ಟಾಲಿವುಡ್ ನಟ ನರೇಶ್ (Naresh) ಹಾಗೂ ಪವಿತ್ರಾ ಲೋಕೇಶ್ ಅಭಿನಯದ ಮತ್ತೆ ‘ಮದುವೆ ಚಿತ್ರ’ ಯಾವಾಗ ಒಟಿಟಿಗೆ ಬರಲಿದೆ ಎಂದು ಪ್ರೇಕ್ಷಕರು ಕಾಯುತ್ತಿದ್ದರು. ಅದಕ್ಕೀಗ ಉತ್ತರ ಸಿಕ್ಕಿದೆ. ಈ ಸಿನಿಮಾದ ಒಟಿಟಿ ಎಂಟ್ರಿಗೆ ದಿನಾಂಕ ನಿಗದಿ ಆಗಿದೆ. ಜೂನ್ 23ರಂದು ಅಮೇಜಾನ್ ಪ್ರೈಮ್ ವಿಡಿಯೋ (Amazon Prime Video) ಮೂಲಕ ಈ ಸಿನಿಮಾದ ಸ್ಟ್ರೀಮಿಂಗ್ ಆರಂಭ ಆಗಲಿದೆ. ತೆಲುಗು ಹಾಗೂ ಕನ್ನಡದಲ್ಲಿ ಈ ಸಿನಿಮಾ ಮೂಡಿಬಂದಿತ್ತು. ಜೂನ್ 9ರಂದು ಬಿಡುಗಡೆ ಆದ ಈ ಸಿನಿಮಾಗೆ ವಿಮರ್ಶಕರಿಂದ ಮೆಚ್ಚುಗೆ ಸಿಕ್ಕಿತ್ತು. ಥಿಯೇಟರ್ನಲ್ಲಿ ‘ಮತ್ತೆ ಮದುವೆ’ (Matthe Maduve Movie) ನೋಡಿದ ಪ್ರೇಕ್ಷಕರಿಂದಲೂ ಪ್ರಶಂಸೆ ವ್ಯಕ್ತವಾಗಿತ್ತು. ತೆಲುಗಿನಲ್ಲಿ ಈ ಚಿತ್ರದ ಶೀರ್ಷಿಕೆ ‘ಮಳ್ಳಿ ಪೆಳ್ಳಿ’. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಮೇ 26ರಂದು ‘ಮಳ್ಳಿ ಪೆಳ್ಳಿ’ ಬಿಡುಗಡೆಯಾಗಿತ್ತು.
ತೆಲುಗಿನಲ್ಲಿ ‘ಮಳ್ಳಿ ಪೆಳ್ಳಿ’ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕ ಬೆನ್ನಲ್ಲೇ ಕನ್ನಡದಲ್ಲಿ ‘ಮತ್ತೆ ಮದುವೆ’ ಶೀರ್ಷಿಕೆಯಡಿ ಜೂನ್ 9ರಂದು ಈ ಸಿನಿಮಾವನ್ನು ಬಿಡುಗಡೆ ಮಾಡಲಾಯಿತು. ಕನ್ನಡ ಚಿತ್ರರಂಗದ ಕೆಲವು ಸೆಲೆಬ್ರಿಟಿಗಳಿಗಾಗಿ ಪ್ರೀಮಿಯರ್ ಪ್ರದರ್ಶನ ಕೂಡ ಏರ್ಪಡಿಸಲಾಗಿತ್ತು. ಸಿನಿಪ್ರಿಯರು ಮೆಚ್ಚಿದ್ದ ಈ ಸಿನಿಮಾ ಈಗ ಅಮೇಜಾನ್ ಪ್ರೈಮ್ ವಿಡಿಯೋ ಒಟಿಟಿ ಮೂಲಕ ಇನ್ನೂ ಹೆಚ್ಚಿನ ವೀಕ್ಷಕರನ್ನು ತಲುಪಲಿದೆ.
ನರೇಶ್ ಹಾಗೂ ಪವಿತ್ರಾ ಲೋಕೇಶ್ ಅವರ ರಿಯಲ್ ಲೈಫ್ನಲ್ಲಿ ನಡೆದ ಅನೇಕ ಘಟನೆಗಳಿಗೆ ‘ಮತ್ತೆ ಮದುವೆ’ ಸಿನಿಮಾ ಹತ್ತಿರವಾಗಿದೆ. ಈ ಸಿನಿಮಾ ಸೆಟ್ಟೇರುವುದಕ್ಕೂ ಮುನ್ನ ಈ ಸೆಲೆಬ್ರಿಟಿಗಳ ಖಾಸಗಿ ಬದುಕಿನಲ್ಲಿ ಸಖತ್ ಕಿರಿಕ್ ಆಗಿತ್ತು. ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಸುದ್ದಿಗೋಷ್ಠಿಯಲ್ಲಿ ಅನೇಕ ಆರೋಪಗಳನ್ನು ಹೊರಿಸಿದ್ದರು. ಈ ಎಲ್ಲ ಘಟನೆಗಳ ಹಿಂದಿನ ಅಸಲಿ ವಿಷಯಗಳೇನು ಎಂಬುದನ್ನು ‘ಮತ್ತೆ ಮದುವೆ’ ಸಿನಿಮಾದಲ್ಲಿ ತೋರಿಸಲಾಗಿದೆ. ಆ ಕಾರಣದಿಂದ ಈ ಸಿನಿಮಾ ಹೆಚ್ಚು ಚರ್ಚೆ ಆಯಿತು.
Matthe Maduve Review: ಅವರು ಯಾಕೆ ‘ಮತ್ತೆ ಮದುವೆ’ ಆದರು? ಉತ್ತರ, ಸಮರ್ಥನೆ, ಸ್ಪಷ್ಟನೆ ಎಲ್ಲವೂ ಇದೆ ಇಲ್ಲಿ
ನರೇಶ್ ಅವರ ತಾಯಿ ಹೆಸರು ವಿಜಯಾ ನಿರ್ಮಲಾ. ಟಾಲಿವುಡ್ನಲ್ಲಿ ನಟಿ ಹಾಗೂ ನಿರ್ದೇಶಕಿಯಾಗಿ ಅವರು ಸಾಕಷ್ಟು ಹೆಸರು ಮಾಡಿದ್ದರು. 1973ರಲ್ಲಿ ಅವರು ‘ಸೂಪರ್ ಸ್ಟಾರ್’ ಕೃಷ್ಣ ಜತೆಗೂಡಿ ‘ವಿಜಯ ಕೃಷ್ಣ ಮೂವೀಸ್’ ಸಂಸ್ಥೆ ಆರಂಭಿಸಿದ್ದರು. ಆ ಬ್ಯಾನರ್‌ಗೆ ಈಗ 50 ವರ್ಷ ತುಂಬಿದೆ. ಆ ಹಿನ್ನೆಲೆಯಲ್ಲಿ ಅದೇ ಸಂಸ್ಥೆಯ ಮೂಲಕ ‘ಮತ್ತೆ ಮದುವೆ’ ಸಿನಿಮಾವನ್ನು ನರೇಶ್ ನಿರ್ಮಾಣ ಮಾಡಿದ್ದರು. ಈ ಸಿನಿಮಾಗೆ ಎಂ. ಎಸ್. ರಾಜು ಅವರು ಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ. ನರೇಶ್ ಹಾಗೂ ಪವಿತ್ರಾ ಲೋಕೇಶ್ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ.
ಹಿರಿಯ ಕಲಾವಿದರಾದ ಜಯಸುಧಾ ಮತ್ತು ಶರತ್ ಬಾಬು ಅವರು ಈ ಸಿನಿಮಾದಲ್ಲಿನ ಎರಡು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ವನಿತಾ ವಿಜಯ್ಕುಮಾರ್, ಅನನ್ಯಾ ನಾಗೆಲ್ಲ, ರೋಶನ್, ರವಿವರ್ಮಾ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಮುಂತಾದವರು ‘ಮತ್ತೆ ಮದುವೆ’ ಚಿತ್ರದಲ್ಲಿ ನಟಿಸಿದ್ದಾರೆ. ರಿಯಲ್ ಲೈಫ್ ಜೋಡಿಯ ಫ್ಯಾಮಿಲಿ ಕಥಾಹಂದರದ ಸಿನಿಮಾವನ್ನು ಚಿತ್ರಮಂದಿರದಲ್ಲಿ ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ವೀಕ್ಷಿಸಬಹುದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.