ಹಾಲಿವುಡ್ನಲ್ಲಿ ಯೂನಿವರ್ಸ್ ಕಾನ್ಸೆಪ್ಟ್ ಬಳಕೆ ಹೆಚ್ಚಿದೆ. ಯೂನಿವರ್ಸ್ ಎಂದರೆ ಒಂದಷ್ಟು ಸಿನಿಮಾಗಳ ಗುಚ್ಚ ಎನ್ನಬಹುದು. ಆ ಗುಚ್ಚದಲ್ಲಿರುವ ಸಿನಿಮಾಗಳಿಗೆ ಒಂದಲ್ಲಾ ಒಂದು ಕನೆಕ್ಷನ್ ಇರುತ್ತದೆ. ಹಲವು ಪಾತ್ರಗಳು ಬೇರೆ ಬೇರೆ ಸಿನಿಮಾದಲ್ಲಿ ಬಂದು ಹೋಗುತ್ತವೆ. ಈಗ ವೆಬ್ ಸೀರಿಸ್ (Web Series) ಲೋಕದಲ್ಲೂ ಈ ಟ್ರೆಂಡ್ ಶುರುವಾಗಿದೆ. ಖ್ಯಾತ ನಿರ್ದೇಶಕರಾದ ರಾಜ್ ಹಾಗೂ ಡಿಕೆ (Raj and DK) ಈ ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ಫರ್ಜಿ’ ವೆಬ್ ಸೀರಿಸ್ (Farzi Web Series) ಇದಕ್ಕೆ ತಾಜಾ ಉದಾಹರಣೆ.
‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸೀರಿಸ್ ಹಿಟ್ ಆಗಿದೆ. ಈ ಸರಣಿಯಲ್ಲಿ ಎರಡು ಸೀಸನ್ಗಳು ಬಂದಿವೆ. ಈ ಹೋಳಿ ಹಬ್ಬಕ್ಕೆ ಮೂರನೇ ಭಾಗ ಬರಲಿದೆ. ಈ ಸೀರಿಸ್ನಲ್ಲಿ ಬರುವ ಶ್ರೀಕಾಂತ್ ತಿವಾರಿ ಪಾತ್ರ ಸಖತ್ ಫೇಮಸ್. ಈ ಪಾತ್ರದ ಮ್ಯಾನರಿಸಂ ಸಾಕಷ್ಟು ಮಂದಿಗೆ ಇಷ್ಟವಾಗಿದೆ. ‘ಫರ್ಜಿ’ ವೆಬ್ ಸರಣಿಯಲ್ಲಿ ‘ದಿ ಫ್ಯಾಮಿಲಿ ಮ್ಯಾನ್’ನ ಶ್ರೀಕಾಂತ್ ತಿವಾರಿ ಹಾಗೂ ಚೆಲ್ಲಂ ಪಾತ್ರಗಳ ಬಳಕೆ ಆಗಿದೆ. ಇದರಿಂದ ರಾಜ್ ಹಾಗೂ ಡಿಕೆ ವೆಬ್ ಸೀರಿಸ್ ಲೋಕದಲ್ಲಿ ಯೂನಿವರ್ಸ್ ಸೃಷ್ಟಿ ಮಾಡುತ್ತಾರಾ ಎಂಬ ಪ್ರಶ್ನೆ ಮೂಡಿದೆ.
ಏನಿದು ಫರ್ಜಿ?
‘ಫರ್ಜಿ’ ವೆಬ್ ಸರಣಿಯಲ್ಲಿ ಶಾಹಿದ್ ಕಪೂರ್ ಹಾಗೂ ವಿಜಯ್ ಸೇತುಪತಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಪೇಟಿಂಗ್ ಆರ್ಟಿಸ್ಟ್ ಆಗಿ ಶಾಹಿದ್ ಕಪೂರ್ ಗಮನ ಸೆಳೆದಿದ್ದಾರೆ. ಈ ಸರಣಿಯಲ್ಲಿ ಅವರ ಪಾತ್ರಕ್ಕೆ ನೆಗೆಟಿವ್ ಶೇಡ್ ಇದೆ. ಹಣ ಮಾಡಲು ಮುಂದಾಗುವ ಸನ್ನಿ (ಶಾಹಿದ್ ಕಪೂರ್) ಖೋಟಾ ನೋಟು ಮುದ್ರಣಕ್ಕೆ ಕೈ ಹಾಕುತ್ತಾನೆ. ನಂತರ ಏನಾಗುತ್ತದೆ ಅನ್ನೋದು ಈ ಸರಣಿಯ ಕಥೆ. ‘ಫರ್ಜಿ’ಯಲ್ಲಿ ಖೋಟಾನೋಟು ನಿಯಂತ್ರಣಕ್ಕೆ ಮುಂದಾಗುವ ಅಧಿಕಾರಿಯ ಪಾತ್ರದಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದಾರೆ. ಈ ಸರಣಿಯಲ್ಲಿ ಎರಡು-ಮೂರು ಕಡೆ ತಿವಾರಿ ಪಾತ್ರದ ಹೆಸರು ಉಲ್ಲೇಖ ಆಗುತ್ತದೆ. ಚೆಲ್ಲಂ ಪಾತ್ರದ ಆಗಮನವೂ ಆಗುತ್ತದೆ.
ಇದನ್ನೂ ಓದಿ: ಮಿತಿ ಮೀರಿದ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಈ ನಟಿಯರು; ಇಲ್ಲಿದೆ ವೆಬ್ ಸೀರಿಸ್ ಹೆಸರು
ಹೆಚ್ಚಿದ ಯೂನಿವರ್ಸ್ ಟ್ರೆಂಡ್
ಇತ್ತೀಚೆಗೆ ಭಾರತ ಚಿತ್ರರಂಗದಲ್ಲಿ ಯೂನಿವರ್ಸ್ ಟ್ರೆಂಡ್ ಹೆಚ್ಚಿದೆ. ಲೋಕೇಶ್ ಕನಗರಾಜ್ ಅವರು ಕಾರ್ತಿ ನಟನೆಯ ‘ಕೈದಿ’ ಹಾಗೂ ಕಮಲ್ ಹಾಸನ್ ಅಭಿನಯದ ‘ವಿಕ್ರಮ್’ ಚಿತ್ರಕ್ಕೆ ಕನೆಕ್ಷನ್ ಇಟ್ಟಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ದಳಪತಿ ವಿಜಯ್ ಚಿತ್ರ ‘ಲಿಯೋ’ಗೂ ಈ ಹಿಂದಿನ ಚಿತ್ರಗಳಿಗೂ ಕನೆಕ್ಷನ್ ಇದೆ ಎನ್ನಲಾಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ಕೂಡ ಇದೇ ರೀತಿಯ ಯೂನಿವರ್ಸ್ ಸೃಷ್ಟಿ ಮಾಡುವ ಆಲೋಚನೆಯಲ್ಲಿದೆ. ‘ಕೆಜಿಎಫ್ 2’ ಹಾಗೂ ‘ಸಲಾರ್’ ಚಿತ್ರಕ್ಕೆ ಕನೆಕ್ಷನ್ ಇದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಇದನ್ನೂ ಓದಿ: ‘ಫ್ಯಾಮಿಲಿ ಮ್ಯಾನ್’ ನಿರ್ದೇಶಕರ ಜತೆ ಸಮಂತಾ ಮತ್ತೊಂದು ವೆಬ್ ಸೀರಿಸ್; ಆ್ಯಕ್ಷನ್ನಲ್ಲಿ ಮಿಂಚಲಿದ್ದಾರೆ ಸ್ಯಾಮ್
ಬಾಲಿವುಡ್ನಲ್ಲಿ ಸಿದ್ದಾರ್ಥ್ ಆನಂದ್ ಅವರ ‘ವಾರ್’ ಹಾಗೂ ‘ಪಠಾಣ್’ ಚಿತ್ರಕ್ಕೆ ಕನೆಕ್ಷನ್ ನೀಡುವ ಪ್ರಯತ್ನ ನಡೆದಿದೆ. ‘ವಾರ್’ ಚಿತ್ರದಲ್ಲಿ ಹೃತಿಕ್ ರೋಷನ್ ಮಾಡಿರೋ ಕಬೀರ್ ಪಾತ್ರದ ಉಲ್ಲೇಖ ‘ಪಠಾಣ್’ ಸಿನಿಮಾದಲ್ಲಿ ಆಗುತ್ತದೆ. ಸಿದ್ದಾರ್ಥ್ ಆನಂದ್ ತಮ್ಮ ಸಿನಿಮಾಗಳನ್ನು ಯೂನಿವರ್ಸ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.