ಬಿಗ್ ಬಾಸ್ ಮನೆಯಲ್ಲಿ ಅಸಲಿ ಆಟ ಶುರುವಾಗಿದೆ. ಈ ಬಾರಿ ಒಟಿಟಿಯಲ್ಲಿ (Bigg Boss Kannada OTT) ಈ ರಿಯಾಲಿಟಿ ಶೋ ಪ್ರಸಾರ ಆಗುತ್ತಿದೆ. ದಿನದಿಂದ ದಿನಕ್ಕೆ ಸ್ಪರ್ಧಿಗಳ ಅಸಲಿ ಮುಖ ರಿವೀಲ್ ಆಗುತ್ತಿದೆ. 16 ಸ್ಪರ್ಧಿಗಳಿಂದ ಶುರುವಾದ ಈ ಶೋನಲ್ಲಿ ಈಗ 12 ಜನರ ನಡುವೆ ಪೈಪೋಟಿ ಮುಂದುವರಿದಿದೆ. ಪ್ರತಿ ವಾರ ಕಿಚ್ಚ ಸುದೀಪ್ (Kichcha Sudeep) ಅವರು ಎಲ್ಲರನ್ನೂ ಕೂರಿಸಿ ಪಂಚಾಯಿತಿ ಮಾಡುತ್ತಾರೆ. ಪ್ರತಿಯೊಬ್ಬರ ಪ್ಲಸ್ ಮತ್ತು ಮೈನಸ್ಗಳನ್ನು ಅವರು ಗಮನಿಸಿ ಹೇಳುತ್ತಾರೆ. ಕೆಲವೊಮ್ಮೆ ಖಡಕ್ ಆಗಿ ಎಚ್ಚರಿಕೆ ಕೂಡ ನೀಡುತ್ತಾರೆ. ಈ ವಾರ ಜಶ್ವಂತ್ ಅವರಿಗೆ ಸುದೀಪ್ ವಾರ್ನಿಂಗ್ ನೀಡಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ. ಗರ್ಲ್ಫ್ರೆಂಡ್ ನಂದು ಜೊತೆಗಿನ ಅತಿಯಾದ ಒಡನಾಟದ ಕಾರಣದಿಂದ ಜಶ್ವಂತ್ (Jashwanth) ಅವರಿಗೆ ಈ ಪರಿಸ್ಥಿತಿ ಬಂದಿದೆ.
ಆರಂಭದಲ್ಲಿ ಜಶ್ವಂತ್ ಮತ್ತು ನಂದು ಅವರು ಜೋಡಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದರು. ಆದರೆ ಕೆಲವೇ ದಿನಗಳಲ್ಲಿ ಅವರಿಬ್ಬರು ಪ್ರತ್ಯೇಕವಾಗಿ ಆಟ ಮುಂದುವರಿಸಬೇಕು ಎಂದು ಬಿಗ್ ಬಾಸ್ ಆದೇಶಿಸಿದರು. ಆದರೂ ಕೂಡ ಜಶ್ವಂತ್ ವರ್ತನೆಯಲ್ಲಿ ಹೆಚ್ಚಿನ ಬದಲಾವಣೆ ಕಾಣಿಸಲಿಲ್ಲ. ಅದನ್ನು ಕಿಚ್ಚ ಸುದೀಪ್ ಗಮನಿಸಿದ್ದಾರೆ. ವಾರದ ಪಂಚಾಯಿತಿಯಲ್ಲಿ ಅದನ್ನು ಅವರು ನೇರವಾಗಿ ಜಶ್ವಂತ್ಗೆ ಹೇಳಿದ್ದಾರೆ.
ಪ್ರತಿ ವಾರ ಎಲ್ಲರೂ ಒಬ್ಬೊಬ್ಬರನ್ನು ನಾಮಿನೇಟ್ ಮಾಡಬೇಕು. ತಮ್ಮ ಸ್ವಂತ ನಿರ್ಧಾರದಿಂದ ನಾಮಿನೇಟ್ ಮಾಡಬೇಕೇ ಹೊರತು, ಇನ್ನೊಬ್ಬರ ಜೊತೆ ಚರ್ಚೆ ಮಾಡಿ ತೀರ್ಮಾನಕ್ಕೆ ಬರುವಂತಿಲ್ಲ. ಆದರೆ ಜಶ್ವಂತ್ ಅವರು ಆ ನಿಯಮ ಮುರಿದಿದ್ದಾರೆ. ಗರ್ಲ್ಫ್ರೆಂಡ್ ನಂದು ಜೊತೆ ಅವರು ನಾಮಿನೇಷನ್ ಬಗ್ಗೆ ಚರ್ಚೆ ಮಾಡಿದ್ದರು. ಅದನ್ನು ಗಮನಿಸಿದ ಸುದೀಪ್ ಅವರು ಎಚ್ಚರಿಕೆ ನೀಡಿದ್ದಾರೆ.
‘ಮುಂದಿನ ಬಾರಿ ಈ ರೀತಿ ಮಾಡಿದರೆ ನಿಮಗೆ ಬಾಗಿಲು ತೋರಿಸಬೇಕಾಗುತ್ತದೆ. ನೀವಿಬ್ಬರು ಬೇರೆ ಬೇರೆ ಸ್ಪರ್ಧಿಗಳಾಗಿ ಆಡ್ತಾ ಇದೀರಿ. ಹಾಗಿದ್ದ ಮೇಲೆ ಚರ್ಚೆ ಮಾಡ್ಕೊಂಡು ನಾಮಿನೇಟ್ ಮಾಡುವಂತಿಲ್ಲ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಇದನ್ನು ಜಶ್ವಂತ್ ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಅಂತ ಕಾದು ನೋಡಬೇಕು.
ಸದ್ಯ ಲೋಕೇಶ್ ಮತ್ತು ಅರ್ಜುನ್ ರಮೇಶ್ ಅವರು ಗಾಯದ ಸಮಸ್ಯೆಯ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಕಿರಣ್ ಯೋಗೇಶ್ವರ್ ಹಾಗೂ ಸ್ಫೂರ್ತಿ ಗೌಡ ಅವರು ಕಡಿಮೆ ವೋಟ್ ಪಡೆದು ಎಲಿಮಿನೇಟ್ ಆಗಿದ್ದಾರೆ. ಇನ್ನುಳಿದ 12 ಜನರು ತಮ್ಮದೇ ತಂತ್ರಗಳ ಮೂಲಕ ಆಟ ಮುಂದುವರಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:34 pm, Sun, 21 August 22