ಬಾಲಿವುಡ್ನ ಸ್ಟಾರ್ ನಟಿ ಕಾಜೋಲ್ (Kajol) ಅವರು ಇತ್ತೀಚಿನ ವರ್ಷಗಳಲ್ಲಿ ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಅವರು ಆದಷ್ಟು ಬೇಗ ಒಟಿಟಿ (OTT) ಜಗತ್ತಿಗೆ ಕಾಲಿಡುತ್ತಾರೆ ಎಂಬ ಗುಸುಗುಸು ಇತ್ತೀಚೆಗೆ ಹಬ್ಬಿತ್ತು. ಆ ಬಗ್ಗೆ ಯಾರೂ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿರಲಿಲ್ಲ. ಆದರೆ ಈಗ ಸ್ವತಃ ಕಾಜೋಲ್ ಅವರು ಆ ಕುರಿತು ಮಾತನಾಡಿದ್ದಾರೆ. ಅದು ಕೂಡ ಒಂದು ವಿಶೇಷವಾದ ಪ್ರೋಮೋ ಹಂಚಿಕೊಳ್ಳುವ ಮೂಲಕ ಎಂಬುದು ವಿಶೇಷ. ಈಗಾಗಲೇ ಅನೇಕ ನಟಿಯರು ಒಟಿಟಿ ಜಗತ್ತಿಗೆ ಕಾಲಿಟ್ಟು ಯಶಸ್ಸು ಕಂಡಿದ್ದಾರೆ. ಈಗ ಕಾಜೋಲ್ ಸರದಿ. ‘ಡಿಸ್ನಿ ಪ್ಲಸ್ ಹಾಟ್ ಸ್ಟಾರ್’ (Disney Plus Hotstar) ಮೂಲಕ ಅವರು ಒಟಿಟಿಗೆ ಎಂಟ್ರಿ ನೀಡುತ್ತಿದ್ದಾರೆ. ಈ ಸುದ್ದಿ ಕೇಳಿ ಅವರ ಅಭಿಮಾನಿಗಳ ವಲಯದಲ್ಲಿ ನಿರೀಕ್ಷೆ ಹೆಚ್ಚಾಗಿದೆ.
1995ರಲ್ಲಿ ಶಾರುಖ್ ಖಾನ್ ಮತ್ತು ಕಾಜೋಲ್ ಅವರು ಜೋಡಿಯಾಗಿ ನಟಿಸಿದ ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ’ ಸಿನಿಮಾ ಬಿಡುಗಡೆಯಾಗಿ ಜಯಭೇರಿ ಬಾರಿಸಿತ್ತು. ಆ ಸಿನಿಮಾದ ಒಂದು ದೃಶ್ಯವನ್ನು ಅನುಕರಿಸುವ ರೀತಿಯಲ್ಲಿ ಈ ಹೊಸ ಒಟಿಟಿ ಶೋ ಪ್ರೋಮೋ ಮೂಡಿಬಂದಿದೆ. ಆದರೆ ಇದರಲ್ಲಿ ಹೆಚ್ಚು ಮಾಹಿತಿ ಬಿಟ್ಟುಕೊಡಲಾಗಿಲ್ಲ. ಕೇವಲ ಕೌತುಕ ಮೂಡಿಸಲಷ್ಟೇ ಈ ಪ್ರೋಮೋ ಯಶಸ್ವಿ ಆಗಿದೆ.
ಕಾಜೋಲ್ ಅವರು ನಟಿಸಲಿರುವ ವೆಬ್ ಸಿರೀಸ್ ಯಾವುದು? ಅದರ ಶೀರ್ಷಿಕೆ ಏನು? ಅವರ ಜೊತೆ ಬೇರೆ ಯಾರೆಲ್ಲ ನಟಿಸಲಿದ್ದಾರೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ಮೂಲಗಳ ಪ್ರಕಾರ, ಮುಂಬೈನಲ್ಲಿ ಜುಲೈ 11ರಂದು ಇದರ ಶೂಟಿಂಗ್ ಆರಂಭ ಆಗಿದೆ. ಇದರ ಪ್ರತಿ ಎಪಿಸೋಡ್ಗೆ ಕಾಜೋಲ್ ಅವರು 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಕನಿಷ್ಠ 8 ಎಪಿಸೋಡ್ ಇದ್ದರೆ, 40 ಕೋಟಿ ರೂಪಾಯಿ ಸಿಕ್ಕಂತೆ ಆಗುತ್ತದೆ. ಆದರೆ ಸಂಭಾವನೆ ವಿಚಾರದ ಬಗ್ಗೆ ಎಲ್ಲಿಯೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಬರೀ ಅಂತೆ-ಕಂತೆಗಳು ಹರಿದಾಡುತ್ತಿವೆ.
ಸದ್ಯ ಕಾಜೋಲ್ ಹಂಚಿಕೊಂಡಿರುವ ಪ್ರೋಮೋ ವೈರಲ್ ಆಗಿದೆ. ಅಭಿಮಾನಿಗಳು ಇದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕಾಜೋಲ್ ಅವರ ಹೊಸ ಪ್ರಯತ್ನಕ್ಕೆ ಅನೇಕ ಸೆಲೆಬ್ರಿಟಿಗಳು ಕೂಡ ಅಭಿನಂದನೆ ತಿಳಿಸುತ್ತಿದ್ದಾರೆ.
Published On - 3:19 pm, Mon, 18 July 22