‘ನಾನು ಹಿಂದಿ ಹೀರೋ’ ಎಂದು ಗರ್ವ ತೋರಿಸಿ ಸೋತ ಜಾನ್​ ಅಬ್ರಾಹಂ ಸಿನಿಮಾಗೆ ಈಗ ಒಟಿಟಿ ಮಾತ್ರ ಗತಿ

‘ನಾನು ಹಿಂದಿ ಹೀರೋ’ ಎಂದು ಗರ್ವ ತೋರಿಸಿ ಸೋತ ಜಾನ್​ ಅಬ್ರಾಹಂ ಸಿನಿಮಾಗೆ ಈಗ ಒಟಿಟಿ ಮಾತ್ರ ಗತಿ
ಜಾನ್ ಅಬ್ರಾಹಂ

Attack Movie OTT Release Date: ಚಿತ್ರಮಂದಿರದಲ್ಲಿ ಏ.1ರಂದು ಬಿಡುಗಡೆ ಆಗಿದ್ದ ಜಾನ್​ ಅಬ್ರಾಹಂ ನಟನೆಯ ‘ಅಟ್ಯಾಕ್​’ ಸಿನಿಮಾವನ್ನು ಜನರು ಮೆಚ್ಚಿಕೊಳ್ಳಲಿಲ್ಲ. ಈಗ ಒಟಿಟಿಯಲ್ಲಿ ಈ ಚಿತ್ರ ರಿಲೀಸ್​ ಆಗುತ್ತಿದೆ.

TV9kannada Web Team

| Edited By: Madan Kumar

May 15, 2022 | 9:11 AM

ನಟ ಜಾನ್​ ಅಬ್ರಾಹಂ (John Abraham) ಅವರಿಗೆ ಬಾಲಿವುಡ್​ನಲ್ಲಿ ಬಹಳ ಬೇಡಿಕೆ ಇದೆ. ಅನೇಕ ಹಿಟ್​ ಸಿನಿಮಾಗಳನ್ನು ನೀಡಿರುವ ಅವರಿಗೆ ಅಪಾರ ಅಭಿಮಾನಿಗಳೂ ಇದ್ದಾರೆ. ಆದರೆ ಇತ್ತೀಚೆಗೆ ದಕ್ಷಿಣ ಭಾರತದಿಂದ ಜಾನ್​ ಅಬ್ರಹಾಂ ಅವರಿಗೆ ಭಾರಿ ಟೀಕೆ ಕೇಳಿಬಂದಿತ್ತು. ಅದಕ್ಕೆ ಕಾರಣ ಆಗಿದ್ದು ಅವರು ನೀಡಿದ ಒಂದೇ ಒಂದು ಹೇಳಿಕೆ. ‘ನಾನು ಹಿಂದಿ ಹೀರೋ. ಪ್ರಾದೇಶಿಕ ಸಿನಿಮಾ ಮಾಡಲ್ಲ’ ಎಂದು ಅವರು ಗರ್ವದಿಂದ ಮಾತನಾಡಿದ್ದರು. ಆ ಹೇಳಿಕೆ ನೀಡಿದ ಬಳಿಕ ಅವರ ‘ಅಟ್ಯಾಕ್​’ ಸಿನಿಮಾ (Attack Movie) ಚಿತ್ರಮಂದಿರದಲ್ಲಿ ರಿಲೀಸ್​ ಆಯ್ತು. ಅದು ಹೇಳ ಹೆಸರಿಲ್ಲದಂತೆ ಕೊಚ್ಚಿಕೊಂಡು ಹೋಯಿತು. ಬಾಕ್ಸ್​ ಆಫೀಸ್​ನಲ್ಲಿ ‘ಅಟ್ಯಾಕ್’​ ಸಿನಿಮಾ ಲೈಫ್​ ಟೈಮ್​ ಮಾಡಿದ ಕಲೆಕ್ಷನ್​ ಕೇವಲ 16 ಕೋಟಿ ರೂಪಾಯಿ. ಸೌತ್​ ಸಿನಿಮಾಗಳಾದ ‘ಆರ್​ಆರ್​ಆರ್​’ ಮತ್ತು ‘ಕೆಜಿಎಫ್​: ಚಾಪ್ಟರ್​ 2’ ಚಿತ್ರಗಳು ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿ ಬೀಗಿದವು. ಬಾಕ್ಸ್​ ಆಫೀಸ್​ನಲ್ಲಿ ಹೀನಾಯವಾಗಿ ಸೋತ ಬಳಿಕ ‘ಅಟ್ಯಾಕ್​’ ಚಿತ್ರಕ್ಕೆ ಉಳಿದಿದ್ದು ಒಟಿಟಿ (OTT Platform) ಆಯ್ಕೆ ಮಾತ್ರ. ಹೌದು, ಜೀ5 ಮೂಲಕ ಈ ಚಿತ್ರ ಪ್ರಸಾರಕ್ಕೆ ಸಜ್ಜಾಗಿದೆ. ಮೇ 27ರಂದು ವೀಕ್ಷಣೆಗೆ ಲಭ್ಯವಾಗಲಿದೆ.

ಚಿತ್ರಮಂದಿರದಲ್ಲಿ ಏ.1ರಂದು ‘ಅಟ್ಯಾಕ್​’ ಸಿನಿಮಾ ಬಿಡುಗಡೆ ಆಯಿತು. ಜಾನ್​ ಅಬ್ರಾಹಂ ಅವರು ಆ್ಯಕ್ಷನ್​ ಹೀರೋ ಅವತಾರದಲ್ಲಿ ಕಾಣಿಸಿಕೊಂಡರು. ಅವರ ಜೊತೆ ಜಾಕ್ವೆಲಿನ್​ ಫರ್ನಾಂಡಿಸ್​ ಮತ್ತು ರಾಕುಲ್​ ಪ್ರೀತ್​ ಸಿಂಗ್​ ಕೂಡ ನಟಿಸಿದ್ದಾರೆ. ಸೈನ್ಸ್​ ಫಿಕ್ಷನ್​ ಮಾದರಿಯಲ್ಲಿ ಮೂಡಿಬಂದ ಈ ಚಿತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಲೇ ಇಲ್ಲ. ಕನಿಷ್ಠ ಒಟಿಟಿಯಲ್ಲಾದರೂ ಜನರು ನೋಡಬಹುದು ಎಂಬ ಭರವಸೆಯೊಂದಿಗೆ ಪ್ರಸಾರ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಜಾನ್​ ಅಬ್ರಾಹಂ ಹೇಳಿದ್ದು ಏನು?

ಬಾಲಿವುಡ್​ ವರ್ಸಸ್​ ಸೌತ್​ ಸಿನಿಮಾ ಎಂಬ ಚರ್ಚೆ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಜಾನ್​ ಅಬ್ರಾಹಂ ಅವರಿಗೆ ಕೆಲವೇ ದಿನಗಳ ಹಿಂದೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸುವಾಗ ಅಹಂಕಾರದಿಂದ ಅವರು ಮಾತನಾಡಿದ್ದರು. ‘ನನಗೆ ರಾಜಮೌಳಿ ಬಗ್ಗೆ ಗೌರವ ಇದೆ. ಅದೇ ರೀತಿ ನಾವು ಏನು ಮಾಡಿದ್ದೇವೆ ಎನ್ನುವ ಬಗ್ಗೆ ಎಲ್ಲಕ್ಕಿಂತ ಹೆಚ್ಚಿನ ಗೌರವ ಇದೆ. ಖಂಡಿತವಾಗಿಯೂ ನಾವು ಎರಡನೇ ಸ್ಥಾನದಲ್ಲಿ ಇಲ್ಲ. ನಾನು ಎಂದಿಗೂ ಪ್ರಾದೇಶಿಕ ಸಿನಿಮಾ ಮಾಡುವುದಿಲ್ಲ. ನಾನು ಬಾಲಿವುಡ್​ ಹೀರೋ. ನಾನು ಅಲ್ಲಿ ನಟಿಸಬೇಕು ಎನ್ನುವ ಕಾರಣಕ್ಕೆ ಸೆಕೆಂಡ್ ಹೀರೋ ಆಗಿ ಹೋಗುವುದಿಲ್ಲ. ಇತರ ನಟರಂತೆ ತೆಲುಗು ಅಥವಾ ಯಾವುದೇ ರೀಜನಲ್​ ಸಿನಿಮಾ ಮಾಡೋಕೇ ಹೋಗಲ್ಲ’ ಎಂದಿದ್ದರು.

ಜಾನ್​ ಅಬ್ರಾಹಂ ನೀಡಿದ್ದ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ‘ಭಾರತದ ಎಲ್ಲ ಸ್ಟಾರ್​ ನಟರೂ ತಾವು ಇಂಡಿಯನ್​ ಸಿನಿಮಾ ಹೀರೋ ಎಂದು ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಆದರೆ ಜಾನ್​ ಅಬ್ರಾಹಂ ಅವರು ಹಿಂದಿ ಸಿನಿಮಾದ ಹೀರೋ ಅಂತ ಹೇಳಿಕೊಳ್ಳುತ್ತಾರೆ’ ಎಂದು ನೆಟ್ಟಿಗರು ಕಾಲೆಳೆದರು. ಎಲ್ಲ ಭಾಷೆಯ ಸಿನಿಮಾಗಳಿಗೂ ಮೊದಲು ಗೌರವ ಕೊಡುವುದನ್ನು ಕಲಿತುಕೊಳ್ಳಿ ಎಂದು ಜನರು ಜಾನ್​ ಅಬ್ರಾಹಂ ಅವರ ಕಿವಿ ಹಿಂಡಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada