ಸೌತ್​ ಸಿನಿಮಾ ಬಗ್ಗೆ ಹಗುರಾಗಿ ಮಾತಾಡಿದ್ದ ಜಾನ್​ ಅಬ್ರಾಹಂ; ‘ಆರ್​ಆರ್​ಆರ್​’ ಎದುರಲ್ಲಿ ಹೀನಾಯ ಸೋಲು

ಸೌತ್​ ಸಿನಿಮಾ ಬಗ್ಗೆ ಹಗುರಾಗಿ ಮಾತಾಡಿದ್ದ ಜಾನ್​ ಅಬ್ರಾಹಂ; ‘ಆರ್​ಆರ್​ಆರ್​’ ಎದುರಲ್ಲಿ ಹೀನಾಯ ಸೋಲು
ಜಾನ್​ ಅಬ್ರಾಹಂ, ಜ್ಯೂ. ಎನ್​ಟಿಆರ್​

John Abraham | Attack Movie: ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಜಾನ್​ ಅಬ್ರಾಹಂ ಅವರಿಗೆ ಕೆಲವೇ ದಿನಗಳಲ್ಲಿ ಸತ್ಯ ದರ್ಶನ ಆಗಿದೆ. ‘ಆರ್​ಆರ್​ಆರ್’ ಎದುರಲ್ಲಿ ‘ಅಟ್ಯಾಕ್​’ ಸೋತಿದೆ.

TV9kannada Web Team

| Edited By: Madan Kumar

Apr 03, 2022 | 1:24 PM

ಭಾರತೀಯ ಚಿತ್ರರಂಗದ ಸ್ವರೂಪ ಬದಲಾಗುತ್ತಿದೆ. ಒಂದು ಕಾಲದಲ್ಲಿ ಇಡೀ ದೇಶದ ತುಂಬ ಬಾಲಿವುಡ್​ (Bollywood) ಸಿನಿಮಾಗಳ ಹವಾ ಇತ್ತು. ಯಾವುದಾದರೂ ದೊಡ್ಡ ಹಿಂದಿ ಸಿನಿಮಾ ರಿಲೀಸ್​ ಆಗುತ್ತಿದೆ ಎಂದಾಗ ದಕ್ಷಿಣ ಭಾರತದ ಸ್ಟಾರ್​ ನಟರ ಸಿನಿಮಾಗಳು ಕೂಡ ಚಿತ್ರಮಂದಿರ ಬಿಟ್ಟುಕೊಡಬೇಕಾದ ಅನಿವಾರ್ಯತೆ ಇತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ದಕ್ಷಿಣದ ಭಾರತದ ದೊಡ್ಡ ಸಿನಿಮಾಗಳ ಎದುರು ಪೈಪೋಟಿ ನೀಡಲು ಬಾಲಿವುಡ್​ ಚಿತ್ರಗಳು ಹಿಂದೇಟು ಹಾಕುವಂತಾಗಿದೆ. ಅದನ್ನು ಹಿಂದಿ ಸಿನಿಮಾ ನಟರು ಕೂಡ ಒಪ್ಪಿಕೊಂಡಿದ್ದಾರೆ. ಆದರೆ ನಟ ಜಾನ್​ ಅಬ್ರಾಹಂ (John Abraham) ಅವರಿಗೆ ಸೌತ್​ ಸಿನಿಮಾಗಳ ಬಗ್ಗೆ ಯಾಕೋ ಸ್ವಲ್ಪ ಅಸಡ್ಡೆ ಇದ್ದಂತಿದೆ. ಇತ್ತೀಚೆಗೆ ಅವರು ನೀಡಿದ್ದ ಒಂದು ಹೇಳಿಕೆಯೇ ಅದಕ್ಕೆ ಸಾಕ್ಷಿ. ‘ತೆಲುಗು ಅಥವಾ ಯಾವುದೇ ದಕ್ಷಿಣ ಭಾರತದ ಭಾಷೆಯ ಸಿನಿಮಾದಲ್ಲಿ ನಾನು ನಟಿಸಲ್ಲ’ ಎಂದು ಜಾನ್​ ಅಬ್ರಾಹಂ ಅವರು ಕೆಲವೇ ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಆದರೆ ಈಗ ಅವರು ತೆಲುಗಿನ ‘ಆರ್​ಆರ್​ಆರ್​’ ಸಿನಿಮಾ (RRR Movie) ಎದುರಿನಲ್ಲಿಯೇ ಹೀನಾಯವಾಗಿ ಸೋಲುವಂತಾಗಿದೆ. ಅದನ್ನು ಕಂಡು ಜಾನ್​ ಅಬ್ರಾಹಂ ಅವರನ್ನು ಜನರು ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದಾರೆ.

ಜಾನ್​ ಅಬ್ರಾಹಂ ನಟನೆಯ ‘ಅಟ್ಯಾಕ್​’ ಸಿನಿಮಾ ಏ.1ರಂದು ತೆರೆಕಂಡಿತು. ಈ ಸಿನಿಮಾದ ಪ್ರಚಾರದ ವೇಳೆ ಅವರು ಈ ರೀತಿಯ ಹೇಳಿಕೆ ನೀಡಿದ್ದರು. ‘ನಾನು ಎಂದಿಗೂ ಪ್ರಾದೇಶಿಕ ಸಿನಿಮಾ ಮಾಡುವುದಿಲ್ಲ. ನಾನು ಹಿಂದಿ ಸಿನಿಮಾ ಹೀರೋ. ಪ್ರಾದೇಶಿಕ ಭಾಷೆಯಲ್ಲಿ ನಾನು ಸೆಕೆಂಡ್​ ಹೀರೋ ಪಾತ್ರ ಮಾಡಲ್ಲ. ಬಿಸ್ನೆಸ್​ ಮಾಡುವ ಸಲುವಾಗಿ ತೆಲುಗು ಅಥವಾ ಯಾವುದೇ ಪ್ರಾದೇಶಿಕ ಭಾಷೆಯ ಚಿತ್ರದಲ್ಲಿ ನಾನು ನಟಿಸಲ್ಲ’ ಎಂದು ಜಾನ್​ ಅಬ್ರಾಹಂ ಹೇಳಿಕೆ ನೀಡಿದ್ದರು.

‘ಅಟ್ಯಾಕ್​’ ಸಿನಿಮಾ ಮೇಲೆ ಜಾನ್​ ಅಬ್ರಾಹಂ ಅವರು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅದು ಹುಸಿ ಆಗಿದೆ. ಮೊದಲ ದಿನ ಕೇವಲ 3.5 ಕೋಟಿ ರೂಪಾಯಿ ಗಳಿಸಿದ ಈ ಸಿನಿಮಾ ಸೋಲುವ ಸೂಚನೆ ಸಿಕ್ಕಿದೆ. ವೀಕೆಂಡ್​ನಲ್ಲೂ ಈ ಸಿನಿಮಾಗೆ ಹೇಳಿಕೊಳ್ಳುವಂತಹ ಕಲೆಕ್ಷನ್​ ಆಗಿಲ್ಲ. ಅದರ ಬದಲು ಜನರು ‘ಆರ್​ಆರ್​ಆರ್​’ ಸಿನಿಮಾವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಹಾಗಾಗಿ ‘ಅಟ್ಯಾಕ್​’ ಸಿನಿಮಾಗೆ ‘ಆರ್​ಆರ್​ಆರ್’ ಚಿತ್ರ ಟಫ್​ ಸ್ಪರ್ಧೆ ನೀಡಿದೆ.

ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಜಾನ್​ ಅಬ್ರಾಹಂ ಅವರಿಗೆ ಕೆಲವೇ ದಿನಗಳಲ್ಲಿ ಸತ್ಯ ದರ್ಶನ ಆಗಿದೆ. ‘ಆರ್​ಆರ್​ಆರ್’ ಎದುರಲ್ಲಿ ‘ಅಟ್ಯಾಕ್​’ ಸೋತಿದೆ. ಇದನ್ನು ನೋಡಿದ ಜನರು ಹಿಗ್ಗಾಮುಗ್ಗ ಟ್ರೋಲ್ ಮಾಡುತ್ತಿದ್ದಾರೆ. ‘ತೆಲುಗಿನಲ್ಲಿ ಬಿಗ್​ ಬಜೆಟ್​ ಸಿನಿಮಾ ಬರುತ್ತದೆ. ತಮಿಳು ಸಿನಿಮಾದಲ್ಲಿ ಆ್ಯಕ್ಷನ್​ ಭರ್ಜರಿಯಾಗಿ ಇರುತ್ತದೆ. ಮಲಯಾಳಂ ಸಿನಿಮಾಗಳ ಕಂಟೆಂಟ್​ ಸೂಪರ್​ ಆಗಿರುತ್ತದೆ. ಕನ್ನಡ ಸಿನಿಮಾಗಳ ಕಾನ್ಸೆಪ್ಟ್​ ವಿಶೇಷವಾಗಿ ಇರುತ್ತದೆ. ಇಂಥ ಸಿನಿಮಾಗಳಲ್ಲಿ ನೀವು ನಟಿಸಬೇಕು ಎಂದು ಆಸೆಪಟ್ಟರೂ ಕೂಡ ಈಗ ನಿಮಗೆ ಯಾರೂ ಅವಕಾಶ ಕೊಡಲ್ಲ’ ಎಂದು ನೆಟ್ಟಿಗರೊಬ್ಬರು ಜಾನ್​ ಅಬ್ರಾಹಂಗೆ ತಿವಿದಿದ್ದಾರೆ.

‘ಭಾರತದ ಎಲ್ಲ ಸ್ಟಾರ್​ ನಟರೂ ತಾವು ಇಂಡಿಯನ್​ ಸಿನಿಮಾ ಹೀರೋ ಎಂದು ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಆದರೆ ಜಾನ್​ ಅಬ್ರಾಹಂ ಅವರು ಹಿಂದಿ ಸಿನಿಮಾದ ಹೀರೋ ಅಂತ ಹೇಳಿಕೊಳ್ಳುತ್ತಾರೆ’ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಎಲ್ಲ ಭಾಷೆಯ ಸಿನಿಮಾಗಳಿಗೂ ಮೊದಲು ಗೌರವ ಕೊಡುವುದನ್ನು ಕಲಿತುಕೊಳ್ಳಿ ಎಂದು ಜನರು ಜಾನ್​ ಅಬ್ರಾಹಂ ಅವರ ಕಿವಿ ಹಿಂಡಿದ್ದಾರೆ. ಸದ್ಯ ಈ ಬೆಳವಣಿಗೆಯ ಬಗ್ಗೆ ಜಾನ್​ ಅಬ್ರಾಹಂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ:

ಸೋಲಿಲ್ಲದ ಸರದಾರ ರಾಜಮೌಳಿ ಗೆಲುವಿನ ಗುಟ್ಟೇನು? ಇಲ್ಲಿವೆ ‘ಆರ್​ಆರ್​ಆರ್​’ ನಿರ್ದೇಶಕನ 5 ಸೂತ್ರಗಳು

RRR ಕಲೆಕ್ಷನ್​ ರಿಪೋರ್ಟ್​ ಸುಳ್ಳು ಎಂದ ಕಮಾಲ್​ ಆರ್​ ಖಾನ್​; ಸಾಬೀತು ಮಾಡುವುದಾಗಿ ಘೋಷಣೆ

Follow us on

Related Stories

Most Read Stories

Click on your DTH Provider to Add TV9 Kannada