ದಾಖಲೆ ಮೊತ್ತಕ್ಕೆ ಒಟಿಟಿ ಹಕ್ಕು ಮಾರಿದ ‘ಪುಷ್ಪ 2’, ಖರೀದಿಸಿದ್ದು ಯಾರು?

|

Updated on: Sep 01, 2024 | 7:09 AM

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಭಾರತದ ಅತ್ಯಂತ ನಿರೀಕ್ಷೆಯ ಸಿನಿಮಾ. ಸಿನಿಮಾ ಪೂರ್ಣವಾಗಿ ಬಿಡುಗಡೆಗೆ ರೆಡಿಯಾಗುವ ಮುನ್ನವೇ ಸಿನಿಮಾದ ಹಕ್ಕುಗಳು ಭಾರಿ ಮೊತ್ತಕ್ಕೆ ಮಾರಾಟವಾಗುತ್ತಿವೆ. ಇದೀಗ ಸಿನಿಮಾದ ಒಟಿಟಿ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ.

ದಾಖಲೆ ಮೊತ್ತಕ್ಕೆ ಒಟಿಟಿ ಹಕ್ಕು ಮಾರಿದ ‘ಪುಷ್ಪ 2’, ಖರೀದಿಸಿದ್ದು ಯಾರು?
Follow us on

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಭಾರತದ ಅತ್ಯಂತ ನಿರೀಕ್ಷೆಯ ಸಿನಿಮಾ. 2021 ರಲ್ಲಿ ಬಿಡುಗಡೆ ಆಗಿದ್ದ ಮೊದಲ ಭಾಗ ಕೋವಿಡ್ ಬಳಿಕ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಶ್ರೀಕಾರ ಹಾಕಿತ್ತು. ‘ಪುಷ್ಪ’ ಸಿನಿಮಾದ ಪ್ಯಾನ್ ಇಂಡಿಯಾ ಯಶಸ್ಸಿನಿಂದ ಸ್ಪೂರ್ತಿ ಪಡೆದು ಆ ಬಳಿಕ ಬಂದ ಹಲವು ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಬಿಡುಗಡೆ ಆಗಿ ಭಾರಿ ದೊಡ್ಡ ಗಳಿಕೆ ಮಾಡಿದ್ದವು. ಇದೀಗ ಬರೋಬ್ಬರಿ ಎರಡು ವರ್ಷಗಳ ಚಿತ್ತೀಕರಣದ ಬಳಿಕ ಇದೀಗ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಜೊತೆಗೆ ಸಿನಿಮಾದ ಪ್ರಚಾರಕ್ಕೆ ಮುನ್ನ ಹಕ್ಕುಗಳ ಮಾರಾಟ ಆರಂಭವಾಗಿದೆ.

‘ಪುಷ್ಪ 2’ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ. ಇದರ ನಡುವೆ ಸಿನಿಮಾದ ಮಾರಾಟ ಕಾರ್ಯಕ್ಕೂ ಚಾಲನೆ ದೊರೆತಿದ್ದು, ಸಿನಿಮಾದ ಒಟಿಟಿ ಹಕ್ಕುಗಳನ್ನು ಭಾರಿ ದೊಡ್ಡ ಮೊತ್ತಕ್ಕೆ ‘ಪುಷ್ಪ 2’ ಸಿನಿಮಾದ ನಿರ್ಮಾಣ ಸಂಸ್ಥೆಯಾಗಿರುವ ಮೈತ್ರಿ ಮೂವಿ ಮೇಕರ್ಸ್ ಮಾರಾಟ ಮಾಡಿದೆ. ಈ ಹಿಂದೆ ‘ಪುಷ್ಪ’ ಸಿನಿಮಾವನ್ನು ಅಮೆಜಾನ್ ಪ್ರೈಂ ಒಟಿಟಿಗೆ ಮಾರಾಟ ಮಾಡಲಾಗಿತ್ತು. ಆದರೆ ಈಗ ಇನ್ನೂ ದೊಡ್ಡ ಒಟಿಟಿಗೆ ಮಾರಾಟ ಮಾಡಲಾಗಿದೆ.

‘ಪುಷ್ಪ 2’ ಸಿನಿಮಾದ ಒಟಿಟಿ ಬಿಡುಗಡೆ ಹಕ್ಕನ್ನು ನೆಟ್​ಫ್ಲಿಕ್ಸ್​ಗೆ ಮಾರಾಟ ಮಾಡಲಾಗಿದೆ. ನೆಟ್​ಫ್ಲಿಕ್ಸ್​ಗೆ ‘ಪುಷ್ಪ 2’ ಸಿನಿಮಾದ ಎಲ್ಲ ಭಾಷೆಯ ಹಕ್ಕನ್ನು ಮಾರಾಟ ಮಾಡಲಾಗಿದೆ. ಇತ್ತೀಚೆಗೆ ಟ್ರೆಂಡ್ ಒಂದು ಸೃಷ್ಟಿಯಾಗಿದ್ದು, ದೊಡ್ಡ ಸಿನಿಮಾಗಳು ತಮ್ಮ ಸಿನಿಮಾಗಳನ್ನು ನೆಟ್​ಫ್ಲಿಕ್ಸ್​ ಹಾಗೂ ಅಮೆಜಾನ್ ಎರಡೂ ವೇದಿಕೆಗೆ ಮಾರಾಟ ಮಾಡುತ್ತಿದ್ದಾರೆ. ಆದರೆ ‘ಪುಷ್ಪ 2’ ಸಿನಿಮಾವನ್ನು ಹಾಗೆ ಮಾಡಿಲ್ಲ ಬದಲಿಗೆ ಕೇವಲ ನೆಟ್​ಫ್ಲಿಕ್ಸ್​ಗೆ ಮಾತ್ರವೇ ಮಾರಾಟ ಮಾಡಲಾಗಿದೆ.

ಇದನ್ನೂ ಓದಿ:‘ಪುಷ್ಪ 2’ ಬಗ್ಗೆ ಅಪ್ಡೇಟ್ ಕೊಟ್ಟ ನಿರ್ಮಾಪಕ: ರಿಲೀಸ್ ಯಾವಾಗ?

ಅಂದಹಾಗೆ ‘ಪುಷ್ಪ 2’ ಸಿನಿಮಾದ ಒಟಿಟಿ ಹಕ್ಕು ಖರೀದಿ ಮಾಡಲು ನೆಟ್​ಫ್ಲಿಕ್ಸ್​ ಬರೋಬ್ಬರಿ 270 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಇತ್ತೀಚೆಗಿನ ಇನ್ಯಾವುದೇ ಸಿನಿಮಾಕ್ಕೆ ನೀಡಲಾಗಿಲ್ಲ ಎನ್ನಲಾಗುತ್ತಿದೆ. ಇತ್ತೀಚೆಗೆ ಒಟಿಟಿಗೆ ಬಂದ ‘ಕಲ್ಕಿ 2898 ಎಡಿ’ ಸಿನಿಮಾದ ಹಕ್ಕುಗಳಿಗೂ ಸಹ ಇಷ್ಟು ದೊಡ್ಡ ಮೊತ್ತವನ್ನು ನೀಡಲಾಗಿಲ್ಲ ಎನ್ನಲಾಗುತ್ತಿದೆ. ‘ಪುಷ್ಪ’ ಸಿನಿಮಾ 2021 ರಲ್ಲಿ ಸುಮಾರು 50 ಕೋಟಿ ಮೊತ್ತಕ್ಕೆ ಒಟಿಟಿಗೆ ಮಾರಾಟವಾಗಿತ್ತು, ಆದರೆ ‘ಪುಷ್ಪ 2’ 270 ಕೋಟಿ ರೂಪಾಯಿಗೆ ಮಾರಾಟವಾಗಿದೆ.

‘ಪುಷ್ಪ 2’ ಸಿನಿಮಾ ಆಗಸ್ಟ್ 15 ಕ್ಕೆ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಆ ಬಳಿಕ ಸಿನಿಮಾ, ದಸರಾ ಹಬ್ಬಕ್ಕೆ ಬಿಡುಗಡೆ ಆಗಲಿದೆ ಎನ್ನಲಾಯ್ತು. ಆದರೆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದು ಸಿನಿಮಾದ ಬಿಡುಗಡೆ ಡಿಸೆಂಬರ್​ನಲ್ಲಿ ಆಗಲಿದೆ. ನಿರ್ಮಾಪಕರೇ ಹೇಳಿರುವಂತೆ ಸೆಪ್ಟೆಂಬರ್ ತಿಂಗಳಲ್ಲಿ ಸಿನಿಮಾದ ಮೊದಲಾರ್ಧದ ಎಡಿಟ್ ರೆಡಿಯಾಗಲಿದೆ. ನವೆಂಬರ್​ನಲ್ಲಿ ಎರಡನೇ ಅರ್ಧದ ಎಡಿಟ್ ರೆಡಿಯಾಗಲಿದೆ. ನವೆಂಬರ್ ತಿಂಗಳಲ್ಲಿ ಕೆಲ ಫೈನ್ ಟ್ಯೂನಿಂಗ್ ನಡೆಯಲಿದ್ದು, ಅದೇ ತಿಂಗಳ ಅಂತ್ಯದಲ್ಲಿ ಸೆನ್ಸಾರ್ ಪ್ರಮಾಣ ಪತ್ರ ದೊರಕಲಿದೆ. ಅದಾದ ಬಳಿಕ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ