RRR ಕಲೆಕ್ಷನ್ ರಿಪೋರ್ಟ್ ಸುಳ್ಳು ಎಂದ ಕಮಾಲ್ ಆರ್ ಖಾನ್; ಸಾಬೀತು ಮಾಡುವುದಾಗಿ ಘೋಷಣೆ
RRR Movie Box Office Collection: ವಿವಾದಗಳಿಗೂ ಕಮಾಲ್ ಆರ್. ಖಾನ್ ಅವರಿಗೂ ಎಲ್ಲಿಲ್ಲದ ನಂಟು. ಈಗ ಅವರು ‘ಆರ್ಆರ್ಆರ್’ ಚಿತ್ರತಂಡದ ವಿಶ್ವಾಸಾರ್ಹತೆಗೆ ಧಕ್ಕೆ ಆಗುವಂತಹ ಹೇಳಿಕೆ ನೀಡಿದ್ದಾರೆ.
ಸ್ವಯಂ ಘೋಷಿತ ವಿಮರ್ಶಕ ಕಮಾಲ್ ಆರ್. ಖಾನ್ (Kamaal R Khan) ಅವರು ದಿನಕ್ಕೊಂದು ಶಾಕಿಂಗ್ ಹೇಳಿಕೆ ನೀಡುತ್ತಲೇ ಇರುತ್ತಾರೆ. ಅನೇಕ ಸ್ಟಾರ್ ಸೆಲೆಬ್ರಿಟಿಗಳನ್ನು ಅವರು ಎದುರು ಹಾಕಿಕೊಂಡಿದ್ದಾರೆ. ಈಗ ಅವರ ಕಣ್ಣು ‘ಆರ್ಆರ್ಆರ್’ ಸಿನಿಮಾ (RRR Movie) ಮೇಲೆ ಬಿದ್ದಿದೆ. ರಾಮ್ ಚರಣ್, ಜ್ಯೂ. ಎನ್ಟಿಆರ್, ಆಲಿಯಾ ಭಟ್, ಅಜಯ್ ದೇವಗನ್ ಮುಂತಾದವರು ನಟಿಸಿರುವ ಈ ಸಿನಿಮಾಗೆ ಭರ್ಜರಿ ಕಲೆಕ್ಷನ್ ಆಗುತ್ತಿದೆ. 700 ಕೋಟಿ ರೂಪಾಯಿಗಿಂತಲೂ ಹೆಚ್ಚು ಗಳಿಕೆ ಮಾಡಿ ಈ ಸಿನಿಮಾ ಮುನ್ನುಗ್ಗುತ್ತಿದೆ. ಆದರೆ ಈ ಕಲೆಕ್ಷನ್ ರಿಪೋರ್ಟ್ (RRR Movie Box Office Collection) ಸುಳ್ಳು ಎಂದು ಕಮಾಲ್ ಆರ್. ಖಾನ್ ವಾದ ಮಾಡುತ್ತಿದ್ದಾರೆ. ಈ ಕುರಿತಾಗಿ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ಕಂಡು ರಾಜಮೌಳಿ ಅಭಿಮಾನಿಗಳು ಗರಂ ಆಗಿದ್ದಾರೆ. ಕಮಾಲ್ ಆರ್. ಖಾನ್ ಅವರ ಮಾತುಗಳನ್ನು ಅನೇಕರು ವಿರೋಧಿಸಿದ್ದಾರೆ. ಈ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ನಿಜಕ್ಕೂ ‘ಆರ್ಆರ್ಆರ್’ ಸಿನಿಮಾದ ಗಲ್ಲಾಪೆಟ್ಟಿಗೆ ಗಳಿಕೆ ಎಷ್ಟು ಎಂಬ ಬಗ್ಗೆ ಅನುಮಾನ ವ್ಯಕ್ತವಾಗುವ ರೀತಿಯಲ್ಲಿ ಕಮಾಲ್ ಆರ್. ಖಾನ್ ಅವರು ಟ್ವೀಟ್ ಮಾಡಿದ್ದಾರೆ.
ವಿವಾದಗಳಿಗೂ ಕಮಾಲ್ ಆರ್. ಖಾನ್ ಅವರಿಗೂ ಎಲ್ಲಿಲ್ಲದ ನಂಟು. ಈಗ ಅವರು ‘ಆರ್ಆರ್ಆರ್’ ಚಿತ್ರತಂಡದ ವಿಶ್ವಾಸಾರ್ಹತೆಗೆ ಧಕ್ಕೆ ಆಗುವಂತಹ ಹೇಳಿಕೆ ನೀಡಿದ್ದಾರೆ. ಮಾ.25ರಂದು ಬಿಡುಗಡೆಯಾದ ಈ ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಂಡಿದೆ. ಈವರೆಗೂ ವಿಶ್ವಾದ್ಯಂತ 710 ಕೋಟಿ ರೂಪಾಯಿಗಿಂತಲೂ ಅಧಿಕ ಕಲೆಕ್ಷನ್ ಆಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಆದರೆ ಅದನ್ನು ಕಮಾಲ್ ಆರ್. ಖಾನ್ ಪ್ರಶ್ನಿಸಿದ್ದಾರೆ.
‘ಜನರು ಆರ್ಆರ್ಆರ್ ಸಿನಿಮಾವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಇದೊಂದು ದುರಂತ. ಆದರೆ ನಿರ್ಮಾಪಕರು ಸುಳ್ಳು ಹೈಪ್ ಸೃಷ್ಟಿ ಮಾಡಿಸಿದ್ದಾರೆ. ಅದನ್ನು ನಾನು ನನ್ನ ಮುಂದಿನ ವಿಮರ್ಶೆಯಲ್ಲಿ ಸಾಬೀತು ಮಾಡುತ್ತೇನೆ. 680 ಕೋಟಿ ರೂಪಾಯಿ ಬಜೆಟ್ ಲೆಕ್ಕಾಚಾರ ಹೇಗೆ ಮಾಡಬೇಕು ಅಂತ ಜನರಿಗೆ ಗೊತ್ತಿಲ್ಲ’ ಎಂದು ಕಮಾಲ್ ಆರ್. ಖಾನ್ ಟ್ವೀಟ್ ಮಾಡಿದ್ದಾರೆ.
ರಾಜಮೌಳಿ ಅಭಿಮಾನಿಗಳು ಕಮಾಲ್ ಆರ್. ಖಾನ್ ಅವರ ಮಾತನ್ನು ವಿರೋಧಿಸಿದ್ದಾರೆ. ಅಲ್ಲದೆ, ಕಟುವಾಗಿ ಕಮೆಂಟ್ ಮಾಡುವ ಮೂಲಕ ಪ್ರತ್ಯುತ್ತರ ನೀಡಿದ್ದಾರೆ. ‘ದಕ್ಷಿಣ ಭಾರತದ ಸಿನಿಮಾಗಳ ಗೆಲುವಿನ ಬಗ್ಗೆ ನಿಮಗೆ ಯಾಕೆ ಹೊಟ್ಟೆಕಿಚ್ಚು’ ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ. ‘ನಿಮ್ಮ ಹುಚ್ಚಾಟ ನಿಲ್ಲಿಸಿ. ನಾನು ಇಂದು ಸಿನಿಮಾ ನೋಡಲು ಹೋಗಿದ್ದೆ. ಚಿತ್ರಮಂದಿರ ಹೌಸ್ಫುಲ್ ಆಗಿತ್ತು. ಜನರು ಸಿನಿಮಾ ನೋಡುತ್ತ ಎಂಜಾಯ್ ಮಾಡುತ್ತಿದ್ದರು. ನಾನು ಎರಡನೇ ಬಾರಿಗೆ ಸಿನಿಮಾ ನೋಡಲು ಹೋಗಿದ್ದೆ. ಆದರೂ ಸಹ ಖುಷಿ ನೀಡಿತು. ಕೊನೆಯ ದೃಶ್ಯ ರೋಮಾಂಚಕವಾಗಿತ್ತು’ ಎಂದು ಪ್ರೇಕ್ಷಕರೊಬ್ಬರು ತಮ್ಮ ಅನಿಸಿಕೆ ತಿಳಿಸಿದ್ದಾರೆ.
Public has totally rejected #RRR and it’s a disaster. But makers are creating fake hype from fake reporting by paid media. So I will prove in my next review that it’s already a disaster. People know nothing how to calculate huge budget of ₹680Cr!
— KRK (@kamaalrkhan) March 31, 2022
‘ಬಾಹುಬಲಿ 1’ ಮತ್ತು ‘ಬಾಹುಬಲಿ 2’ ಸಿನಿಮಾಗಳ ದುಪ್ಪಟ್ಟು ಬಜೆಟ್ನಲ್ಲಿ ‘ಆರ್ಆರ್ಆರ್’ ಸಿಮಾ ಸಿದ್ಧವಾಗಿದೆ ಎಂಬುದು ಕಮಾಲ್ ಆರ್. ಖಾನ್ ಅವರ ವಾದ. ಅದನ್ನು ಕೂಡ ಜನರು ಅಲ್ಲಗಳೆದಿದ್ದಾರೆ. ‘ಆ ಎರಡೂ ಸಿನಿಮಾಗಳ ಒಟ್ಟು ಬಜೆಟ್ 450 ಕೋಟಿ ರೂಪಾಯಿ. ಅದರ ಡಬಲ್ ಎಂದರೆ 900 ಕೋಟಿ ರೂಪಾಯಿ ಆಗುತ್ತದೆ. ಆರ್ಆರ್ಆರ್ ಚಿತ್ರಕ್ಕೆ ಅಷ್ಟು ಬಜೆಟ್ ಆಗಿಲ್ಲ’ ಎಂದು ಜನರು ಕಮಾಲ್ ಆರ್. ಖಾನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ದೊಡ್ಡ ಸಿನಿಮಾಗಳ ಬಗ್ಗೆ ಮತ್ತು ಸ್ಟಾರ್ ಕಲಾವಿದರ ಬಗ್ಗೆ ಕಮಾಲ್ ಆರ್. ಖಾನ್ ಈ ರೀತಿ ಹೇಳಿಕೆಗಳನ್ನು ನೀಡಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಅವರು ಸಲ್ಮಾನ್ ಖಾನ್, ಶಾರುಖ್ ಖಾನ್ ಸೇರಿದಂತೆ ಅನೇಕ ಹೀರೋಗಳ ಬಗ್ಗೆ ಕೊಂಕು ನುಡಿದು ಸುದ್ದಿ ಆಗಿದ್ದುಂಟು. ಪದೇ ಪದೇ ಇದೇ ಚಾಳಿ ಮುಂದುವರಿಸುತ್ತಿರುವ ಅವರ ಮಾತನ್ನು ಕೆಲವು ಸೆಲೆಬ್ರಿಟಿಗಳು ಗಂಭೀರವಾಗಿ ಪರಿಗಣಿಸುವುದಿಲ್ಲ.
ಇದನ್ನೂ ಓದಿ:
ಸಲ್ಮಾನ್ ಖಾನ್ ವಿರುದ್ಧ ಯಾವುದೇ ಹೇಳಿಕೆ ನೀಡಬೇಡಿ; ಕಮಾಲ್ ಆರ್ ಖಾನ್ಗೆ ಕೋರ್ಟ್ ಆದೇಶ
‘ಭಕ್ತರ ಭಕ್ತ ಮಹಾಭಕ್ತ’, ‘ಕಾಶ್ಮೀರದ ಶರ್ಮಾ’: ಖಾನ್ ಚಿತ್ರಕ್ಕೆ ಹೊಸ ಹೆಸರು ಸೂಚಿಸಿದ ಇನ್ನೊಬ್ಬ ಖಾನ್