ದಿನದಿಂದ ದಿನಕ್ಕೆ ಚಿತ್ರರಂಗದ ವಹಿವಾಟು ದೊಡ್ಡದಾಗುತ್ತಿದೆ. ಒಟಿಟಿ ಪ್ಲಾಟ್ಫಾರ್ಮ್ (OTT Platform) ಪ್ರಭಾವ ಹೆಚ್ಚಿದ ಬಳಿಕ ಸಿನಿಮಾಗಳ ಬಿಸ್ನೆಸ್ ಸೂತ್ರವೇ ಬದಲಾಯಿತು. ಚಿತ್ರಮಂದಿರದಲ್ಲಿ ಬರುವ ಆದಾಯದ ಜೊತೆಗೆ ಒಟಿಟಿಯಿಂದಲೂ ಭರ್ಜರಿ ಕಮಾಯಿ ಮಾಡಬಹುದು ಎಂಬ ಭರವಸೆ ಮೂಡಿದೆ. ಬಹುತೇಕ ಎಲ್ಲ ಸಿನಿಮಾಗಳ ನಿರ್ಮಾಪಕರು ಒಟಿಟಿ ಮಾರುಕಟ್ಟೆಯಲ್ಲಿ ಸಿಗುವ ಲಾಭವನ್ನು ಗಮನದಲ್ಲಿ ಇಟ್ಟುಕೊಂಡೇ ಸಿನಿಮಾ ಮಾಡುತ್ತಿದ್ದಾರೆ. ಅಮೇಜಾನ್ ಪ್ರೈಮ್ ವಿಡಿಯೋ, ನೆಟ್ಫ್ಲಿಕ್ಸ್, ಡಿಸ್ನಿ ಪ್ಲಸ್ ಹಾಟ್ ಸ್ಟಾರ್, ಜೀ5, ಸೋನಿ ಲಿವ್, ವೂಟ್, ಎಂಎಕ್ಸ್ ಪ್ಲೇಯರ್, ಆಲ್ಟ್ ಬಾಲಾಜಿ.. ಸೇರಿದಂತೆ ಹತ್ತು ಹಲವು ಒಟಿಟಿ ಸಂಸ್ಥೆಗಳು ಸಕ್ರಿಯವಾಗಿವೆ. ಈ ಎಲ್ಲ ಸಂಸ್ಥೆಗಳ ನಡುವೆ ಪೈಪೋಟಿ ಜೋರಾಗಿದೆ. ಬಹುನಿರೀಕ್ಷಿತ ಸಿನಿಮಾಗಳ ಪ್ರಸಾರ ಹಕ್ಕುಗಳನ್ನು ಖರೀದಿಸಲು ಟಫ್ ಸ್ಪರ್ಧೆ ಏರ್ಪಟ್ಟಿದೆ. ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ (Pushpa 2) ಸಿನಿಮಾದ ಒಟಿಟಿ ಹಕ್ಕುಗಳನ್ನು ಕೊಂಡುಕೊಳ್ಳಲು ಅಮೇಜಾನ್ ಪ್ರೈಂ ವಿಡಿಯೋ ಮತ್ತು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಸಂಸ್ಥೆಗಳು ಭಾರಿ ಪೈಪೋಟಿ ನಡೆಸುತ್ತಿವೆ ಎಂಬ ಸುದ್ದಿ ಕೇಳಿಬಂದಿದೆ.
ಸುಕುಮಾರ್ ನಿರ್ದೇಶನದ ‘ಪುಷ್ಪ’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಜೋಡಿಯಾಗಿ ನಟಿಸಿದರು. ಡಾಲಿ ಧನಂಜಯ, ರಾವ್ ರಮೇಶ್, ಫಹಾದ್ ಫಾಸಿಲ್ ಮುಂತಾದ ಘಟಾನುಘಟಿ ಕಲಾವಿದರು ಅದರಲ್ಲಿ ಅಭಿನಯಿಸಿದರು. ಪರಿಣಾಮವಾಗಿ ಬಾಕ್ಸ್ ಆಫೀಸ್ನಲ್ಲಿ ನೂರಾರು ಕೋಟಿ ರೂಪಾಯಿ ಕಮಾಯಿ ಆಯಿತು. ಬಳಿಕ ಆ ಚಿತ್ರ ‘ಅಮೇಜಾನ್ ಪ್ರೈಂ ವಿಡಿಯೋ’ ಮೂಲಕ ಒಟಿಟಿ ಜಗತ್ತಿಗೆ ಕಾಲಿಟ್ಟು ಅಲ್ಲಿಯೂ ಜನರನ್ನು ರಂಜಿಸಿತು. ಈಗ ‘ಪುಷ್ಪ 2’ ಸಿನಿಮಾದ ಕೆಲಸಗಳು ಚಾಲ್ತಿಯಲ್ಲಿವೆ. ಈ ಚಿತ್ರದ ಬಿಡುಗಡೆಗೆ ಇನ್ನೂ ಸಾಕಷ್ಟು ಸಮಯ ಇದೆ. ಅಷ್ಟರಲ್ಲಾಗಲೇ ಎರಡು ಒಟಿಟಿ ಸಂಸ್ಥೆಗಳು ಇದರ ಪ್ರಸಾರ ಹಕ್ಕುಗಳನ್ನು ಕೊಂಡುಕೊಳ್ಳಲು ಮುಗಿಬಿದ್ದಿವೆ ಎನ್ನಲಾಗುತ್ತಿದೆ. ಈ ಕುರಿತು ‘ಇಂಡಿಯಾ ಟುಡೇ’ ವರದಿ ಮಾಡಿದೆ.
‘ಪುಷ್ಪ 2’ ಚಿತ್ರ ಮೊದಲು ಥಿಯೇಟರ್ನಲ್ಲಿ ಬಿಡುಗಡೆ ಆಗುತ್ತದೆ. ನಂತರ ಒಟಿಟಿಗೆ ಕಾಲಿಡುತ್ತದೆ. ಹಾಗಿದ್ದರೂ ಕೂಡ ಒಟಿಟಿ ಪ್ರಸಾರ ಹಕ್ಕುಗಳ ಬೆಲೆ ಬಹುಕೋಟಿ ರೂಪಾಯಿಗೆ ಮಾರಾಟ ಆಗಲಿದೆ. ಬೆಲೆ ಎಷ್ಟೇ ದುಬಾರಿ ಆದರೂ ಕೂಡ ಅದರಿಂದ ಲಾಭ ಆಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ‘ಅಮೇಜಾನ್ ಪ್ರೈಂ ವಿಡಿಯೋ’ ಮತ್ತು ‘ಡಿಸ್ನಿ ಪ್ಲಸ್ ಹಾಟ್ ಸ್ಟಾರ್’ ಸಂಸ್ಥೆಗಳು ‘ಪುಷ್ಪ 2’ ಚಿತ್ರದ ಒಟಿಟಿ ಹಕ್ಕನ್ನು ತಮ್ಮದಾಗಿಸಿಕೊಳ್ಳಲು ಜಿದ್ದಿಗೆ ಬಿದ್ದಿವೆ.
ಅಂತಿಮವಾಗಿ ‘ಪುಷ್ಪ 2’ ಸಿನಿಮಾದ ಒಟಿಟಿ ರೈಟ್ಸ್ ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಶೀಘ್ರದಲ್ಲೇ ಈ ಡೀಲ್ ಖುದುರಲಿದ್ದು, ಈ ಬಗ್ಗೆ ನಿರ್ಮಾಪಕರಿಂದ ಅಧಿಕೃತ ಘೋಷಣೆ ಆಗಲಿದೆ. ಅದ್ದೂರಿ ಬಜೆಟ್ನಲ್ಲಿ ‘ಪುಷ್ಪ 2’ ಚಿತ್ರ ಮೂಡಿಬರುತ್ತಿದೆ. ಅದರಲ್ಲೂ ‘ಕೆಜಿಎಫ್ 2’ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಬಳಿಕ ಅದನ್ನು ಮೀರಿಸುವ ರೀತಿಯಲ್ಲಿ ‘ಪುಷ್ಪ 2’ ಮಾಡಬೇಕು ಎಂಬ ಹಠದೊಂದಿಗೆ ಇಡೀ ಟೀಮ್ ಕೆಲಸ ಮಾಡುತ್ತಿದೆ ಎನ್ನಲಾಗಿದೆ. ಪ್ರತಿಷ್ಠಿತ ‘ಮೈತ್ರಿ ಮೂವೀ ಮೇಕರ್ಸ್’ ಮೂಲಕ ಈ ಚಿತ್ರ ನಿರ್ಮಾಣ ಆಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:58 am, Tue, 17 May 22