
ಭಾರತದಿಂದ ಈ ಬಾರಿ ಆಸ್ಕರ್ಗೆ (Oscar) ಅಧಿಕೃತ ಆಯ್ಕೆಯಾಗಿ ಹಿಂದಿ ಸಿನಿಮಾ ‘ಹೋಮ್ಬೌಂಡ್’ ಅನ್ನು ಕಳಿಸಲಾಗಿದೆ. ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ‘ಹೋಮ್ಬೌಂಡ್’ ಸಿನಿಮಾ ಸ್ಪರ್ಧೆಯಲ್ಲಿದ್ದು, ಈಗಾಗಲೇ ಎರಡು ಹಂತ ದಾಟಿ 15 ಸಿನಿಮಾಗಳ ಪಟ್ಟಿಯಲ್ಲಿ ಶಾರ್ಟ್ ಲಿಸ್ಟ್ ಸಹ ಆಗಿದೆ. ಸಿನಿಮಾ ಆಸ್ಕರ್ ರೇಸಿನಲ್ಲಿ ಒಳ್ಳೆಯ ಪ್ರದರ್ಶನ ಮಾಡುತ್ತಿರುವಾಗಲೇ ಸಿನಿಮಾ ಕಾನೂನು ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ಸಿನಿಮಾದ ವಿರುದ್ಧ ಕೃತಿಚೌರ್ಯ ಆರೋಪವನ್ನು ಲೇಖಕಿಯೊಬ್ಬರು ಮಾಡಿದ್ದಾರೆ.
ಪತ್ರಕರ್ತೆ, ಲೇಖಕಿಯೂ ಆಗಿರುವ ಪೂಜಾ ಚಂಗೋಯ್ವಾಲ ಅವರು ‘ಹೋಮ್ಬೌಂಡ್’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಧರ್ಮಾ ಪ್ರೊಡಕ್ಷನ್ ಮತ್ತು ನೆಟ್ಫ್ಲಿಕ್ಸ್ ವಿರುದ್ಧ ದಾವೆ ಹೂಡಿದ್ದಾರೆ. ತಮ್ಮ ಕತೆಯೊಂದನ್ನು ಕದ್ದು ಸಿನಿಮಾ ಮಾಡಲಾಗಿದೆ ಎಂದು ಪೂಜಾ ಅವರು ಆರೋಪ ಮಾಡಿದ್ದಾರೆ. ತಮಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದ್ದಾರೆ.
ಪೂಜಾ ಅವರು 2021 ರಲ್ಲಿ ‘ಹೋಮ್ಬೌಂಡ್’ ಹೆಸರಿನ ಕತೆಯೊಂದನ್ನು ಬರೆದಿದ್ದರು. ಇದೀಗ ಆಸ್ಕರ್ ರೇಸಿನಲ್ಲಿರುವ ‘ಹೋಮ್ಬೌಂಡ್’ ಸಿನಿಮಾವು ತಮ್ಮದೇ ಬರೆದಿರುವ ಕತೆಯನ್ನು ಒಳಗೊಂಡಿದ್ದು, ಕತೆ ಬಳಸುವುದಕ್ಕೆ ನಿರ್ದೇಶಕ ನೀರಜ್ ಗಯ್ವಾನ್ ಆಗಲಿ ನಿರ್ಮಾಣ ಸಂಸ್ಥೆಯಾದ ಧರ್ಮಾ ಪ್ರೊಡಕ್ಷನ್ಸ್ ಆಗಲಿ ಅನುಮತಿ ಪಡೆದಿಲ್ಲ ಎಂದು ಅವರು ಆರೋಪಿಸಿದ್ದಾರೆ. ನಿರ್ಮಾಣ ಸಂಸ್ಥೆಗೆ ಈಗಾಗಲೇ ನೊಟೀಸ್ ಅನ್ನು ಸಹ ಕಳಿಸಿದ್ದಾರೆ.
ಇದನ್ನೂ ಓದಿ:ಆಸ್ಕರ್ಗೆ ಶಾರ್ಟ್ಲಿಸ್ಟ್ ಆದ ಭಾರತೀಯ ಸಿನಿಮಾ ‘ಹೋಮ್ಬೌಂಡ್’: ಮುಂದೇನು?
‘ನನ್ನ ಕತೆ ಹಾಗೂ ‘ಹೋಮ್ಬೌಂಡ್’ ಸಿನಿಮಾದ ಕತೆ ಎರಡರಲ್ಲೂ ಸಾಕಷ್ಟು ಸಾಮ್ಯತೆ ಇದೆ. ಎರಡೂ ಸಹ ಕೋವಿಡ್ ಪರಿಣಾಮಗಳ ಕುರಿತಾದ ಕತೆಯನ್ನು ಒಳಗೊಂಡಿವೆ. ತಮ್ಮ ಕತೆಯ ಹೆಸರನ್ನೇ ಅನಾಮತ್ತಾಗಿ ಎತ್ತಿಕೊಂಡಿರುವ ಜೊತೆಗೆ, ಸಿನಿಮಾದ ಎರಡನೇ ಭಾಗದಲ್ಲಿ ನನ್ನ ಕತೆಯಲ್ಲಿರುವ ಹಲವು ಸನ್ನಿವೇಶಗಳು, ಪಾತ್ರಗಳು, ಘಟನಾವಳಿಗಳು ಮತ್ತು ಸಂಭಾಷಣೆಗಳನ್ನು ಸಹ ಬಳಸಿಕೊಳ್ಳಲಾಗಿದೆ’ ಎಂದು ಲೇಖಕಿ ಪೂಜಾ ಆರೋಪಿಸಿದ್ದಾರೆ.
ಲೇಖಕಿಯ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಧರ್ಮಾ ಪ್ರೊಡಕ್ಷನ್ಸ್, ‘ಲೇಖಕಿ ಪೂಜಾ ಮಾಡಿರುವ ಆರೋಪಗಳು ಆಧಾರರಹಿತ ಮತ್ತು ಸತ್ಯಕ್ಕೆ ದೂರವಾದವು. ನಮ್ಮ ನಿರ್ಮಾಣದ ‘ಹೋಮ್ಬೌಂಡ್’ ಸಿನಿಮಾ ನ್ಯೂಯಾರ್ಕ್ ಟೈಮ್ಸ್ನಲ್ಲಿ ಬಷರತ್ ಪೀರ್ ಎಂಬುವರು ಬರೆದಿದ್ದ ಆರ್ಟಿಕಲ್ ಒಂದನ್ನು ಆಧರಿಸಿದ್ದು, ಆ ಆರ್ಟಿಕಲ್ನ ಮಾಹಿತಿಯನ್ನು ಸಿನಿಮಾಕ್ಕೆ ಬಳಸಿಕೊಳ್ಳಲು ನಾವು ಅವಶ್ಯಕ ಅನುಮತಿಗಳನ್ನು ಪಡೆದುಕೊಂಡಿದ್ದೇವೆ ಮತ್ತು ಸಿನಿಮಾನಲ್ಲಿ ಮೂಲ ಲೇಖಕರಿಗೆ ನಾವು ಗೌರವ ಸಹ ಸಲ್ಲಿಸಿದ್ದೇವೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ