ಸೂಪರ್ ಹಿಟ್ ಮಲಯಾಳಂ ಸಿನಿಮಾ 2018 ವಿರುದ್ಧ ಚಿತ್ರಮಂದಿರ ಮಾಲೀಕರ ಪ್ರತಿಭಟನೆ

|

Updated on: Jun 06, 2023 | 7:19 PM

Malayalam Movie: ಇತ್ತೀಚೆಗೆ ಬಿಡುಗಡೆ ಆದ ಮಲಯಾಳಂನ ಸೂಪರ್ ಡೂಪರ್ ಹಿಟ್ ಸಿನಿಮಾದ ವಿರುದ್ಧ ಕೇರಳದ ಚಿತ್ರಮಂದಿರ ಮಾಲೀಕರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಸೂಪರ್ ಹಿಟ್ ಮಲಯಾಳಂ ಸಿನಿಮಾ 2018 ವಿರುದ್ಧ ಚಿತ್ರಮಂದಿರ ಮಾಲೀಕರ ಪ್ರತಿಭಟನೆ
2018
Follow us on

ದೇಶದ ಅತ್ಯುತ್ತಮ ಸಿನಿಮಾಗಳು ಬರುತ್ತಿರುವುದು ಮಲಯಾಳಂ ಚಿತ್ರರಂಗದಿಂದ (Malayalam Industry). ಕೋವಿಡ್ ಕಾಲದಲ್ಲಿ ಒಟಿಟಿಯಲ್ಲಿ (OTT) ಕಂಟೆಂಟ್​ವುಳ್ಳ ಸಿನಿಮಾಗಳ ಮೂಲಕ ಕ್ರಾಂತಿಯನ್ನೇ ಮಾಡಿದ ಮಲಯಾಳಂ ಚಿತ್ರರಂಗ (Mollywood) ಕೋವಿಡ್ ಬಳಿಕದ ಪ್ಯಾನ್ ಇಂಡಿಯಾ (Pan India) ವೇಗಕ್ಕೆ ಒಗ್ಗಿಕೊಳ್ಳಲಾಗುತ್ತಿಲ್ಲ. ಮಲಯಾಳಂ ಸಿನಿಮಾಗಳು ಸೋಲಿನ ಮೇಲೆ ಸೋಲು ಕಾಣುತ್ತಿವೆ. ಹಲವು ಚಿತ್ರಮಂದಿರಗಳು ಮುಚ್ಚುವ ಸ್ಥಿತಿ ತಲುಪಿವೆ. ಹಾಗಿದ್ದರೂ ಸಹ ಇತ್ತೀಚೆಗೆ ಸೂಪರ್ ಡೂಪರ್ ಹಿಟ್ ಆದ ಮಲಯಾಳಂ ಸಿನಿಮಾದ ವಿರುದ್ದ ಅಲ್ಲಿನ ಚಿತ್ರಮಂದಿರ ಮಾಲೀಕರು ಪ್ರತಿಭಟನೆ ನಡೆಸುತ್ತಿದ್ದಾರೆ.

2018 ಹೆಸರಿನ ಮಲಯಾಳಂ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಕೇರಳದಲ್ಲಿ ದೊಡ್ಡ ಹವಾ ಸೃಷ್ಟಿಸಿದೆ. ಅತಿ ಹೆಚ್ಚು ಕಲೆಕ್ಷನ್ ಮಾಡಿದ ಮಲಯಾಳಂ ಸಿನಿಮಾ ಎಂಬ ದಾಖಲೆಗೆ ಪಾತ್ರವಾಗಿದೆ. ಈ ಹಿಂದೆ ಅತಿ ಹೆಚ್ಚು ಕಲೆಕ್ಷನ್ ಮಾಡಿದ್ದ ಮಲಯಾಳಂ ಸಿನಿಮಾಗಳ ಎಲ್ಲ ದಾಖಲೆಗಳನ್ನು ಮುರಿದು ಚಿತ್ರಮಂದಿರಗಳಲ್ಲಿ ಮುನ್ನುಗ್ಗುತ್ತಿದೆ. ಆದರೆ ಈ ಸಿನಿಮಾದ ವಿರುದ್ಧ ಸ್ವತಃ ಕೇರಳದ ಚಿತ್ರಮಂದಿರ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸಿದ್ದಾರೆ.

2018 ಸಿನಿಮಾವು ಕೇರಳ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾಕ್ಕೆ ದೊರೆಯುತ್ತಿರುವ ಅಭೂತಪೂರ್ವ ಪ್ರತಿಕ್ರೆಯೆಯನ್ನು ಗಮನಿಸಿ ಸಿನಿಮಾದ ತೆಲುಗು ಅವತರಣಿಕೆಯನ್ನು ಇತ್ತೀಚೆಗಷ್ಟೆ ಬಿಡುಗಡೆ ಮಾಡಲಾಗಿದೆ. ಕೇರಳ ಸೇರಿದಂತೆ ಇನ್ನೂ ಹಲವೆಡೆ ಉತ್ತಮ ಪ್ರದರ್ಶನ ಕಾಣುತ್ತಿರುವ ವೇಳೆಯಲ್ಲಿಯೇ ಈ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದೆ. ಚಿತ್ರಮಂದಿರದಲ್ಲಿ ಸಿನಿಮಾ ಚೆನ್ನಾಗಿ ಓಡುತ್ತಿರುವಾಗಲೇ ಒಟಿಟಿಗೆ ಬಂದರೆ ಚಿತ್ರಮಂದಿರಗಳಲ್ಲಿ ಸಿನಿಮಾಕ್ಕೆ ಬೇಡಿಕೆ ಕಡಿಮೆ ಆಗುತ್ತದೆ ಆದ್ದರಿಂದ ಈಗಾಗಲೇ ನಷ್ಟದಲ್ಲಿರುವ ಕೇರಳ ಚಿತ್ರಮಂದಿರಗಳ ಮಾಲೀಕರು 2018 ಸಿನಿಮಾವನ್ನು ಒಟಿಟಿಗೆ ನೀಡಬಾರದು ಎಂದು ಪ್ರತಿಭಟಿಸುತ್ತಿದ್ದಾರೆ.

2018 ಮಲಯಾಳಂ ಸಿನಿಮಾವು ಮೇ 5 ರಂದು ಬಿಡುಗಡೆ ಆಗಿತ್ತು. ಚಿತ್ರಮಂದಿರದಲ್ಲ ಬಿಡುಗಡೆ ಆದ ಒಂದು ತಿಂಗಳಿನ ಬಳಿಕ ಇದೀಗ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಸೋನಿ ಲಿವ್ ಒಟಿಟಿಯಲ್ಲಿ ಮಲಯಾಳಂ, ತಮಿಳು, ಹಿಂದಿ, ತೆಲುಗು ಹಾಗೂ ಕನ್ನಡ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿರುವುದನ್ನು ಕೇರಳದ ಚಿತ್ರಮಂದಿರ ಮಾಲೀಕರು ವಿರೋಧಿಸಿದ್ದು ಜೂನ್ 7 ಹಾಗೂ 8ರಂದು ಪ್ರತಿಭಟನೆ ನಡೆಸಲಿದ್ದಾರೆ.

ಐದು ವರ್ಷದ ಹಿಂದೆ ಕೇರಳದಲ್ಲಿ ಉಂಟಾಗಿದ್ದ ಪ್ರವಾಹದ ಕುರಿತಾದ ಕತೆಯನ್ನು 2018 ಸಿನಿಮಾ ಒಳಗೊಂಡಿದೆ. 2018 ಸಿನಿಮಾವು ಕೇವಲ 15 ಕೋಟಿ ಬಜೆಟ್​ನಲ್ಲಿ ಸೀಮಿತ ಸಂಪನ್ಮೂಲಗಳಿಂದ ನಿರ್ಮಾಣವಾದ ಸಿನಿಮಾ. ಆದರೆ ಈ ಸಿನಿಮಾ ಇದಾಗಲೇ 200 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿದೆ. ಈ ಹಿಂದೆ ಕೇರಳದ ಅತಿ ಹೆಚ್ಚು ಕಲೆಕ್ಷನ್ ಮಾಡಿದ್ದ ಮೋಹನ್​ಲಾಲ್ ನಟನೆಯ ಪುಲಿಮುರುಗನ್ ಸಿನಿಮಾದ ದಾಖಲೆಯನ್ನು ಪುಡಿ ಮಾಡಿ ಮಲಯಾಳಂನ ಅತಿ ಹೆಚ್ಚು ಗಳಿಕೆಯ ಸಿನಿಮಾ ಎಂಬ ಖ್ಯಾತಿಗೆ 2018 ಪಾತ್ರವಾಗಿದೆ. ಜೂಡ್ ಆಂಟೊನಿ ನಿರ್ದೇಶನ ಮಾಡಿರುವ 2018 ಸಿನಿಮಾದಲ್ಲಿ ಟೊವಿನೊ ಥಾಮಸ್, ಕುಂಚಾಕೊ ಬೋಬನ್, ಲಾಲ್ ಹೀಗೆ ಸುಮಾರು 30ಕ್ಕೂ ಹೆಚ್ಚು ಮಂದಿ ಜನಪ್ರಿಯ ಮಲಯಾಳಂ ನಟರು ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:52 pm, Tue, 6 June 23