
ಚಿತ್ರಮಂದಿರಗಳಲ್ಲಿ ರಿಲೀಸ್ ಆಗುವ ಸಿನಿಮಾಗಳಿಗೆ ಯಾವ ರೀತಿಯಲ್ಲಿ ಸೆನ್ಸಾರ್ ಮಾಡಲಾಗುತ್ತದೆಯೋ ಅದೇ ರೀತಿ ಒಟಿಟಿಯಲ್ಲಿ ಪ್ರಸಾರವಾಗುವ ಸಿನಿಮಾ ಹಾಗೂ ವೆಬ್ ಸರಣಿಗಳಿಗೆ ಸೆನ್ಸಾರ್ ಆಗಬೇಕು ಎಂದು ಒಂದು ವರ್ಗದ ಜನರು ಧ್ವನಿ ಎತ್ತಿದ್ದಾರೆ. ಆದರೆ, ಇದು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ನೆಟ್ಫ್ಲಿಕ್ಸ್, ಅಮೇಜಾನ್ ಪ್ರೈಮ್ ವಿಡಿಯೋ, ಹಾಟ್ಸ್ಟಾರ್ ಸೇರಿದಂತೆ ಇತರ ಒಟಿಟಿ ಪ್ಲಾಟ್ಫಾರ್ಮ್ನಲ್ಲಿರುವ ಕಂಟೆಂಟ್ಗಳಿಗೆ ಸೆನ್ಸಾರ್ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಮಕ್ಕಳು ತಮ್ಮ ಬಳಿ ಮೊಬೈಲ್ ಇಲ್ಲದಿದ್ದರೂ ಒಟಿಟಿ ಪ್ಲಾಟ್ಫಾರ್ಮ್ಗಳನ್ನು ಸುಲಭದಲ್ಲಿ ವೀಕ್ಷಿಸಬಹುದಾಗಿದೆ. ತಂದೆ-ತಾಯಿ ಮೊಬೈಲ್ ಪಡೆದೋ ಅಥವಾ ಟಿವಿಯಲ್ಲಿ ಒಟಿಟಿ ಸಿನಿಮಾ ವೀಕ್ಷಿಸಬಹುದು. ಇಂಥ ಸಂದರ್ಭದಲ್ಲಿ ಸೆನ್ಸಾರ್ ರಹಿತ ಸಿನಿಮಾಗಳು, ವೆಬ್ ಸೀರಿಸ್ಗಳನ್ನು ಅವರು ವೀಕ್ಷಿಸಿದರೆ ಅವರ ಮೇಲೆ ಅದು ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ, ಸೆನ್ಸಾರ್ ಆಗಬೇಕು ಎಂದು ಅನೇಕರು ಆಗ್ರಹಿಸಿದ್ದರು. ಇದಕ್ಕೆ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಉತ್ತರಿಸಿದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಹಾಯಕ ಸಚಿವ ಎಲ್. ಮುರುಗನ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ‘2021ರ ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ಒಟಿಟಿ ಪ್ಲಾಟ್ಫಾರ್ಮ್ಗಳನ್ನು ನಿಯಂತ್ರಿಸಲಾಗುತ್ತಿದೆ. ವಯಸ್ಸನ್ನು ಆಧರಿಸಿ ಒಟಿಟಿ ಪ್ಲಾಟ್ಫಾರ್ಮ್ಗಗಳು ವಿಷಯಗಳನ್ನು ವರ್ಗೀಕರಿಸುತ್ತಿವೆ’ ಎಂದು ಮಾಹಿತಿ ನೀಡಿದರು. ಈಗಾಗಲೇ ಕೇಂದ್ರ ಸರ್ಕಾರವು ಅಶ್ಲೀಲ ವಿಷಯಗಳನ್ನು ಹರಡುತ್ತಿದ್ದ 43 ಒಟಿಟಿ ಪ್ಲಾಟ್ಫಾರ್ಮ್ಗಳನ್ನು ನಿಷೇಧಿಸಿದ ಬಗ್ಗೆಯೂ ಮಾಹಿತಿ ನೀಡಿದೆ.
ಒಟಿಟಿ ಸಿನಿಮಾ-ಸೀರಿಸ್ಗಳಿಗೆ ಸೆನ್ಸಾರ್ ಪ್ರಕ್ರಿಯೆ ಶುರುವಾದರೆ ಎಲ್ಲಾ ಸಿನಿಮಾ ಹಾಗೂ ಸೀರಿಸ್ಗಳನ್ನು ನೋಡುವ ಅವಕಾಶ ವೀಕ್ಷಕರಿಗೆ ಸಿಗುತ್ತಿರಲಿಲ್ಲ. ಕೆಲವು ಶಬ್ದಗಳಿಗೆ, ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕುವಂತೆ ಸೂಚಿಸೋ ಸಾಧ್ಯತೆ ಇತ್ತು. ಆದರೆ, ಕೇಂದ್ರದ ನಿರ್ಧಾರ ಒಟಿಟಿ ಪ್ರಿಯರಿಗೆ ಖುಷಿ ನೀಡಿದೆ.
ಇದನ್ನೂ ಓದಿ: ಈ ವಾರ ಒಟಿಟಿಗೆ ಬರುತ್ತಿವೆ ಭರ್ಜರಿ ಸಿನಿಮಾಗಳು: ಪಟ್ಟಿ ಇಲ್ಲಿದೆ
ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲತೆ ನಿಯಂತ್ರಿಸಲು ಪ್ರಮುಖ ನಿರ್ಧಾರಕ್ಕೆ ಬರಲಾಗಿದೆ. ಇದಕ್ಕಾಗಿ ಕೇಂದ್ರವು ಮಾನದಂಡ ಪಟ್ಟಿ ಮಾಡಿದೆ. 50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ಸಂಸ್ಥೆಗಳು ಸ್ಥಳೀಯ ಅಧಿಕಾರಿಗಳನ್ನು ನೇಮಿಸಬೇಕಿದೆ. ಅವರು ದೂರು ಬಂದ 72 ಗಂಟೆಗಳ ಒಳಗೆ ಕಾನೂನುಬಾಹಿರ ವಿಷಯವನ್ನು ತೆಗೆದುಹಾಕುವ ಮೂಲಕ ಸಮಸ್ಯೆಗೆ ಪರಿಹಾರ ನೀಡುವ ಅಗತ್ಯವಿದೆ ಎಂದು ಕೇಂದ್ರ ತಿಳಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.