ಭಾರಿ ಕೌತುಕ ಮೂಡಿಸಿದ ‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT ) ಶೋನಲ್ಲಿ ಮೊದಲ ಎಲಿಮಿನೇಷನ್ ನಡೆದಿದೆ. ಕಿರಣ್ ಯೋಗೇಶ್ವರ್ (Kiran Yogeshwar) ಅವರು ಔಟ್ ಆಗಿದ್ದಾರೆ. ಕಿರಣ್ ಅವರಿಗೆ ಕನ್ನಡ ಸರಿಯಾಗಿ ಮಾತನಾಡಲು ಬರುವುದಿಲ್ಲ. ಅಲ್ಲದೇ ಇತರೆ ಸ್ಪರ್ಧಿಗಳ ಜೊತೆ ಹೊಂದಿಕೊಳ್ಳಲು ಕೂಡ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಅಂತಿಮವಾಗಿ ಅತಿ ಕಡಿಮೆ ವೋಟ್ ಬಂದಿರುವುದು ಕೂಡ ಅವರಿಗೆ. ಆದ್ದರಿಂದ ಮೊದಲ ವಾರವೇ ಅವರ ಬಿಗ್ ಬಾಸ್ ಪಯಣ ಅಂತ್ಯವಾಗಿದೆ. ಇಂದು (ಆಗಸ್ಟ್ 13) ನಡೆದ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ಎಲಿಮಿನೇಷನ್ (Bigg Boss Elimination) ಘೋಷಿಸಿದರು.
‘ಒಂದೇ ವಾರದಲ್ಲಿ ನಾನು ಎಲ್ಲ ಜೊತೆ ಕ್ಲೋಸ್ ಆದೆ. ನಿಮ್ಮೆಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತೇನೆ. ಈ ಮನೆಯನ್ನೂ ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಹೇಳುವ ಮೂಲಕ ಕಿರಣ್ ಯೋಗೇಶ್ವರ್ ಅವರು ಎಲ್ಲರಿಗೂ ವಿದಾಯ ಹೇಳಿದ್ದಾರೆ. ಯಾವುದೇ ಬೇಸರ ಇಲ್ಲದೇ ನಗುನಗುತ್ತಲೇ ಅವರು ದೊಡ್ಮನೆಯಿಂದ ಹೊರಬಂದಿದ್ದಾರೆ.
ಸಾನ್ಯಾ ಅಯ್ಯರ್, ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ, ಸೋನು ಶ್ರೀನಿವಾಸ್ ಗೌಡ, ಅರ್ಜುನ್ ರಮೇಶ್, ಉದಯ್ ಸೂರ್ಯ, ಸ್ಫೂರ್ತಿ ಗೌಡ, ಜಯಶ್ರೀ ಆರಾಧ್ಯ, ಅಕ್ಷತಾ ಕುಕ್ಕಿ, ಕಿರಣ್ ಯೋಗೇಶ್ವರ್ ಅವರು ಈ ವಾರ ನಾಮಿನೇಟ್ ಆಗಿದ್ದರು. ಅತಿ ಕಡಿಮೆ ವೋಟ್ ಪಡೆದ ಕಿರಣ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ.
ಇದನ್ನೂ ಓದಿ: Sonu Srinivas Gowda: ಸೋನು ಶ್ರೀನಿವಾಸ್ ಗೌಡ ಫೋನ್ ನಂಬರ್ ಏನು? ಅದ್ರಲ್ಲೂ ಚಾಲಕಿತನ ತೋರಿದ ರೀಲ್ಸ್ ಬೆಡಗಿ
ಮೊದಲ ವಾರದ ಎಲಿಮಿನೇಷನ್ ಬಳಿಕ ಬಿಗ್ ಬಾಸ್ ಒಟಿಟಿ ಮನೆಯಲ್ಲಿ ಆಟ ಚುರುಕಾಗಿದೆ. ಇನ್ನುಳಿದ ಸ್ಪರ್ಧಿಗಳಿಗೆ ಟೆನ್ಷನ್ ಹೆಚ್ಚಿದೆ. ಸೋನು ಗೌಡ ಅವರು ಈ ಶೋಗೆ ಆಯ್ಕೆ ಆಗಿರುವ ಬಗ್ಗೆ ಅನೇಕರಿಗೆ ತಕರಾರು ಇದೆ. ಕನ್ನಡ ಸರಿಯಾಗಿ ಬರುವುದಿಲ್ಲ ಎಂಬ ಕಾರಣಕ್ಕೆ ಜಶ್ವಂತ್ ಬಗ್ಗೆಯೂ ಕೆಲವರಿಗೆ ಅಸಮಾಧಾನ ಇದೆ. ಈ ವಾರ ಅಕ್ಷತಾ ಕುಕ್ಕಿ ಅವರು ಕಳಪೆ ಹಣೆಪಟ್ಟಿ ಪಡೆದುಕೊಂಡಿದ್ದರು. ಅವರೆಲ್ಲರನ್ನೂ ಬಿಟ್ಟು ಕಿರಣ್ ಯೋಗೇಶ್ವರ್ ಅವರು ಔಟ್ ಆಗಿರುವುದು ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:51 pm, Sat, 13 August 22