ವಿಶ್ವದ ಅತ್ಯಂತ ಮೌಲ್ಯಯುತ ಸಂಸ್ಥೆಗಳಲ್ಲಿ ಒಂದು ಅಮೆಜಾನ್ (Amazon). ಪುಸ್ತಕ ಮಳಿಗೆಯಾಗಿ ಪ್ರಾರಂಭವಾದ ಅಮೆಜಾನ್ ಇಂದು ವಿಶ್ವದ ನಂಬರ್ 1 ಆನ್ಲೈನ್ ಮಳಿಗೆ. ಜೊತೆಗೆ ಇನ್ನೂ ಹಲವು ಉದ್ದಿಮೆಗಳಲ್ಲಿ ಅಮೆಜಾನ್ ತನ್ನನ್ನು ತೊಡಗಿಸಿಕೊಂಡಿದೆ. ಅದರಲ್ಲಿ ಪ್ರಮುಖವಾದುದು ಅಮೆಜಾನ್ನ ವಿಡಿಯೋ ಸ್ಟ್ರೀಮಿಂಗ್ ವೇದಿಕೆ. ಅಮೆಜಾನ್ ಪ್ರೈಮ್ ವಿಡಿಯೋ ಸಹ ಅಮೆಜಾನ್ ಶಾಪಿಂಗ್ ಸೈಟ್ನಂತೆಯೇ ವಿಶ್ವದ ಹಲವು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಬಹುತೇಕ ಇಂಟರ್ನೆಂಟ್ ಆಧರಿತ ಬ್ಯುಸಿನೆಸ್ ಅನ್ನೇ ಹೊಂದಿರುವ ಅಮೆಜಾನ್ ಇದೀಗ ತನ್ನ ಗ್ರಾಹಕರಿಗೆ ಉಚಿತವಾಗಿ ಇಂಟರ್ನೆಂಟ್ ಸೌಲಭ್ಯ (Internet) ಒದಗಿಸಲು ಮುಂದಾಗಿದೆ.
ಅಮೆರಿಕದಲ್ಲಿ ಮೊದಲಿಗೆ ಈ ಉಚಿತ ಅಥವಾ ಅತ್ಯಂತ ಕಡಿಮೆ ಬೆಲೆಗೆ ಇಂಟರ್ನೆಟ್ ಅನ್ನು ಒದಗಿಸಲು ಅಮೆಜಾನ್ ಮುಂದಾಗಿದೆ. ಅಮೆರಿಕದ ಜನಪ್ರಿಯ ಮೊಬೈಲ್ ನೆಟ್ವರ್ಕ್ ಸೇವಾ ಸಂಸ್ಥೆಯಾಗಿರುವ ವೆರಿಜಾನ್ ಕಮ್ಯೂನಿಕೇಶನ್ ಜೊತೆಗೆ ಈ ಬಗ್ಗೆ ಅಮೆಜಾನ್ ಮಾತುಕತೆ ನಡೆಸುತ್ತಿದೆ. ದೇಶದಲ್ಲಿರುವ ಎಲ್ಲ ಮೊಬೈಲ್ ಬಳಕೆದಾರರಿಗೂ ಅತ್ಯಂತ ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ಇಂಟರ್ನೆಟ್ ಒದಗಿಸುವ ಬಗ್ಗೆ ಈ ಚರ್ಚೆ ನಡೆಯುತ್ತಿದೆ.
ಅಮೆರಿಕದ ಮೊಬೈಲ್ ಬಳಕೆದಾರರಿಗೆ ಕೇವಲ 10 ಡಾಲರ್ ಪ್ರತಿತಿಂಗಳ ಬೆಲೆಗೆ ಅಥವಾ ಸಂಪೂರ್ಣ ಉಚಿತವಾಗಿ ಮೊಬೈಲ್ ನೆಟ್ವರ್ಕ್ ಸೇವೆಗಳನ್ನು ಒದಗಿಸುವುದು ಅಮೆಜಾನ್ ಗುರಿಯಾಗಿದೆ. ಪ್ರಸ್ತುತ ಅಮೆರಿಕದಲ್ಲಿ ಮೊಬೈಲ್ ನೆಟ್ವರ್ಕ್ ಸೇವೆಗಳ ಶುಲ್ಕ ತಿಂಗಳಿಗೆ 50 ಡಾಲರ್ನಿಂದ ಪ್ರಾರಂಭವಾಗುತ್ತವೆ, 100 ಡಾಲರ್ ವರೆಗೆ ಹೋಗುತ್ತವೆ. ಅಮೆಜಾನ್ ಈಗ ಮಾತುಕತೆ ನಡೆಸುತ್ತಿರುವ ವೆರಿಜಾನ್ ಕಮ್ಯೂನಿಕೇಶನ್ ಬಳಕೆದಾರರು ತಿಂಗಳಿಗೆ 70 ಡಾಲರ್ ವ್ಯಯಿಸಿ ನೆಟ್ವರ್ಕ್ ಸೇವೆಗಳನ್ನು ಪಡೆಯುತ್ತಿದ್ದಾರೆ.
ಅಮೆಜಾನ್ಗೆ ಭಾರತದಲ್ಲಿಯೂ ದೊಡ್ಡ ಸಂಖ್ಯೆಯ ಗ್ರಾಹಕರಿದ್ದಾರೆ. ಒಂದೊಮ್ಮೆ ಅಮೆರಿಕದಲ್ಲಿ ಅಮೆಜಾನ್ನ ಉಚಿತ ನೆಟ್ವರ್ಕ್ ಸೇವೆ ಸಫಲವಾದರೆ ಭಾರತದಲ್ಲಿಯೂ ಅದನ್ನು ಪ್ರಯೋಗಿಸುವುದು ಪಕ್ಕಾ. ಒಂದೊಮ್ಮೆ ಉಚಿತವಾಗಿ ಮೊಬೈಲ್ ಸೇವೆಗಳನ್ನು ಅಮೆಜಾನ್ ನೀಡಿದ್ದೇ ಆದಲ್ಲಿ, ಅದರ ಲಾಭವೂ ಅಮೆಜಾನ್ ಶಾಪಿಂಗ್ ಕಾರ್ಟ್ ಹಾಗೂ ಅಮೆಜಾನ್ ಪ್ರೈಂ ವಿಡಿಯೋಗೆ ಆಗಲಿದೆ. ಆದರೆ ಮೊಬೈಲ್ ಡಾಟಾ ಉಚಿತವಾಗಿ ಕೊಟ್ಟು ಅಮೆಜಾನ್ನಲ್ಲಿ ಸಿನಿಮಾ ನೋಡಲು ಹೆಚ್ಚಿನ ಮೊತ್ತವನ್ನು ವಸೂಲಿ ಮಾಡುವ ಸಾಧ್ಯತೆ ಇದೆ.
ಈಗಾಗಲೇ ಅಮೆಜಾನ್ನಲ್ಲಿ ಕೆಲವು ಸಿನಿಮಾಗಳನ್ನು ಹೆಚ್ಚುವರಿ ಹಣ ಕೊಟ್ಟು ನೋಡಬೇಕಿದೆ. ಹೆಚ್ಚುವರಿ ಹಣ ಕೊಡದೇ ಸಿನಿಮಾ ನೋಡಬೇಕೆಂದರೆ ಅದಕ್ಕೆ ಹೆಚ್ಚುವರಿ ಹಣವನ್ನು ನೀಡಬೇಕಾಗುತ್ತದೆ. ಅದರ ಜೊತೆಗೆ ಅಮೆಜಾನ್ ಪ್ರೈಂನ ವಾರ್ಷಿಕ ಚಂದಾದಾರಿಕೆ ಪಡೆಯಲು ಭಾರತದಲ್ಲಿ 1500 ರುಪಾಯಿ ಕೊಡಬೇಕಿದೆ. ಇನ್ನು ಮುಂದೆ ಈ ವೆಚ್ಚ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ