ಬಾಲಿವುಡ್ನ ಸ್ಟಾರ್ ನಟ ಜಾನ್ ಅಬ್ರಾಹಂ (John Abraham) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ ಎಂಬುದು ನಿಜ. ಆದರೆ ಇತ್ತೀಚಿನ ದಿನಗಳಲ್ಲಿ ಅವರು ನಿರೀಕ್ಷಿತ ಮಟ್ಟದ ಗೆಲುವು ಕಂಡಿಲ್ಲ. ಜಾನ್ ಅಬ್ರಾಹಂ ನಟಿಸಿದ ‘ಅಟ್ಯಾಕ್’ ಸಿನಿಮಾ 2022ರ ಏಪ್ರಿಲ್ 1ರಂದು ತೆರೆಕಂಡಿತು. ಆದರೆ ಆ ಚಿತ್ರ ಹೀನಾಯವಾಗಿ ಸೋಲುಂಡಿತು. ಆ ಚಿತ್ರದ ಪ್ರಚಾರದ ವೇಳೆ ‘ನಾನು ಬಾಲಿವುಡ್ ಹೀರೋ. ಪ್ರಾದೇಶಿಕ ಭಾಷೆಯ ಸಿನಿಮಾ ಮಾಡಲ್ಲ’ ಎಂದು ಹೇಳುವ ಮೂಲಕ ಜಾನ್ ಅಬ್ರಾಹಂ ಅವರು ಅನೇಕರ ಟೀಕೆಗೆ ಒಳಗಾಗಿದ್ದರು. ಈಗ ಮತ್ತೆ ಅದೇ ಚಾಳಿ ಮುಂದುವರಿಸಿದ್ದಾರೆ. ಒಟಿಟಿ (OTT) ಬಗ್ಗೆ ಅವರು ಹಗುರವಾಗಿ ಮಾತನಾಡಿದ್ದಾರೆ. ‘ಒಟಿಟಿಯಲ್ಲಿ 299 ಅಥವಾ 499 ರೂಪಾಯಿಗೆ ನಾನು ಸಿಗಲ್ಲ’ ಎಂದು ಹೇಳುವ ಮೂಲಕ ಚರ್ಚೆ ಹುಟ್ಟುಹಾಕಿದ್ದಾರೆ. ಜಾನ್ ಅಬ್ರಾಹಂ ನಟಿಸಿರುವ ‘ಏಕ್ ವಿಲನ್ ರಿಟರ್ನ್ಸ್’ (Ek Villain Returns) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಪ್ರಚಾರದ ವೇಳೆ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ.
‘ಏಕ್ ವಿಲನ್ ರಿಟರ್ನ್ಸ್’ ಸಿನಿಮಾದಲ್ಲಿ ಜಾನ್ ಅಬ್ರಾಹಂ ಜೊತೆ ತಾರಾ ಸುತಾರಿಯಾ, ದಿಶಾ ಪಟಾನಿ, ಅರ್ಜುನ್ ಕಪೂರ್ ನಟಿಸಿದ್ದಾರೆ. ಜುಲೈ 29ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಅದರ ಸಲುವಾಗಿ ಅನೇಕ ಕಡೆಗಳಲ್ಲಿ ಜಾನ್ ಅಬ್ರಾಹಂ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಒಟಿಟಿ ಕುರಿತು ಎದುರಾದ ಪ್ರಶ್ನೆಗೆ ಅವರು ಈ ರೀತಿ ಉತ್ತರ ನೀಡಿದ್ದಾರೆ.
‘ನಾನು ಬಿಗ್ ಸ್ಕ್ರೀನ್ ಹೀರೋ. ಅಲ್ಲಿಯೇ ನಾನು ಕಾಣಿಸಿಕೊಳ್ಳಲು ಬಯಸುತ್ತೇನೆ. ಈ ಸಂದರ್ಭದಲ್ಲಿ ನಾನು ದೊಡ್ಡ ಪರದೆಗಾಗಿಯೇ ಸಿನಿಮಾಗಳನ್ನು ಮಾಡುತ್ತೇನೆ. ಟ್ಯಾಬ್ಲೆಟ್ನಲ್ಲಿ ಯಾರಾದರೂ ನನ್ನ ಸಿನಿಮಾ ನೋಡುತ್ತಾ ಅರ್ಧಕ್ಕೆ ನಿಲ್ಲಿಸಿ ವಾಶ್ರೂಮ್ಗೆ ಹೋದರೆ ನನಗೆ ಅವಮಾನ ಆದಂತೆ ಅನಿಸುತ್ತದೆ. 299 ಅಥವಾ 499 ರೂಪಾಯಿಗೆ ಒಟಿಟಿಯಲ್ಲಿ ಲಭ್ಯವಾಗಲು ನನಗೆ ಇಷ್ಟವಿಲ್ಲ. ಅದರಲ್ಲಿ ನನಗೆ ಸಮಸ್ಯೆ ಇದೆ’ ಎಂದು ಜಾನ್ ಅಬ್ರಾಹಂ ಹೇಳಿದ್ದಾರೆ.
ಇದನ್ನೂ ಓದಿ: ‘777 ಚಾರ್ಲಿ’ ಡೈರೆಕ್ಟರ್ಗೆ ಬಂತು ಬಾಲಿವುಡ್ ಸ್ಟಾರ್ ನಟ ಜಾನ್ ಅಬ್ರಾಹಂ ಕಾಲ್; ಎಲ್ಲಾ ಚಾರ್ಲಿ ಮಹಿಮೆ
ನಟನೆ ಮಾತ್ರವಲ್ಲದೇ ನಿರ್ಮಾಣದಲ್ಲಿಯೂ ಜಾನ್ ಅಬ್ರಾಹಂ ತೊಡಗಿಕೊಂಡಿದ್ದಾರೆ. ನಿರ್ಮಾಪಕನಾಗಿ ಅವರು ಒಟಿಟಿಗೆ ಸಿನಿಮಾ ಮಾಡುತ್ತಾರಂತೆ. ಆದರೆ ನಟನಾಗಿ ತಮಗೆ ಒಟಿಟಿ ಇಷ್ಟವಿಲ್ಲ ಎಂದು ಅವರು ಹೇಳಿದ್ದಾರೆ. ಇಷ್ಟೆಲ್ಲ ಮಾತನಾಡಿರುವ ಅವರ ‘ಏಕ್ ವಿಲನ್ ರಿಟರ್ನ್ಸ್’ ಸಿನಿಮಾ ಚಿತ್ರಮಂದಿರದಲ್ಲಿ ಗೆಲ್ಲುತ್ತೋ ಇಲ್ಲವೋ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:16 am, Thu, 23 June 22