ಶತದಿನ ಕಂಡ ‘ಕೃಷ್ಣಂ ಪ್ರಣಯ ಸಖಿ’ ಈಗ ಒಟಿಟಿಗೆ

Krishnam Pranaya Sakhi: ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಶತದಿನೋತ್ಸವ ಆಚರಣೆ ಮಾಡಿದೆ. ಈ ಸಿನಿಮಾ ಶೀಘ್ರದಲ್ಲಿಯೇ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಯಾವ ಒಟಿಟಿ? ಯಾವಾಗ ಬಿಡುಗಡೆ? ಇಲ್ಲಿದೆ ಮಾಹಿತಿ.

ಶತದಿನ ಕಂಡ ‘ಕೃಷ್ಣಂ ಪ್ರಣಯ ಸಖಿ’ ಈಗ ಒಟಿಟಿಗೆ

Updated on: Nov 23, 2024 | 4:17 PM

ಕನ್ನಡ ಸಿನಿಮಾಗಳು ಶತದಿನ ಆಚರಿಸುವುದು ಅಪರೂಪದಲ್ಲಿ ಅಪರೂಪ ಆಗಿಹೋಗಿದೆ. ಮೊದಲೆಲ್ಲ 50-100 ಚಿತ್ರಮಂದಿರಗಳಲ್ಲಿ ಸಿನಿಮಾಗಳೂ ಶತದಿನ ಆಚರಣೆ ಮಾಡಿಕೊಳ್ಳುತ್ತಿದ್ದವು. ಆದರೆ ಈಗ ಸಿನಿಮಾ ಒಂದು ನಾಲ್ಕು ವಾರ ಓಡಿತೆಂದರೆ ಅದೇ ಸಾಧನೆ. ಅದರಲ್ಲೂ ಕನ್ನಡ ಸಿನಿಮಾಗಳು ನಾಲ್ಕು ವಾರ ಓಡಿಬಿಟ್ಟರೆ ಮುಗಿಯಿತು ಕತೆ. ಸಿನಿಮಾ ಬ್ಲಾಕ್ ಬಸ್ಟರ್ ಎಂಬಂತೆ ಕುಣಿದಾಡುತ್ತದೆ ಚಿತ್ರತಂಡ. ಇಂಥಹಾ ಪರಿಸ್ಥಿತಿಯಲ್ಲಿ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಬರೋಬ್ಬರಿ ನೂರು ದಿನ ಪ್ರದರ್ಶನ ಕಂಡಿದೆ. ನೂರು ದಿನಗಳ ಪ್ರದರ್ಶನದ ಬಳಿಕ ಈಗ ಒಟಿಟಿಗೆ ಬರುತ್ತಿದೆ.

ಸಿನಿಮಾಗಳು ಬಿಡುಗಡೆ ಆದ ಒಂದೇ ವಾರಕ್ಕೆ ಒಟಿಟಿಗೆ ಬರುತ್ತಿರುವ ಈ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಶತದಿನ ಪೂರೈಸಿ ಒಟಿಟಿಗೆ ಬರುತ್ತಿದೆ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ. ಗಣೇಶ್ ನಟನೆಯ ಈ ಹಾಸ್ಯ ಮಿಶ್ರಿತ ಪ್ರೇಮಕತೆಯುಳ್ಳ ಸಿನಿಮಾ ಇದೇ ವರ್ಷ ಆಗಸ್ಟ್ 15 ರಂದು ತೆರೆಗೆ ಬಂದಿತ್ತು. ಕೌಟುಂಬಿಕ ಪ್ರೇಕ್ಷಕರನ್ನು, ಯುವಕ-ಯುವತಿಯರನ್ನು ಚಿತ್ರಮಂದಿರಕ್ಕೆ ಸೆಳೆದಿದ್ದ ಈ ಸಿನಿಮಾ ಬಿಡುಗಡೆ ಆದ ಕೆಲವು ವಾರಗಳ ಕಾಲ ಹಲವು ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿತ್ತು. ಈ ಸಿನಿಮಾ ಈಗ ಕರ್ನಾಟಕದ ನಾಲ್ಕು ಚಿತ್ರಮಂದಿರಗಳಲ್ಲಿ ಶತದಿನ ಪೂರೈಸಿದೆ. ಹಲವು ಭಾರಿ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗಳಿಗೂ ಆಗದ ಕಾರ್ಯವನ್ನು ಮಾಡಿ ತೋರಿಸಿದೆ.

ಇದನ್ನೂ ಓದಿ:‘ಕೃಷ್ಣಂ ಪ್ರಣಯ ಸಖಿ’ 25 ದಿನಗಳಲ್ಲಿ ಮಾಡಿದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು?

ಶತದಿನದ ಬಳಿಕ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಒಟಿಟಿಗೆ ಬರುತ್ತಿದೆ. ಸನ್ ನೆಕ್ಸ್ಟ್ ಒಟಿಟಿಯಲ್ಲಿ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಬಿಡುಗಡೆ ಆಗಲಿದೆ. ನವೆಂಬರ್ 29ಕ್ಕೆ ಈ ಸಿನಿಮಾ ಸನ್ ನೆಕ್ಟ್ಸ್ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಅಮೆಜಾನ್, ನೆಟ್​ಫ್ಲಿಕ್ಸ್​, ಜೀ5 ಅಂಥಹಾ ದೈತ್ಯ ಒಟಿಟಿಗಳನ್ನು ಬದಿಗೆ ಸರಿಸಿ ಸನ್ ನೆಕ್ಟ್ಸ್​ನಲ್ಲಿ ಈ ಸಿನಿಮಾ ಪ್ರಸಾರ ಆಗಲಿದೆ.

‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದಲ್ಲಿ ಗಣೇಶ್ ಜೊತೆಗೆ ಮಾಳವಿಕಾ ನಾಯರ್, ಶರಣ್ಯಾ ಶೆಟ್ಟಿ, ಸಾಧು ಕೋಕಿಲ, ರಂಗಾಯಣ ರಘು, ಅವಿನಾಶ್ ಇನ್ನಿತರರು ನಟಿಸಿದ್ದಾರೆ. ಸಿನಿಮಾವನ್ನು ಶ್ರೀನಿವಾಸ್ ರಾಜು ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಹಾಡುಗಳು ಸೂಪರ್ ಹಿಟ್ ಆಗಿವೆ. ಪ್ರಶಾಂತ್ ಜಿ ರುದ್ರಪ್ಪ ಅವರು ಸಿನಿಮಾದ ನಿರ್ಮಾಣ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:17 pm, Sat, 23 November 24