಗಳು ಮಾಲ್ಡೀವ್ಸ್​ನಲ್ಲಿ ಎಂಜಾಯ್​ ಮಾಡುತ್ತಿದ್ದರು. ತಮ್ಮ ಫೋಟೋಗಳನ್ನು ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹಾಕಿಕೊಂಡು ಖುಷಿಪಡುತ್ತಿದ್ದರು. ಈಗ ಅಂಥವರಿಗೆಲ್ಲ ಮಾಲ್ಡೀವ್ಸ್​ ಸರ್ಕಾರ ಕಡಿವಾಣ ಹಾಕಿದೆ. ಪರಿಣಾಮವಾಗಿ ಬಾಲಿವುಡ್​ ಸೆಲೆಬ್ರಿಟಿಗಳನ್ನು ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ.

ದೇಶದ ಜನರು ಕಷ್ಟಪಡುತ್ತಿದ್ದಾಗ ಇವರೆಲ್ಲ ಮೋಜು ಮಸ್ತಿ ಮಾಡುತ್ತಿದ್ದರು. ಆದರೆ ಹೀಗೆ ಸರಿಯಾಗಿ ಪಾಠ ಕಲಿಸಿದಂತಾಗಿದೆ ಎಂಬ ಅರ್ಥದಲ್ಲಿ ನೆಟ್ಟಿಗರು ಮೀಮ್ಸ್​ ಮಾಡಿ ಹರಿಬಿಡುತ್ತಿದ್ದಾರೆ. ಅವು ಇಂಟರ್​ನೆಟ್​ನಲ್ಲಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ಸ್ವಲ್ಪ ಆದ್ರೂ ನಾಚಿಕೆ ಇರಲಿ: ಕೊರೊನಾ ಸಮಯದಲ್ಲಿ ಬೀಚ್​ಗೆ ಹೋಗಿ ಬಿಕಿನಿ ಹಾಕುವವರಿಗೆ ಸ್ಟಾರ್​ ನಟನ ಟಾಂಗ್

Published On - 11:33 am, Tue, 27 April 21