Sonu Srinivas Gowda: ರಾತ್ರಿ 2.15ಕ್ಕೆ ಸೋನು ಗೌಡ ಜತೆ ಮಾತಾಡಲು ಬಂದ ರಾಕೇಶ್; ವೈರಲ್ ಹುಡುಗಿಯ ಪ್ರತಿಕ್ರಿಯೆ ಹೇಗಿತ್ತು?
Rakesh Adiga | Bigg Boss Kannada OTT: ಸಮಯ ಮಧ್ಯ ರಾತ್ರಿ 2.15 ಆಗಿತ್ತು. ಆಗ ಸೋನು ಶ್ರೀನಿವಾಸ್ ಗೌಡ ಅವರನ್ನು ಮಾತನಾಡಿಸಲು ರಾಕೇಶ್ ಅಡಿಗ ಬಂದರು. ಈ ವೇಳೆ ಸೋನುಗೆ ಕೋಪ ಬಂತು.
ದಿನದಿಂದ ದಿನಕ್ಕೆ ‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) ಶೋ ರಂಗು ಹೆಚ್ಚುತ್ತಿದೆ. ಈಗಾಗಲೇ ಒಂದು ವಾರ ಪೂರೈಸಿರುವ ಸ್ಪರ್ಧಿಗಳು ಎರಡನೇ ವಾರಕ್ಕೆ ಕಾಲಿಟ್ಟಿದ್ದಾರೆ. ಈ ಶೋ ನಡೆಯುವುದು ಕೇವಲ ಆರು ವಾರಗಳು ಮಾತ್ರ. ಹಾಗಾಗಿ ಎಲ್ಲ ಸ್ಪರ್ಧಿಗಳಿಗೆ ಇಲ್ಲಿ ಸಿಗುವ ಕಾಲಾವಕಾಶ ಕಡಿಮೆ. ಇರುವ ಅಲ್ಪ ಸಮಯದಲ್ಲೇ ಜನರ ಗಮನ ಸೆಳೆಯಲು ಒಂದಷ್ಟು ತಂತ್ರಗಳನ್ನು ರೂಪಿಸಲಾಗುತ್ತಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೈಲೈಟ್ ಆಗುತ್ತಿದ್ದಾರೆ. ರೀಲ್ಸ್ ಹಾಗೂ ವೈರಲ್ ವಿಡಿಯೋ ಮೂಲಕ ಫೇಮಸ್ ಆದ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ಬಿಗ್ ಬಾಸ್ ಮನೆಯೊಳಗೆ ತಮ್ಮದೇ ರೀತಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರು ಮಾತನಾಡುವ ಶೈಲಿ ಬಗ್ಗೆ ಅನೇಕರಿಗೆ ತಕರಾರು ಇದೆ. ಇದೇ ವಿಚಾರವಾಗಿ ರಾಕೇಶ್ ಅಡಿಗ (Rakesh Adiga) ಅವರು ಸೋನು ಗೌಡಗೆ ಬುದ್ಧಿಮಾತು ಹೇಳಲು ಪ್ರಯತ್ನಿಸಿದ್ದಾರೆ. ಅದು ಕೂಡ ತಡರಾತ್ರಿ 2.15ಕ್ಕೆ ಎಂಬುದು ವಿಶೇಷ.
ಬಿಗ್ ಬಾಸ್ ಮನೆಯಲ್ಲಿ ಯಾರೂ ಕೂಡ ಹಗಲು ಹೊತ್ತು ನಿದ್ರೆ ಮಾಡುವಂತಿಲ್ಲ. ರಾತ್ರಿ ಲೈಟ್ ಆಫ್ ಆದ ಬಳಿಕವೇ ನಿದ್ರೆಗೆ ಅವಕಾಶ. ಹಾಗಾಗಿ ಲೈಟ್ ಆಫ್ ಆಗಲಿ ಎಂದು ಸ್ಪರ್ಧಿಗಳು ಕಾಯುತ್ತಿರುತ್ತಾರೆ. ಆದರೆ ಕೆಲವರಿಗೆ ನಿದ್ರೆ ಮಾಡುವ ಅವಸರ ಇರುವುದಿಲ್ಲ. ಮಾತನಾಡುವ ಭರದಲ್ಲಿ ನಿದ್ರೆ ಬಗ್ಗೆ ಗಮನ ನೀಡುವುದಿಲ್ಲ. ರಾಕೇಶ್ ಅಡಿಗ ಮತ್ತು ಸೋನು ಗೌಡ ನಡುವೆ ಹಾಗೆಯೇ ಆಗಿದೆ.
ಚೈತ್ರಾ ಹಳ್ಳಿಕೇರಿ, ಜಯಶ್ರೀ ಆರಾಧ್ಯ ಜೊತೆ ಸೋನು ಗೌಡ ಮಾತನಾಡುತ್ತಿದ್ದರು. ಸಮಯ ಮಧ್ಯರಾತ್ರಿ 2.15 ಆಗಿತ್ತು. ಆಗ ಸೋನು ಗೌಡ ಅವರನ್ನು ಮಾತನಾಡಿಸಲು ರಾಕೇಶ್ ಅಡಿಗ ಬಂದರು. ‘ನೀನು ದಯವಿಟ್ಟು ಹೋಗಬೇಕು ಅಂತ ವಿನಂತಿ. ನನ್ನ ಮತ್ತು ನಿನ್ನ ವಿಷಯವನ್ನು ಬೇರೆಯವರ ಮುಂದೆ ಜಡ್ಜ್ ಮಾಡಬೇಡ. ನನಗೆ ಇಷ್ಟ ಆಗಲ್ಲ ಹೋಗು’ ಎಂದು ಸೋನು ಗೌಡ ಬೈಯ್ದು ಕಳಿಸಿದರು.
ಸೋನು ಗೌಡ ಸಿಟ್ಟಾಗಿದ್ದು ಕಂಡು ರಾಕೇಶ್ ಅಡಿಗ ಕೂಲ್ ಆಗಿ ಪ್ರತಿಕ್ರಿಯಿಸಿದರು. ‘ನನ್ನ ವಿಷಯ ಬಿಡು. ಇನ್ಮೇಲೆ ಇವರಿಗೆ (ಚೈತ್ರಾ) ಹೋಗೆ ಬಾರೆ ಅಂತ ಕರೆಯಬೇಡ’ ಎಂದು ಬುದ್ಧಿಮಾತು ಹೇಳಿ ರಾಕೇಶ್ ಜಾಗ ಖಾಲಿ ಮಾಡಿದರು. ಯಾರು ಎಷ್ಟೇ ಬುದ್ಧಿ ಹೇಳಿದರೂ ಅದನ್ನು ಸೋನು ಶ್ರೀನಿವಾಸ್ ಗೌಡ ಕೇಳುತ್ತಿಲ್ಲ. ‘ಪದೇ ಪದೇ ಹೇಳಬೇಡಿ. ನನಗೆ ಮರೆತು ಹೋಗುತ್ತದೆ’ ಎಂದು ಅವರು ಜಾರಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:42 pm, Tue, 16 August 22