
ಟಾಲಿವುಡ್ ನಟ ನಾನಿ (Nani) ಅವರು ಸಖತ್ ಖುಷಿಯಲ್ಲಿದ್ದಾರೆ. ಅವರು ನಟಿಸಿದ ‘ದಸರಾ’ ಸಿನಿಮಾ ಸೂಪರ್ ಹಿಟ್ ಆಗಿದ್ದರಿಂದ ಅವರ ವೃತ್ತಿಜೀವನದ ಮೈಲೇಜ್ ಹೆಚ್ಚಿತು. ಈ ಸಿನಿಮಾವನ್ನು ಥಿಯೇಟರ್ನಲ್ಲಿ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಈಗ ಮನೆಯಲ್ಲೇ ಕುಳಿತು ‘ದಸರಾ’ (Dasara Movie) ವೀಕ್ಷಿಸುವ ಸಮಯ ಹತ್ತಿರ ಆಗುತ್ತಿದೆ. ಹೌದು, ಶೀಘ್ರದಲ್ಲೇ ಈ ಸಿನಿಮಾ ಒಟಿಟಿ ಅಂಗಳಕ್ಕೆ ಕಾಲಿಡುತ್ತಿದೆ. ಈ ಬಗ್ಗೆ ನೆಟ್ಫ್ಲಿಕ್ಸ್ (Netflix) ಮಾಹಿತಿ ಹಂಚಿಕೊಂಡಿದೆ. ಏಪ್ರಿಲ್ 27ರಂದು ‘ದಸರಾ’ ಸ್ಟ್ರೀಮಿಂಗ್ ಆರಂಭ ಆಗಲಿದೆ. ಈ ಸಿನಿಮಾದಲ್ಲಿ ನಾನಿ ಅವರಿಗೆ ಜೋಡಿಯಾಗಿ ಕೀರ್ತಿ ಸುರೇಶ್ ನಟಿಸಿದ್ದಾರೆ. ಅನೇಕ ಸೆಲೆಬ್ರಿಟಿಗಳು ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ನೋಡಿ ಮೆಚ್ಚಿಗೆ ಸೂಚಿಸಿದ್ದರು. ರಾಜಮೌಳಿ ಕೂಡ ಫಿದಾ ಆಗಿದ್ದರು.
ಮಾರ್ಚ್ 30ರಂದು ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ‘ದಸರಾ’ ಸಿನಿಮಾ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿತು. ಬಿಡುಗಡೆ ಆದ ಕೆಲವೇ ದಿನಗಳಲ್ಲಿ ನೂರು ಕೋಟಿ ಕಲೆಕ್ಷನ್ ಸಹ ದಾಟಿತು. ಇದು ನಾನಿ ವೃತ್ತಿ ಜೀವನದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನಿಸಿಕೊಂಡಿದೆ. ಸಿನಿಮಾವನ್ನು ಶ್ರೀಕಾಂತ್ ಒಡೆಲಾ ನಿರ್ದೇಶನ ಮಾಡಿದ್ದು, ಇದು ಅವರ ಮೊದಲ ಸಿನಿಮಾ.
Dasara Movie: ‘ಸೂಪರ್ ಆ್ಯಕ್ಷನ್, ನಾನಿ ನಟನೆಗೆ ಭೇಷ್’; ‘ದಸರಾ’ ಸಿನಿಮಾ ನೋಡಿ ಫ್ಯಾನ್ಸ್ ಖುಷ್
‘ದಸರಾ’ ಸಿನಿಮಾದಲ್ಲಿ ನಟ ನಾನಿ ಅವರು ರಗಡ್ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲು ಈ ಚಿತ್ರದ ಟ್ರೇಲರ್ ಬಿಡುಗಡೆ ಆದಾಗ ಎಲ್ಲರೂ ‘ಪುಷ್ಪ’ ಸಿನಿಮಾಗೆ ಹೋಲಿಕೆ ಮಾಡಿದರು. ಆದರೆ ಸಿನಿಮಾ ರಿಲೀಸ್ ಆದಾಗ ಆ ಹೋಲಿಕೆ ಮಾಯವಾಯ್ತು. ಇದು ಬೇರೆಯದೇ ಕಥೆಯನ್ನು ಹೊಂದಿದೆ ಎಂಬುದು ಪ್ರೇಕ್ಷಕರಿಗೆ ತಿಳಿಯಿತು. ಒಂದು ವಾರಗಳ ಕಾಲ ಭರ್ಜರಿ ಪ್ರದರ್ಶನ ಕಂಡ ಬಳಿಕ ಈ ಸಿನಿಮಾ ಶತಕೋಟಿ ರೂಪಾಯಿ ಕ್ಲಬ್ ಸೇರಿತು.
ನಾನಿ ಅವರು ಟಾಲಿವುಡ್ನಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಅನೇಕ ಒಳ್ಳೆಯ ಸಿನಿಮಾಗಳನ್ನು ಅವರು ನೀಡಿದ್ದಾರೆ. ಹಾಗಿದ್ದರೂ ಕೂಡ ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಿಕ್ಕಿರಲಿಲ್ಲ. ಈಗ ‘ದಸರಾ’ ಚಿತ್ರದ ಮೂಲಕ ಅವರು ದೊಡ್ಡ ಮಟ್ಟದಲ್ಲಿ ಗೆದ್ದು ಬೀಗಿದ್ದಾರೆ.
‘ದಸರಾ’ ನಿರ್ಮಾಪಕ ಸುಧಾಕರ್ ಚೆರಕೂರಿ ಅವರು ಸುಮಾರು 80 ಲಕ್ಷ ರೂಪಾಯಿ ಬೆಲೆಯ ಬಿಎಂಡಬ್ಲ್ಯೂ ಕಾರನ್ನು ‘ದಸರಾ’ ನಿರ್ದೇಶಕ ಶ್ರೀಕಾಂತ್ ಒಡೆಲಾಗೆ ಗಿಫ್ಟ್ ನೀಡಿದ್ದರು. ಪ್ರಮುಖ ತಂತ್ರಜ್ಞರಿಗೆ 10 ಗ್ರಾಂ ಚಿನ್ನದ ಗಟ್ಟಿಯನ್ನು ನೀಡಿದ್ದರು. ಇದರಿಂದ ಚಿತ್ರದ ತಾಂತ್ರಿಕ ವರ್ಗದವರಿಗೆ ಸಖತ್ ಖುಷಿ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:12 pm, Thu, 20 April 23