ನೆಟ್​ಫ್ಲಿಕ್ಸ್​ನಲ್ಲಿ ದಾಖಲೆ ಬರೆದ ವಿಜಯ್ ಸೇತುಪತಿಯ ‘ಮಹಾರಾಜ’

Maharaja: ವಿಜಯ್ ಸೇತುಪತಿ ನಟಿಸಿರುವ ‘ಮಹಾರಾಜ’ ಸಿನಿಮಾ ಕಡಿಮೆ ಬಜೆಟ್​ನಲ್ಲಿ ನಿರ್ಮಾಣವಾಗಿತ್ತು, ಚಿತ್ರಮಂದಿರದಲ್ಲಿ ದಾಖಲೆ ಗಳಿಕೆ ಕಂಡ ಈ ಸಿನಿಮಾ ಈಗ ಒಟಿಟಿಯಲ್ಲಿಯೂ ದಾಖಲೆಗಳನ್ನು ಬರೆದಿದೆ.

ನೆಟ್​ಫ್ಲಿಕ್ಸ್​ನಲ್ಲಿ ದಾಖಲೆ ಬರೆದ ವಿಜಯ್ ಸೇತುಪತಿಯ ‘ಮಹಾರಾಜ’
Follow us
ಮಂಜುನಾಥ ಸಿ.
|

Updated on: Aug 12, 2024 | 5:31 PM

ಭಾರಿ ಬಜೆಟ್​ನ ಸ್ಟಾರ್, ಸೂಪರ್ ಸ್ಟಾರ್ ನಟರ ಸಿನಿಮಾಗಳು ಮಾತ್ರವೇ ಚಿತ್ರಮಂದಿರಗಳಲ್ಲಿ ದೊಡ್ಡ ಯಶಸ್ಸು ಗಳಿಸುತ್ತಿವೆ. ಆದರೆ ಒಳ್ಳೆಯ ಸಿನಿಮಾಗಳು ಎಲ್ಲಿಂದಾದರೂ, ಹೇಗಿಂದಾದರೂ ಪ್ರೇಕ್ಷಕರನ್ನು ಹುಡುಕಿಕೊಳ್ಳುತ್ತದೆ. ಒಳ್ಳೆಯ ಸಿನಿಮಾಗಳು, ಸಿನಿಮಾ ಪ್ರೇಮಿಗಳನ್ನು ಒಂದಲ್ಲ ಒಂದು ರೀತಿಯಲ್ಲಿ ತಲುಪಿಯೇ ತೀರುತ್ತವೆ. ಇತ್ತೀಚೆಗೆ ವಿಜಯ್ ಸೇತುಪತಿ ನಟನೆಯ ‘ಮಹಾರಾಜ’ ಸಿನಿಮಾ ಜೂನ್ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸದ್ದು ಮಾಡಿತ್ತು. ಆದರೆ ತಮಿಳುನಾಡು ರಾಜ್ಯದ ಹೊರತಾಗಿ ಬೇರೆ ರಾಜ್ಯಗಳ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಆದರೆ ಸಿನಿಮಾ ಒಟಿಟಿಗೆ ಬಂದಮೇಲೆ ದಾಖಲೆಗಳನ್ನೇ ಬರೆದಿದೆ ‘ಮಹಾರಾಜ’.

ಜೂನ್ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ‘ಮಹಾರಾಜ’ ಸಿನಿಮಾ ಜುಲೈ 14 ರಂದು ನೆಟ್​ಫ್ಲಿಕ್ಸ್​ನಲ್ಲಿ ತೆರೆಗೆ ಬಂತು. ಅದಕ್ಕೆ ಮುನ್ನ ಚಿತ್ರಮಂದಿರದಲ್ಲಿ ಒಳ್ಳೆಯ ಪ್ರದರ್ಶನವನ್ನೇ ಕಂಡಿದ್ದ ಈ ಸಿನಿಮಾ, ಸುಮಾರು 100 ಕೋಟಿ ಕಲೆಕ್ಷನ್ ಅನ್ನು ಸಹ ಮಾಡಿತ್ತು. ಆದರೆ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆದ ಬಳಿಕ ಹೊಸ ದಾಖಲೆಗಳನ್ನೇ ಬರೆಯಿತು ಈ ಸಿನಿಮಾ. ಗಡಿಗಳನ್ನು ದಾಟಿ ಕೋಟ್ಯಂತರ ಪ್ರೇಕ್ಷಕರನ್ನು ತಲುಪಿದ ‘ಮಹರಾಜ’ ಸಿನಿಮಾ ಸಿನಿಮಾ ಪ್ರೇಮಿಗಳ ಹೃದಯ ಸೂರೆಗೊಂಡಿದೆ.

ಇದನ್ನೂ ಓದಿ:ವಿಜಯ್ ಸೇತುಪತಿ ನಟನೆಯ 50ನೇ ಸಿನಿಮಾ ‘ಮಹಾರಾಜ’ ಟ್ರೇಲರ್; ಮತ್ತೆ ಡಿಫರೆಂಟ್ ಪಾತ್ರ

ಈ ವರ್ಷದಲ್ಲಿ ಅತಿ ಹೆಚ್ಚು ಮಂದಿಯಿಂದ ವೀಕ್ಷಣೆಗೆ ಒಳಗಾದ ಇಂಗ್ಲೀಷ್ ಹೊರತಾದ ಸಿನಿಮಾ ಎಂಬ ದಾಖಲೆ ‘ಮಹಾರಾಜ’ ಸಿನಿಮಾ ಪಾಲಾಗಿದೆ. ಮಾತ್ರವಲ್ಲದೆ ಭಾರತದಲ್ಲಿ ಅತಿ ಹೆಚ್ಚು ಮಂದಿ ವೀಕ್ಷಿಸಿದ ಸಿನಿಮಾ ಎಂಬ ಖ್ಯಾತಿಯೂ ಮಹಾರಾಜ ಸಿನಿಮಾದ್ದಾಗಿದೆ. ಈ ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆದಾಗಿನಿಂದ ಈಗಿನ ವರೆಗೆ ಟಾಪ್ 10 ರ ಪಟ್ಟಿಯಿಂದ ಕೆಳಗೆ ಇಳಿದೇ ಇಲ್ಲ ಎಂಬುದು ವಿಶೇಷ.

‘ಮಹಾರಾಜ’ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆದ ಮೊದಲ ವಾರದಲ್ಲಿಯೇ 75 ಲಕ್ಷ ಗಂಟೆಗಳ ಕಾಲ ವೀಕ್ಷಣೆಗೆ ಒಳಗಾಗಿತ್ತು. ಅದಾದ ಬಳಿಕ 1.5 ಕೋಟಿ ಗಂಟೆಗಳ ಕಾಲ ವೀಕ್ಷಣೆಗೆ ಒಳಗಾಗಿ ದಾಖಲೆ ಬರೆಯಿತು. ‘ಮಹಾರಾಜ’ ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗುವವರೆಗೆ ‘ಲಾಪತಾ ಲೇಡೀಸ್’ ಸಿನಿಮಾ ಈ ವರ್ಷ ನೆಟ್​ಫ್ಲಿಕ್ಸ್​ನಲ್ಲಿ ಅತಿ ಹೆಚ್ಚು ನೋಡಲಾದ ಭಾರತೀಯ ಸಿನಿಮಾ ಎಂದೆನಿಸಿಕೊಂಡಿತ್ತು. ಆದರೆ ‘ಲಾಪತಾ ಲೇಡೀಸ್’ ದಾಖಲೆಯನ್ನು ಅಳಿಸಿ ಹಾಕಿತು, ‘ಮಹಾರಾಜ’.

ಕಳೆದುಹೋದ ಕಸದ ಬುಟ್ಟಿಗಾಗಿ ಹುಡುಕಾಡುವ ಕ್ಷೌರಿಕನೊಬ್ಬನ ಕತೆ ‘ಮಹಾರಾಜ’. ಸಿನಿಮಾದಲ್ಲಿ ವಿಜಯ್ ಸೇತುಪತಿ, ಬಾಲಿವುಡ್​ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್, ಮಮತಾ ಮೋಹನ್​ದಾಸ್ ಇನ್ನೂ ಕೆಲವು ಅತ್ಯುತ್ತಮ ನಟರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ