ಒಟಿಟಿ, ಟಿವಿಗಳ ಧೋರಣೆಯಿಂದ ಬೇಸತ್ತು, ಯೂಟ್ಯೂಬ್​ನಲ್ಲಿ ಸಿನಿಮಾ ಬಿಡುಗಡೆಗೆ ಮುಂದಾದ ಪ್ರಶಸ್ತಿ ವಿಜೇತ ನಿರ್ದೇಶಕ

|

Updated on: Aug 13, 2024 | 5:29 PM

ಕನ್ನಡ ಸಿನಿಮಾಗಳ ಬಗ್ಗೆ ಒಟಿಟಿಗಳು ತೋರುತ್ತಿರುವ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತು, ಪ್ರತಿಭಾವಂತ ನಿರ್ದೇಶಕ ಪೃಥ್ವಿ ಕೊಣನೂರು ತಮ್ಮ ಪ್ರಶಸ್ತಿ ವಿಜೇತ ಸಿನಿಮಾಗಳನ್ನು ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಆಗಸ್ಟ್ 15 ರಂದು ಯೂಟ್ಯೂಬ್​ನಲ್ಲಿ ಸಿನಿಮಾಗಳು ಬಿಡುಗಡೆ ಆಗಲಿವೆ.

ಒಟಿಟಿ, ಟಿವಿಗಳ ಧೋರಣೆಯಿಂದ ಬೇಸತ್ತು, ಯೂಟ್ಯೂಬ್​ನಲ್ಲಿ ಸಿನಿಮಾ ಬಿಡುಗಡೆಗೆ ಮುಂದಾದ ಪ್ರಶಸ್ತಿ ವಿಜೇತ ನಿರ್ದೇಶಕ
Follow us on

‘ಕನ್ನಡ ಚಿತ್ರರಂಗದಲ್ಲಿ ಹೆಸರಾಂತ ನಿರ್ದೇಶಕರು ಎಂದು ಯಾರೆಲ್ಲ ಇದ್ದಾರೆಯೋ ಅವರೆಲ್ಲರಿಗಿಂತಲೂ ಒಳ್ಳೆಯ ನಿರ್ದೇಶಕ ಪೃಥ್ವಿ ಕೊಣನೂರು’ ಎಂದು ಲೂಸಿಯಾ ನಿರ್ದೇಶಕ ಪವನ್ ಕುಮಾರ್ ಇತ್ತೀಚೆಗೆ ಹೇಳಿದ್ದರು. ಅಂಥಹಾ ಪ್ರತಿಭಾವಂತ ಕನ್ನಡ ನಿರ್ದೇಶಕರ ಸಿನಿಮಾಗಳನ್ನು ಯಾವ ಒಟಿಟಿ, ಯಾವ ಟಿವಿ ಚಾನೆಲ್ ಸಹ ತೆಗೆದುಕೊಳ್ಳುತ್ತಿಲ್ಲ. ಪೃಥ್ವಿ ಅವರ ಸಿನಿಮಾಗಳು ಹಲವು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಗಿಟ್ಟಿಸಿವೆ ಆದರೆ ತಮ್ಮ ನೆಲದ ಪ್ರೇಕ್ಷಕರಿಗೆ ತಮ್ಮ ಸಿನಿಮಾಗಳನ್ನು ತಲುಪಿಸಲು ಪೃಥ್ವಿ ಅವರಿಗೆ ಆಗುತ್ತಿಲ್ಲ. ಈ ಒಟಿಟಿ, ಟಿವಿಗಳ ಕನ್ನಡ ಸಿನಿಮಾ ವಿರೋಧಿ ಧೋರಣೆಯಿಂದ ಬೇಸತ್ತು ಇದೀಗ ತಮ್ಮ ಸಿನಿಮಾಗಳನ್ನು ಯೂಟ್ಯೂಬ್​ಗೆ ಅಪ್​ಲೋಡ್​ ಮಾಡಲು ಮುಂದಾಗಿದ್ದಾರೆ ಪೃಥ್ವಿ ಕೋಣನೂರು.

ಈ ಬಗ್ಗೆ ಮಾತನಾಡಿರುವ ಪೃಥ್ವಿ, ‘ಕನ್ನಡ ಸಿನಿಮಾಗಳ ಬಗ್ಗೆ ಒಟಿಟಿಗಳ ಧೋರಣೆ ಏನು ಎಂಬುದು ನನಗೆ ಅರ್ಥವಾಗುತ್ತಿಲ್ಲ. ನಮ್ಮ ಸಿನಿಮಾಗಳನ್ನು ನೋಡದೆಯೇ ಸಿನಿಮಾಗಳನ್ನು ಕೊಳ್ಳಲು ಅಥವಾ ಅವರ ವೇದಿಕೆಯಲ್ಲಿ ಪ್ರದರ್ಶಿಸಲು ನಿರಾಕರಿಸುತ್ತಿದ್ದಾರೆ. ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದು, ವಿಮರ್ಶಕರಿಂದ ಮೆಚ್ಚುಗೆ ಪಡೆದು, ಬಿಡುಗಡೆ ಆದಾಗ ನೋಡಿದ ಪ್ರೇಕ್ಷಕರಿಂದಲೂ ಮೆಚ್ಚುಗೆ ಪಡೆದ ಸಿನಿಮಾವನ್ನೂ ಸಹ ಒಟಿಟಿಗಳು ಕನಿಷ್ಠ ನೋಡಲು ಸಹ ನಿರಾಕರಿಸುತ್ತಿವೆ. ಕನ್ನಡಿಗರಿಗೆ ಅಭಿರುಚಿ ಇಲ್ಲ ಎಂಬುದು ಅವರ ಭಾವನೆಯಾ? ಅಥವಾ ಗಂಭೀರ ವಿಷಯವನ್ನು ಕನ್ನಡಿಗರು ಹ್ಯಾಂಡಲ್ ಮಾಡುವ ಶಕ್ತಿ ಇಲ್ಲ ಎಂಬುದು ಅವರ ಚಿಂತನೆಯಾ? ಅರ್ಥವಾಗುತ್ತಿಲ್ಲ’ ಎಂದಿದ್ದಾರೆ ಪೃಥ್ವಿ.

‘ಒಟಿಟಿಗಳ ಈ ಧೋರಣೆಯಿಂದ ಕಳೆದ ಎರಡು ಮೂರು ವರ್ಷಗಳಲ್ಲಿ ಹಲವು ಒಳ್ಳೆಯ ಕನ್ನಡ ಸಿನಿಮಾಗಳು ಪ್ರೇಕ್ಷಕರನ್ನು ತಲುಪಿಲ್ಲ. ಇನ್ನು ಟಿವಿ ಚಾನೆಲ್​ಗಳ ಧೋರಣೆಯೂ ಹೀಗೆಯೇ ಆಗಿದೆ. ಅವರಂತೂ ಓಪನ್ ಆಗಿಯೇ ಹೇಳುತ್ತಾರೆ. ನಮ್ಮ ಪ್ರೇಕ್ಷಕರು, ಗ್ರಾಮೀಣ ಭಾಗವದರು, ಅನಕ್ಷರಸ್ಥರು ಮತ್ತು ವಯಸ್ಸಾದವರು. ಅಂಥಹವರು ನೋಡುವ ಸಿನಿಮಾಗಳನ್ನು ಮಾತ್ರವೇ ಖರೀದಿ ಮಾಡುತ್ತೇವೆ ಎನ್ನುತ್ತಾರೆ. ಗ್ರಾಮೀಣ ಭಾಗದವರು ಗಂಭೀರ ಪ್ರೇಕ್ಷಕರಲ್ಲ, ಅನಕ್ಷರಸ್ಥರು ಮಾತ್ರ ಟಿವಿ ನೋಡುತ್ತಾರೆ ಎಂದು ಅವರು ನಿರ್ಧರಿಸಿಬಿಟ್ಟಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಪೃಥ್ವಿ.

ಇದನ್ನೂ ಓದಿ:‘ಕಲ್ಕಿ 2898 ಎಡಿ’ ಒಟಿಟಿ ರಿಲೀಸ್ ಬಗ್ಗೆ ಫ್ಯಾನ್ಸ್​ಗೆ ಗುಡ್ ನ್ಯೂಸ್

ಮುಂದುವರೆದು ಮಾತನಾಡಿರುವ ಪೃಥ್ವಿ, ತಮ್ಮ ಸಿನಿಮಾಗಳನ್ನು ಜನರಿಗೆ ತಲುಪಿಸಲು ಹೊಸ ಹಾದಿಯನ್ನು ಹುಡುಕಿಕೊಂಡಿದ್ದಾರೆ, ಅದುವೇ ಯೂಟ್ಯೂಬ್. ತಮ್ಮ ಸಿನಿಮಾಗಳನ್ನು ಪೃಥ್ವಿ ಅವರು, ತಮ್ಮ ಕೊಣನೂರು ಪ್ರೊಡಕ್ಷನ್ಸ್​ (@konanur2279) ಯೂಟ್ಯೂಬ್ ಚಾನೆಲ್​ನಲ್ಲಿ ತಮ್ಮ ಸಿನಿಮಾಗಳನ್ನು ಅಪ್​ಲೋಡ್ ಮಾಡಲಿದ್ದಾರೆ. ಸಿನಿಮಾಗಳನ್ನು ಅಲ್ಲಿ ಉಚಿತವಾಗಿ ನೋಡಬಹುದಾಗಿದೆ. ಸಿನಿಮಾದ ಜೊತೆಗೆ ಒಂದು ಕ್ಯುಆರ್ ಕೋಡ್ ಅನ್ನು ಸಹ ನೀಡಲಿದ್ದು, ಸಿನಿಮಾ ನೋಡಿದವರಿಗೆ ಸಿನಿಮಾ ಇಷ್ಟವಾದರೆ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡಬಹುದಾಗಿದೆ. ಆ ಮೂಲಕ ಪೃಥ್ವಿ ಅವರು ಇನ್ನಷ್ಟು ಸಿನಿಮಾಗಳನ್ನು ತೆಗೆಯಲು ಸ್ಪೂರ್ತಿ ನೀಡಬಹುದಾಗಿದೆ. ಪೃಥ್ವಿ ನಿರ್ದೇಶನ ಪ್ರಶಸ್ತಿ ವಿಜೇತ ಸಿನಿಮಾಗಳಾದ ‘ರೈಲ್ವೆ ಚಿಲ್ಡ್ರನ್’, ‘ಪಿಂಕಿ ಎಲ್ಲಿ’, ‘ಹದಿನೇಳೆಂಟು’ ಸಿನಿಮಾಗಳನ್ನು ಆಗಸ್ಟ್ 15 ರಂದು ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ