Bigg Boss Kannada OTT Season 1: ಹೊಸ ವಿನ್ಯಾಸದೊಂದಿಗೆ ಈ ಬಾರಿಯ ‘ಬಿಗ್ ಬಾಸ್’ ಒಟಿಟಿಯಲ್ಲಿ (Bigg Boss) ಪ್ರಸಾರ ಕಾಣುತ್ತಿದೆ. ಈ ಕಾರಣಕ್ಕೆ ಶೋಗೆ ‘ಬಿಗ್ ಬಾಸ್ ಒಟಿಟಿ’ ಎಂದೇ ಹೆಸರು ಇಡಲಾಗಿದೆ. ಪ್ರತಿ ವರ್ಷ ‘ಬಿಗ್ ಬಾಸ್’ ಟಿವಿಯಲ್ಲಿ ಪ್ರಸಾರ ಕಾಣುತ್ತಿತ್ತು. ಆದರೆ, ಈ ಬಾರಿ ಆ ಆಯ್ಕೆ ಇಲ್ಲ. ಪ್ರತಿ ವರ್ಷದಂತೆ ಸುದೀಪ್ ಅವರು ‘ಬಿಗ್ ಬಾಸ್’ ನಡೆಸಿಕೊಡಲಿದ್ದಾರೆ. ಈ ಬಾರಿ ಏನೆಲ್ಲ ವಿಶೇಷತೆ ಇರಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ವೀಕ್ಷಿಸೋದು ಎಲ್ಲಿ?
ಈ ಬಾರಿ ‘ಬಿಗ್ ಬಾಸ್’ ಅನ್ನು ಒಟಿಟಿಯಲ್ಲಿ ಮಾತ್ರ ವೀಕ್ಷಿಸಬಹುದು. ವೂಟ್ ಆ್ಯಪ್ನ ಚಂದಾದಾರರಾದರೆ ಮಾತ್ರ ‘ಬಿಗ್ ಬಾಸ್ ಒಟಿಟಿ’ ವೀಕ್ಷಣೆ ಸಾಧ್ಯ. ಇಲ್ಲವಾದರೆ, ನೀವು ‘ಬಿಗ್ ಬಾಸ್’ ನೋಡಲು ಆಗುವುದಿಲ್ಲ. ದಿನದ 24 ಗಂಟೆ ವೂಟ್ ಆ್ಯಪ್ನಲ್ಲಿ ಲೈವ್ ವೀಕ್ಷಿಸಬಹುದು. ಇದರ ಜತೆಗೆ ನಿತ್ಯ ಏನೆಲ್ಲ ಆಯಿತು ಎಂಬುದನ್ನು ಒಂದು ಅಥವಾ ಒಂದೂವರೆ ಗಂಟೆ ಸಂಚಿಕೆ ಮೂಲಕ ಪ್ರೇಕ್ಷಕರ ಎದುರು ಇಡಲಾಗುತ್ತದೆ. ಈ ಸಂಚಿಕೆ ಪ್ರಸಾರದ ಸಮಯ ಇನ್ನಷ್ಟೇ ನಿಗದಿ ಆಗಬೇಕಿದೆ. ಶನಿವಾರ (ಆಗಸ್ಟ್ 6) ಮೊದಲ ಸಂಚಿಕೆ 7 ಗಂಟೆಯಿಂದ ಪ್ರಸಾರ ಕಾಣಲಿದೆ.
ಟಿವಿಯಲ್ಲಿ ಯಾವಾಗ
‘ಬಿಗ್ ಬಾಸ್ ಒಟಿಟಿ’ ಟಿವಿಯಲ್ಲಿ ಪ್ರಸಾರವಾಗುವುದಿಲ್ಲ. ಆದರೆ, ಈ ಸೀಸನ್ ಮುಗಿದ ಬಳಿಕ ಟಿವಿಯಲ್ಲಿ ಬಿಗ್ ಬಾಸ್ ಪ್ರಸಾರ ಆರಂಭಿಸಲಿದೆ. ‘ಬಿಗ್ ಬಾಸ್’ ಟಿವಿಯಲ್ಲಿ ಪ್ರಸಾರವಾಗುವುದಿಲ್ಲ ಎಂಬ ಬಗ್ಗೆ ಅನೇಕರಿಗೆ ಬೇಸರವಿದೆ. ಅಂಥವರು ಒಂದೂವರೆ ತಿಂಗಳು ಕಾಯಲೇಬೇಕು. ಈ ಸೀಸನ್ ಮುಗಿದ ಬಳಿಕ ‘ಬಿಗ್ ಬಾಸ್ ಕನ್ನಡ ಸೀಸನ್ 9’ ಆರಂಭ ಆಗಲಿದೆ.
ವಾರಾಂತ್ಯಕ್ಕೆ ಸುದೀಪ್
ಟಿವಿಯಲ್ಲಿ ಪ್ರಸಾರ ಆಗುವಾಗ ‘ಬಿಗ್ ಬಾಸ್’ ಹೇಗಿತ್ತೋ ವೂಟ್ನಲ್ಲೂ ಬಹುತೇಕ ಅದೇ ರೀತಿ ಇರಲಿದೆ. ವಾರಾಂತ್ಯದಲ್ಲಿ ಸುದೀಪ್ ಅವರು ಆಗಮಿಸಿ ‘ಬಿಗ್ ಬಾಸ್’ನಲ್ಲಿ ಪಂಚಾಯ್ತಿ ಮಾಡಲಿದ್ದಾರೆ. ಈ ಬಾರಿಯ ಎಪಿಸೋಡ್ನಲ್ಲೂ ಸುದೀಪ್ ಖಡಕ್ ನಿರೂಪಣೆ ಗಮನ ಸೆಳೆಯಲಿದೆ.
ಬಿಗ್ ಬಾಸ್ ಮನೆಯಲ್ಲಿ ಬದಲಾವಣೆ
‘ಬಿಗ್ ಬಾಸ್’ ಮನೆಯಲ್ಲಿ ಈ ಬಾರಿ ಕೆಲ ಬದಲಾವಣೆ ಮಾಡಿಕೊಳ್ಳಲಾಗಿದೆ. ‘ಬಿಗ್ ಬಾಸ್’ ವಿನ್ಯಾಸವನ್ನು ಬದಲಾಯಿಸಿರುವ ಫೋಟೋವನ್ನು ಕಲರ್ಸ್ ಕನ್ನಡ ವಾಹಿನಿಯ ಬಿಸ್ನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.
Published On - 5:59 pm, Fri, 5 August 22