ನಯನತಾರಾ ಕಳೆದೊಂದು ವಾರದಿಂದ ಸಖತ್ ಸುದ್ದಿಯಲ್ಲಿದ್ದಾರೆ. ಲೇಡಿ ಸೂಪರ್ ಸ್ಟಾರ್ ಎಂದೇ ಕರೆಸಿಕೊಳ್ಳುವ ನಯನತಾರಾ ಅವರ ಜೀವನದ ಬಗ್ಗೆ ಡಾಕ್ಯುಮೆಂಟರಿ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ. ಡಾಕ್ಯುಮೆಂಟರಿಯಲ್ಲಿ ಸಣ್ಣ ವಿಡಿಯೋ ತುಣುಕು ಬಳಕೆ ಮಾಡಿಕೊಂಡಿರುವ ಬಗ್ಗೆ ಧನುಶ್, ನಯನತಾರಾಗೆ ನೊಟೀಸ್ ನೀಡಿದ್ದು, ನೊಟೀಸ್ ನೀಡಿದ ಧನುಶ್ ಅನ್ನು ನಯನತಾರಾ, ನೀಚ ಎಂದು ಕರೆದಿದ್ದು ಭಾರಿ ದೊಡ್ಡ ಸುದ್ದಿಯಾಗಿದೆ. ಧನುಶ್ ಜೊತೆಗೆ ನಟಿಸಿರುವ ಕೆಲವು ನಟಿಯರು ಸಹ ನಯನತಾರಾಗೆ ಈ ವಿಷಯದಲ್ಲಿ ಬೆಂಬಲ ಸೂಚಿಸಿದ್ದಾರೆ.
ಡಾಕ್ಯುಮೆಂಟರಿ ವಿಷಯಕ್ಕೆ ಬರುವುದಾದರೆ ಡಾಕ್ಯುಮೆಂಟರಿಯಲ್ಲಿ ನಯನತಾರಾ ಅವರ ಖಾಸಗಿ ಹಾಗೂ ವೃತ್ತಿ ಜೀವನದ ಸಾಕಷ್ಟು ವಿಷಯಗಳಿವೆ. ತಮ್ಮ ಹಳೆಯ ಲವ್ ಲೈಫ್, ಅದರಿಂದ ಎದುರಿಸಿದ ಸಮಸ್ಯೆ. ವೃತ್ತಿ ಜೀವನದಲ್ಲಿ ಆದ ಏರು-ಪೇರುಗಳು. ಸಿನಿಮಾ ರಂಗವನ್ನೇ ತೊರೆಯಬೇಕು ಎಂದುಕೊಂಡಿದ್ದು ಹೀಗೆ ಹಲವು ವಿಷಯಗಳ ಬಗ್ಗೆ ನಯನತಾರಾ ಮಾತನಾಡಿದ್ದಾರೆ. ತಮ್ಮ ಪತಿ ವಿಘ್ನೇಷ್ ಬಗ್ಗೆಯೂ ಮಾತನಾಡಿರುವ ನಯನತಾರಾ, ತಮ್ಮ ಪತಿಯನ್ನು ನಾಯಿಗೆ ಹೋಲಿಸಿದ್ದ ಘಟನೆ ನೆನಪಿಸಿಕೊಂಡು ತುಸು ಭಾವುಕಗೊಂಡಿದ್ದಾರೆ.
ಡಾಕ್ಯುಮೆಂಟರಿಯಲ್ಲಿ ಮಾತನಾಡಿರುವ ನಯನತಾರಾ ಪತಿ ವಿಘ್ನೇಶ್ ಶಿವನ್, ‘ನಾವು ಪರಸ್ಪರ ಪ್ರೀತಿಸುತ್ತಿರುವ ವಿಷಯವನ್ನು ಬಹಿರಂಗಗೊಳಿಸಿದಾಗ ನನ್ನ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾದವು. ‘ಫೈವ್ ಸ್ಟಾರ್ ಹೋಟೆಲ್ ಬಿರಿಯಾನಿ ನಾಯಿಗೆ ಸಿಕ್ಕಿದೆ’ ಎಂಬ ಮೀಮ್ಗಳು ಹರಿದಾಡಿದವು. ಅದನ್ನೆಲ್ಲ ನೋಡಿದಾಗ ಸಾಕಷ್ಟು ನೋವಾಗುತ್ತಿತ್ತು’ ಎಂದಿದ್ದಾರೆ. ‘ಬ್ಯೂಟಿ, ಬೀಸ್ಟ್ ಅನ್ನು ಆಯ್ಕೆ ಮಾಡಿಕೊಂಡರೆ ಯಾರೇನು ಮಾಡಲಾಗುತ್ತದೆ’ ಎಂಬ ಮೀಮ್ಗಳು ಸಹ ಹರಿದಾಡಿದವು. ನನ್ನನ್ನು ರಾಕ್ಷಸನಂತೆಯೂ ಚಿತ್ರಿಸಲಾಗಿತ್ತು, ಬಸ್ ಕಂಡಕ್ಟರ್ ಒಬ್ಬ ಸೂಪರ್ ಸ್ಟಾರ್ ಆಗಿರುವಾಗ ಇಲ್ಲಿ ಎಲ್ಲವೂ ಸಾಧ್ಯವಿದೆ’ ಎಂದು ವಿಘ್ನೇಷ್ ಹೇಳಿದರು.
ಇದನ್ನೂ ಓದಿ:ಧನುಷ್ಗೆ ಟಾಂಗ್ ಕೊಡಲು ಶಾರುಖ್, ಚಿರಂಜೀವಿಗೆ ಧನ್ಯವಾದ ಹೇಳಿದ ನಯನತಾರಾ
ಮಾತು ಮುಂದುವರೆಸಿ, ‘ನಮಗೆ ಬದುಕುವುದು ಸುಲಭದ ಕೆಲಸವಲ್ಲ. ಎಲ್ಲಿಗೂ ಹೋಗುವಂತಿಲ್ಲ, ಯಾರೊಂದಿಗೂ ಮಾತನಾಡುವಂತಿಲ್ಲ ಎಲ್ಲವೂ ಸುದ್ದಿಯಾಗುತ್ತದೆ. ತಿರುಪತಿಯಲ್ಲಿ ಮದುವೆ ಆಗೋಣ ಎಂದುಕೊಂಡಾಗಲೂ ಸಹ ಅದಕ್ಕೂ ನಿರಾಕರಣೆ ಎದುರಾಗಿತ್ತು. ಆದರೂ ನಾವು ಕಷ್ಟಪಟ್ಟು ಅದನ್ನೆಲ್ಲ ದಾಟಿಕೊಂಡು ಬರುತ್ತಿದ್ದೇವೆ’ ಎಂದಿದ್ದಾರೆ.
ಇದೇ ವಿಷಯವಾಗಿ ತುಸು ಭಾವುಕವಾಗಿ ಮಾತನಾಡಿರುವ ನಯನತಾರಾ, ‘ಆ ವಿಷಯ (ನಾಯಿಗೆ ಹೋಲಿಸಿದ್ದು) ನನಗೆ ತೀವ್ರ ಬೇಸರ ತರಿಸಿತ್ತು. ಬಹುಷಃ ಇವನ (ವಿಘ್ನೇಷ್) ಜೀವನದಲ್ಲಿ ನಾನು ಇಲ್ಲದೇ ಹೋಗಿದ್ದಿದ್ದರೆ, ಇವನ ಜೀವನ ಇನ್ನಷ್ಟು ಸುಲಭವಾಗಿ ಬಹುಷಃ ಸಂತೋಷವಾಗಿಯೂ ಇರುತ್ತಿತ್ತೋ ಏನೋ’ ಎಂದಿದ್ದಾರೆ. ನಯನತಾರಾ ಹಾಗೂ ವಿಘ್ನೇಷ್ ಇಬ್ಬರೂ 2022 ರಲ್ಲಿ ವಿವಾಹವಾದರು. ಬಾಡಿಗೆ ತಾಯ್ತನದ ಮೂಲಕ ಅವಳ-ಜವಳಿ ಮಕ್ಕಳನ್ನು ಹೊಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ