ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ಮೊದಲ ವಾರದ ಪಂಚಾಯಿತಿ ನಡೆಸಿಕೊಟ್ಟಿದ್ದಾರೆ. ಈ ವೇಳೆ ಹಲವು ವಿಚಾರಗಳು ಚರ್ಚೆ ಆಗಿವೆ. ಸಾಕಷ್ಟು ತಮಾಷೆಯ ಪ್ರಸಂಗಗಳಿಗೆ ಈ ಎಪಿಸೋಡ್ ಸಾಕ್ಷಿ ಆಗಿದೆ. ಈ ರಿಯಾಲಿಟಿ ಶೋನಲ್ಲಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಹೆಚ್ಚು ಫೇಮಸ್ ಆಗುತ್ತಿದ್ದಾರೆ. ತುಂಬ ಓಪನ್ ಆಗಿ ಮಾತನಾಡುವ ಕಾರಣದಿಂದ ಅವರು ಗಮನ ಸೆಳೆಯುತ್ತಿದ್ದಾರೆ. ಅನೇಕ ವಿಷಯಗಳನ್ನು ಅವರು ಮುಚ್ಚುಮರೆ ಇಲ್ಲದೇ ಹಂಚಿಕೊಂಡಿದ್ದಾರೆ. ಆ ಮೂಲಕ ‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) ಶೋನಲ್ಲಿ ಸೋನು ಗೌಡ ಅವರು ಚರ್ಚೆಗೆ ಒಳಗಾಗುತ್ತಿದ್ದಾರೆ. ಅಚ್ಚರಿ ಎಂದರೆ, ‘ಮೂಡ್ ಇಲ್ಲದಿದ್ದರೆ ನಾನು ಮೂರು ದಿನ ಸ್ನಾನ ಮಾಡಲ್ಲ’ ಎಂದು ಅವರು ಹೇಳಿಕೊಂಡಿದ್ದಾರೆ. ಈ ವಿಷಯ ಕೇಳಿ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ.
‘ಬಿಗ್ ಬಾಸ್ ಕನ್ನಡ ಒಟಿಟಿ’ ಕಾರ್ಯಕ್ರಮದಲ್ಲಿ ಒಂದು ವಾರ ಕಳೆದಿದೆ. ವಾರದ ಪಂಚಾಯಿತಿಯಲ್ಲಿ ಸ್ಪರ್ಧಿಗಳಿಗೆ ಸುದೀಪ್ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ‘ಈ ಮನೆಯಲ್ಲಿ ತಮ್ಮ ವಸ್ತುಗಳನ್ನು ಹೆಚ್ಚು ಗಲೀಜು ಮಾಡಿ ಇಟ್ಟುಕೊಳ್ಳುವವರು ಯಾರು’ ಎಂದು ಕೇಳಿದ್ದಕ್ಕೆ ಹಲವರ ಹೆಸರು ಹೊರಬಂದವು. ಇದೇ ವೇಳೆ ಸ್ನಾನದ ಬಗ್ಗೆಯೂ ಪ್ರಸ್ತಾಪ ಆಯ್ತು.
‘ಸೋನು ಗೌಡ ಸ್ನಾನ ಮಾಡುವುದಿಲ್ಲ’ ಎಂದು ಸಾನ್ಯಾ ಅಯ್ಯರ್ ಆರೋಪಿಸಿದರು. ‘ಹೌದು, ನಾನು ಇವತ್ತು ಸ್ನಾನ ಮಾಡಿಲ್ಲ’ ಎಂದು ಸುದೀಪ್ ಎದುರು ಸೋನು ಗೌಡ ಒಪ್ಪಿಕೊಂಡರು. ‘ಇಲ್ಲಿ ಎಷ್ಟೋ ಜನರು ಸ್ನಾನದ ವಿಚಾರದಲ್ಲಿ ಡ್ರಾಮಾ ಮಾಡುತ್ತಾರೆ. ಎಲ್ಲರೂ ಪ್ರತಿ ದಿನ ಸ್ನಾನ ಮಾಡ್ತಾರೆ. ನಮ್ಮ ಮನೆಯಲ್ಲಿ ಒಮ್ಮೊಮ್ಮೆ ಮೂಡ್ ಇಲ್ಲ ಅಂದರೆ ಮೂರು ದಿನಕ್ಕೊಮ್ಮೆ ಸ್ನಾನ ಮಾಡ್ತೀನಿ’ ಎಂದು ಸೋನು ಹೇಳಿದ್ದಾರೆ. ಅವರ ಮಾತು ಕೇಳಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ.
ಸೋನು ಶ್ರೀನಿವಾಸ್ ಗೌಡ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಟ್ರೋಲ್ ಮಾಡಲಾಗುತ್ತಿದೆ. ಅವರಿಗೆ ಈ ವೇದಿಕೆಯಲ್ಲಿ ಅವಕಾಶ ಸಿಕ್ಕಿದ್ದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲ ವಾರವೇ ಅವರು ಎಲಿಮಿನೇಟ್ ಆಗಬಹುದು ಎಂದು ಕೆಲವರು ಊಹಿಸಿದ್ದರು. ಆದರೆ ವೀಕ್ಷಕರಿಂದ ಚೆನ್ನಾಗಿ ವೋಟ್ ಪಡೆದ ಕಾರಣ ಅವರು ಮೊದಲ ವಾರ ಸೇಫ್ ಆಗಿದ್ದಾರೆ. ಈಗ ಸ್ನಾನದ ವಿಚಾರಕ್ಕೆ ಟ್ರೋಲ್ ಆಗುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:21 am, Mon, 15 August 22