ಆಮಿರ್ ಖಾನ್ (Aamir Khan) ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಲು ಸಾಧ್ಯವಾಗಿಲ್ಲ. ಈ ಚಿತ್ರ ಭಾರತದ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ರೂಪಾಯಿ ಕೂಡ ಮುಟ್ಟದೆ ಆಟ ಮುಗಿಸಿದೆ. ಈ ಚಿತ್ರವನ್ನು ತುಂಬಾನೇ ತಡವಾಗಿ ಒಟಿಟಿಯಲ್ಲಿ ತರುವ ಆಲೋಚನೆ ಚಿತ್ರತಂಡಕ್ಕೆ ಇತ್ತು. ಆದರೆ, ವಿಮರ್ಶೆಯಲ್ಲಿ ಚಿತ್ರಕ್ಕೆ ಹೇಳಿಕೊಳ್ಳುವಂತಹ ಮೆಚ್ಚುಗೆ ಸಿಗದ ಕಾರಣ ಸಿನಿಮಾ ಕೆಲವೇ ವಾರಗಳಲ್ಲಿ ಥಿಯೇಟರ್ನಿಂದ ಕಾಲ್ಕಿತ್ತಿತು. ಈಗ ‘ಲಾಲ್ ಸಿಂಗ್ ಚಡ್ಡಾ’ (Laal Singh Chaddha) ಸಿನಿಮಾ ಒಟಿಟಿಯಲ್ಲಿ ಗೆದ್ದಿದೆ. ನೆಟ್ಫ್ಲಿಕ್ಸ್ನಲ್ಲಿ ಪ್ರಸಾರಕಂಡ ಈ ಚಿತ್ರವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.
ಆಗಸ್ಟ್ 11ರಂದು ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಚಿತ್ರಮಂದಿರದಲ್ಲಿ ರಿಲೀಸ್ ಆಯಿತು. ಬೈಕಾಟ್ ಬಿಸಿಯ ಜತೆಗೆ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆಗಳು ಸಿಕ್ಕವು. ಅಕ್ಟೋಬರ್ 5ರಂದು ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಒಟಿಟಿಯಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಈ ಸಿನಿಮಾ ನೆಟ್ಫ್ಲಿಕ್ಸ್ ಪ್ಲಾಟ್ಫಾರ್ಮ್ನಲ್ಲಿ ಒಳ್ಳೆಯ ವಿಮರ್ಶೆ ಪಡೆದುಕೊಳ್ಳುತ್ತಿದೆ. ಟ್ರೆಂಡಿಂಗ್ ವಿಚಾರದಲ್ಲಿ ಭಾರತದಲ್ಲಿ ಮೊದಲ ಸ್ಥಾನ ಹಾಗೂ ವಿಶ್ವ ಮಟ್ಟದಲ್ಲಿ ಸಿನಿಮಾ ಎರಡನೇ ಸ್ಥಾನದಲ್ಲಿದೆ.
‘ಲಾಲ್ ಸಿಂಗ್ ಚಡ್ಡಾ’ ಚಿತ್ರ ಬರೋಬ್ಬರಿ 66 ಲಕ್ಷ ಗಂಟೆ ವೀಕ್ಷಣೆ ಕಂಡಿದೆ. ವಿದೇಶಗಳಲ್ಲೂ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ವಾರ ನೆಟ್ಫ್ಲಿಕ್ಸ್ನಲ್ಲಿ13 ರಾಷ್ಟ್ರಗಳಲ್ಲಿ ಈ ಚಿತ್ರ ಟಾಪ್ 10 ಸ್ಥಾನದಲ್ಲಿದೆ. ಆಮಿರ್ ಖಾನ್ ಚಿತ್ರಕ್ಕೆ ಒಟಿಟಿಯಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿರುವ ವಿಚಾರವನ್ನು ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
‘ಅಟ್ಯಾಕ್’ ಸೇರಿದಂತೆ ಅನೇಕ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಸೋತವು. ಆದರೆ, ಈ ಚಿತ್ರಗಳು ಒಟಿಟಿಯಲ್ಲಿ ಗೆದ್ದವು. ಈ ಸಾಲಿಗೆ ಈಗ ಆಮಿರ್ ಖಾನ್ ಸಿನಿಮಾ ಕೂಡ ಸೇರ್ಪಡೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಅವರ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಗೆಲ್ಲಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.
ಇದನ್ನೂ ಓದಿ: ‘ಲಾಲ್ ಸಿಂಗ್ ಚಡ್ಡಾ’ದಿಂದ ಆಮಿರ್ ಖಾನ್ಗೆ 100 ಕೋಟಿ ರೂಪಾಯಿ ನಷ್ಟ? ಸೋಲಿನ ಹೊಣೆ ಹೊತ್ತ ನಟ
ಆಸ್ಕರ್ ವಿನ್ನಿಂಗ್ ಸಿನಿಮಾ ‘ಫಾರೆಸ್ಟ್ ಗಂಪ್’ನ ಹಿಂದಿ ರಿಮೇಕ್ ‘ಲಾಲ್ ಸಿಂಗ್ ಚಡ್ಡಾ’. ತುಂಬಾನೇ ಕಷ್ಟಪಟ್ಟು ಈ ಚಿತ್ರದ ರಿಮೇಕ್ ರೈಟ್ಸ್ ಅನ್ನು ಆಮಿರ್ ಖಾನ್ ತಂದಿದ್ದರು. ಈ ಚಿತ್ರಕ್ಕಾಗಿ ನಾಲ್ಕೈದು ವರ್ಷ ಅವರು ಮುಡಿಪಿಟ್ಟಿದ್ದರು. ಎಲ್ಲವೂ ವ್ಯರ್ಥವಾದಂತೆ ಆಯ್ತು ಎಂದು ಬಹುತೇಕರು ಭಾವಿಸಿದ್ದರು. ಆದರೆ, ಒಟಿಟಿಯಲ್ಲಿ ಸಿನಿಮಾ ನೋಡಿ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿರುವುದು ಚಿತ್ರತಂಡದ ಖುಷಿ ಹೆಚ್ಚಿಸಿದೆ.
Published On - 8:47 pm, Thu, 13 October 22